Asianet Suvarna News Asianet Suvarna News

90% ವಚನ ವಂಚನೆ: ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಅಭಿಯಾನ

ರಾಜ್ಯ ಕಾಂಗ್ರೆಸ್‌ ಪಕ್ಷವು ಬಿಜೆಪಿ ವಚನ ಭ್ರಷ್ಟತೆ, ಭ್ರಷ್ಟಾಚಾರ ಮಾಡಿದೆ ಹಾಗೂ ಅಧಿಕಾರ ವೈಫಲ್ಯ ಅನುಭವಿಸಿದೆ ಎಂದು ‘90% ವಚನ ವಂಚನೆ’ ಹೆಸರಿನಲ್ಲಿ ಸರ್ಕಾರವನ್ನು ಪ್ರಶ್ನಿಸುವ ಜನ ಜಾಗೃತಿ ಅಭಿಯಾನಕ್ಕೆ ಸೋಮವಾರ ಅಧಿಕೃತ ಚಾಲನೆ ನೀಡಿದೆ. 

Congress Campaign Against Bjp Government gvd
Author
First Published Aug 30, 2022, 4:00 AM IST

ಬೆಂಗಳೂರು (ಆ.30): ರಾಜ್ಯ ಕಾಂಗ್ರೆಸ್‌ ಪಕ್ಷವು ಬಿಜೆಪಿ ವಚನ ಭ್ರಷ್ಟತೆ, ಭ್ರಷ್ಟಾಚಾರ ಮಾಡಿದೆ ಹಾಗೂ ಅಧಿಕಾರ ವೈಫಲ್ಯ ಅನುಭವಿಸಿದೆ ಎಂದು ‘90% ವಚನ ವಂಚನೆ’ ಹೆಸರಿನಲ್ಲಿ ಸರ್ಕಾರವನ್ನು ಪ್ರಶ್ನಿಸುವ ಜನ ಜಾಗೃತಿ ಅಭಿಯಾನಕ್ಕೆ ಸೋಮವಾರ ಅಧಿಕೃತ ಚಾಲನೆ ನೀಡಿದೆ. ‘ನಿಮ್ಮ ಹತ್ತಿರ ಇದೆಯಾ ಉತ್ತರ’ ಹೆಸರಿನಲ್ಲಿ ಸರಣಿ ಪ್ರಶ್ನೆಗಳನ್ನು ಕೇಳುವ ಅಭಿಯಾನಕ್ಕೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೆಪಿಸಿಸಿ ಕಚೇರಿಯಲ್ಲಿ ಚಾಲನೆ ನೀಡಿದರು. ಈ ಕುರಿತು ಪೋಸ್ಟರ್‌, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲು ಕ್ರಿಯಾತ್ಮಕ ವಿಡಿಯೋಗಳನ್ನೂ ಬಿಡುಗಡೆ ಮಾಡಲಾಯಿತು. ತನ್ಮೂಲಕ ಸರ್ಕಾರದ ವಿರುದ್ಧ ಮತ್ತೊಂದು ಹಂತದ ಹೋರಾಟಕ್ಕೆ ನಾಂದಿ ಹಾಡಿದರು.

ಬಿಜೆಪಿಯು ಅಧಿಕಾರದ ಪಟ್ಟಕ್ಕೇರಲು ವಚನಗಳ ಅಸ್ತ್ರ ಬಳಸಿ ಭೂಮಿಯ ಮೇಲೆ ಸ್ವರ್ಗ ಸೃಷ್ಟಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಜನತೆಗೆ 600 ಭರವಸೆ ನೀಡಿದ್ದ ಬಿಜೆಪಿಯು ಕೇಂದ್ರದಲ್ಲಿ ಎಂಟು ವರ್ಷ, ರಾಜ್ಯದಲ್ಲಿ ಮೂರು ವರ್ಷ ಅಧಿಕಾರ ನಡೆಸಿದರೂ ಶೇ.10ರಷ್ಟುಭರವಸೆ ಮಾತ್ರ ಈಡೇರಿಸಿದೆ. ಹೀಗಾಗಿ ಶೇ.90 ರಷ್ಟುಭರವಸೆ ಈಡೇರಿಸದ ‘90 ಪರ್ಸೆಂಟೇಜ್‌ ವಚನ ವಂಚನೆ’ ಸರ್ಕಾರಕ್ಕೆ ಇದು ಉತ್ತರಿಸುವ ಸಮಯ. ರಾಜ್ಯದ ಜನರಿಗೆ ಉತ್ತರಿಸುವ ತಾಕತ್ತು ಬಿಜೆಪಿಗೆ ಇದೆಯೇ? ಎಂದು ಕಾಂಗ್ರೆಸ್‌ ನಾಯಕರು ಪ್ರಶ್ನಿಸಿದರು.

ಬುಲ್‌ ಬುಲ್ ಪಕ್ಷಿ ಮೇಲೆ ಸಾವರ್ಕರ್ ಸವಾರಿ: ಸ್ಪಷ್ಟನೆ ಕೊಟ್ಟ ಸಿಟಿ ರವಿ

ಪ್ರತಿದಿನ ಒಂದೊಂದು ಪ್ರಶ್ನೆ- ಡಿಕೆಶಿ: ಡಿ.ಕೆ. ಶಿವಕುಮಾರ್‌ ಮಾತನಾಡಿ, ಬಿಜೆಪಿಯಿಂದ ‘ವಚನ’ ವಂಚನೆಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿ ಅವರ ಪ್ರಣಾಳಿಕೆ ಜನರ ಮುಂದಿಡುತ್ತಿದ್ದೇವೆ. ಪ್ರತಿಯೊಬ್ಬ ಕಾಂಗ್ರೆಸ್‌ ನಾಯಕರು ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಖಾತೆ ಮೂಲಕ ಹಾಗೂ ಮಾಧ್ಯಮದ ಮೂಲಕ ಪ್ರಶ್ನಿಸುವ ಕಾರ್ಯ ಆರಂಭಿಸುತ್ತಾರೆ. ಬಿಜೆಪಿಯವರು ಸುಳ್ಳಿನ ಸರದಾರರು. ಈವರೆಗೆ ನೀಡಿರುವ ಸುಳ್ಳು ಭರವಸೆಗಳ ಬಗ್ಗೆ ಪ್ರತಿ ದಿನ ಒಂದೊಂದು ಪ್ರಶ್ನೆ ಕೇಳುತ್ತೇವೆ ಎಂದು ಸವಾಲು ಹಾಕಿದರು. ಇದೇ ವೇಳೆ ನಿಮ್ಮ ಬಳಿ ಉತ್ತರ ಇದೆಯೇ? ಎಂದೂ ಬಿಜೆಪಿಯನ್ನು ಪ್ರಶ್ನಿಸಿದರು. ಕಾಂಗ್ರೆಸ್‌ ನಾಯಕರು ಎಲ್ಲರೂ ಒಟ್ಟಾಗಿ ಕೇಳುತ್ತಿರುವ ಏಕೈಕ ಪ್ರಶ್ನೆ ‘ನಮ್ಮ ಪ್ರಶ್ನೆಗೆ ನಿಮ್ಮ ಬಳಿ ಉತ್ತರ ಇದೆಯಾ?’ ಎಂಬುದು. ನಿಮ್ಮ ಪ್ರಣಾಳಿಕೆ ವಂಚನೆಗಳ ಸರಮಾಲೆ. ಕರ್ನಾಟಕವನ್ನು ಭ್ರಷ್ಟಾಚಾರದ ರಾಷ್ಟ್ರ ರಾಜಧಾನಿಯನ್ನಾಗಿ ಮಾಡಲಾಗಿದೆ ಎಂಬುದನ್ನು ಜನರ ಮುಂದಿಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

90% ವಂಚನೆ ಸರ್ಕಾರ- ಸಿದ್ದು: ಸಿದ್ದರಾಮಯ್ಯ ಮಾತನಾಡಿ, ವಚನ ಭ್ರಷ್ಟತೆ, ಅಧಿಕಾರ ವೈಫಲ್ಯ ಮುಚ್ಚಿಕೊಳ್ಳಲು ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು ತಪ್ಪಿಸಿಕೊಳ್ಳುತ್ತಿರುವ ಬಿಜೆಪಿಯು ರಾಜ್ಯದ ಜನತೆಗೆ ಉತ್ತರ ನೀಡುವ ಸಮಯ ಬಂದಿದೆ. ನುಡಿದಂತೆ ನಡೆದಿದ್ದೀರಾ? ಎಂಬುದನ್ನು ಬಿಜೆಪಿ ಉತ್ತರಿಸಬೇಕಿದೆ ಎಂದು ಹೇಳಿದರು. 2013ರಲ್ಲಿ ಅಧಿಕಾರಕ್ಕೆ ಬಂದ ನಾವು 165 ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದೆವು. ಐದು ವರ್ಷಗಳ ಅವಧಿಯಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಆದರೆ, 2018ರಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ‘ಕರ್ನಾಟಕಕ್ಕೆ ನಮ್ಮ ವಚನ’ ಎಂಬ ಘೋಷವ್ಯಾಕ್ಯದಡಿ 600 ಭರವಸೆ ನೀಡಿತ್ತು. ಇದರಲ್ಲಿ ಶೇ.10ರಷ್ಟನ್ನೂ ಈಡೇರಿಸಿಲ್ಲ. ತನ್ಮೂಲಕ ಶೇ.90 ರಷ್ಟುಜನರಿಗೆ ಮೋಸ ಮಾಡಿದ್ದಾರೆ. ಇದು ವಚನಗಳ ವಂಚನೆ ಹಾಗೂ ಜನರಿಗೆ ಮಾಡಿರುವ ದ್ರೋಹವಲ್ಲವೇ? ಎಂದು ಪ್ರಶ್ನಿಸಿದರು.

40% ಕಮಿಷನ್‌ ಸರ್ಕಾರ ಎಂಬ ಬಿರುದು: ಜನರಿಗೆ ನೀಡಿದ ವಚನ ಈಡೇರಿಸದ ಸರ್ಕಾರ 40 ಪರ್ಸೆಂಟ್‌ ಕಮಿಷನ್‌ ಮೂಲಕ ರಾಜ್ಯಕ್ಕೆ ಕೆಟ್ಟಹೆಸರು ತಂದಿದೆ. ಜತೆಗೆ ಸಾಲದ ಪ್ರಮಾಣವನ್ನು 5.40 ಲಕ್ಷ ಕೋಟಿ ರು.ಗೆ ಮುಟ್ಟಿಸಿ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಿದೆ. ದೇಶಕಂಡ ಅತಿ ಭ್ರಷ್ಟಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಹೆಸರು ಪಡೆದಿದ್ದಾರೆ. ಅವರ ಸಂಪುಟದ ಸಹೋದ್ಯೋಗಿ ಮಾಧುಸ್ವಾಮಿ ಅವರೇ ಸರ್ಕಾರದ ಸತ್ಯ ಒಪ್ಪಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.

ರಾಜ್ಯಾದ್ಯಂತ ಪ್ರಶ್ನಿಸುವ ಕೆಲಸ ಆರಂಭ: ರಣದೀಪ್‌ ಸಿಂಗ್‌ ಸುರ್ಜೇವಾಲಾ ಮಾತನಾಡಿ, 2018ರ ಚುನಾವಣೆ ವೇಳೆ ನೀಡಿದ್ದ ಪ್ರಣಾಳಿಕೆಯಲ್ಲಿನ ಶೇ.90 ರಷ್ಟುಭರವಸೆ ಈಡೇರಿಸಿಲ್ಲ. ರೈತರ ಸಾಲ ಮನ್ನಾ, ಮಹಿಳೆಯರ ಸ್ತ್ರೀ ಉನ್ನತ ನಿಧಿ, ಕನ್ನಡ ನಾಡು ನುಡಿಗೆ ವಿಶ್ವವಿದ್ಯಾಲಯಗಳಲ್ಲಿ ಕಡ್ಡಾಯ ಕನ್ನಡ ಸೇರಿದಂತೆ ಯಾವುದನ್ನೂ ಈಡೇರಿಸಿಲ್ಲ. ಉದ್ಯೋಗ ಸೃಷ್ಟಿ, ಅಗತ್ಯ ವಸ್ತುಗಳ ಬೆಲೆ ಇಳಿಕೆ, ರೈತರ ಆದಾಯ ದ್ವಿಗಣ ಎಲ್ಲವೂ ಎಲ್ಲಿ? ಈ ಭರವಸೆಗಳನ್ನು ಯಾವಾಗ ಈಡೇರಿಸುತ್ತೀರಿ? ಎಂದು ಬಿಜೆಪಿಗೆ ಪ್ರಶ್ನಿಸಿದರು.

ಮುನಿಯಪ್ಪ ಓಲೈಸಲು ಕಾಂಗ್ರೆಸ್‌ ಕಸರತ್ತು, ರಾಜ್ಯ ಉಸ್ತುವಾರಿ ಸುರ್ಜೇವಾಲಾ ಭೇಟಿ

ರಾಜ್ಯದ ಪ್ರತಿಯೊಬ್ಬ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರ ನೀಡಿದ ಭರವಸೆಯನ್ನು ಯಾಕೆ ಈಡೇರಿಸಿಲ್ಲ ಎಂದು ಪ್ರಶ್ನಿಸುವ ಕಾರ್ಯ ಆರಂಭಿಸಬೇಕು. ರಾಜ್ಯದ ಎಲ್ಲಾ ಕಡೆ ಸರ್ಕಾರವನ್ನು ಪ್ರಶ್ನಿಸುವ ಕಾರ್ಯ ಆಗಬೇಕು ಎಂದು ಕರೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಜೆ. ಜಾಜ್‌ರ್‍, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌, ಕಾರ್ಯಾಧ್ಯಕ್ಷರಾದ ಸತೀಶ್‌ ಜಾರಕಿಹೊಳಿ, ಈಶ್ವರ್‌ ಖಂಡ್ರೆ ಸೇರಿ ಹಲವರು ಹಾಜರಿದ್ದರು.

Follow Us:
Download App:
  • android
  • ios