ಮುನಿಯಪ್ಪ ಓಲೈಸಲು ಕಾಂಗ್ರೆಸ್ ಕಸರತ್ತು, ರಾಜ್ಯ ಉಸ್ತುವಾರಿ ಸುರ್ಜೇವಾಲಾ ಭೇಟಿ
ಕಾಂಗ್ರೆಸ್‌ನಲ್ಲಿ ಮುನಿಸಿಕೊಂಡು ಬಿಜೆಪಿ ಸಚಿವರೊಂದಿಗೆ ಒಡನಾಟ ಆರಂಭಿಸಿರುವ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರ ಮನವೊಲಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಭಾನುವಾರ ಮುನಿಯಪ್ಪ ಮನೆಗೆ ಭೇಟಿ ನೀಡಿದ್ದರು.
ಬೆಂಗಳೂರು (ಆ.29): ಪಕ್ಷದ ನಿರ್ಧಾರಗಳ ಬಗ್ಗೆ ಮುನಿಸಿಕೊಂಡು ಅಂತರ ಕಾಯ್ದುಕೊಂಡಿರುವ ಹಾಗೂ ಬಿಜೆಪಿ ಸಚಿವರೊಂದಿಗೆ ಹೆಚ್ಚು ಒಡನಾಟ ಆರಂಭಿಸಿರುವ ಕೇಂದ್ರದ ಮಾಜಿ ಸಚಿವ ಕೆ. ಎಚ್. ಮುನಿಯಪ್ಪ ಅವರ ಮನವೊಲಿಕೆ ಸಲುವಾಗಿ ಭಾನುವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮುನಿಯಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಗುಲಾಂ ನಬಿ ಆಜಾದ್ ರಾಜೀನಾಮೆ ನೀಡಿ ಹೊಸ ಪಕ್ಷ ಕಟ್ಟಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಪರವಾಗಿ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಮುನಿಯಪ್ಪ ಅವರನ್ನು ಭೇಟಿ ಮಾಡಿ ಪಕ್ಷದಲ್ಲೇ ಉಳಿದುಕೊಳ್ಳುವಂತೆ ಮನವೊಲಿಸುವ ಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುನಿಯಪ್ಪ ಭೇಟಿ ಬಳಿಕ ಮಾತನಾಡಿದ ಸುರ್ಜೇವಾಲಾ, ಕೆ.ಎಚ್. ಮುನಿಯಪ್ಪ ನನ್ನ ಹಿರಿಯ ಸಹೋದರರಿದ್ದಂತೆ. ಅವರ ಮನೆ ನೋಡಬೇಕು ಎಂದು ಆಸೆಪಟ್ಟಿದ್ದೆ. ಅದರಂತೆ ಬಂದು ಮನೆ ನೋಡಿದ್ದೇನೆ. ಸಹಜವಾಗಿಯೇ ಮಾತುಕತೆಯನ್ನೂ ನಡೆಸಿದ್ದೇವೆ. ಇನ್ನೇನು ಬೇರೆ ಇಲ್ಲ. ಮುನಿಯಪ್ಪಗೆ ಯಾವುದೇ ಸಮಸ್ಯೆಯಿಲ್ಲ. ಅವರು ಸಮಸ್ಯೆಗೇ ಸಮಸ್ಯೆ ಸೃಷ್ಟಿಸುವಂತಹ ನಾಯಕ ಎಂದು ಹೇಳಿದರು.
ಇದೇ ವೇಳೆ ಎಐಸಿಸಿ ಸೂಚನೆ ಮೇರೆಗೆ ನಾನು ಇಲ್ಲಿಗೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ನಾನು ಮುನಿಯಪ್ಪ ಅವರ ಕುಟುಂಬದ ಸದಸ್ಯನಾಗಿ ಬಂದಿದ್ದೇನೆ ಅಷ್ಟೇ. ನನ್ನ ತಂದೆಯ ಕಾಲದಿಂದಲೂ ಅವರು ನನಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದೇವೆ ಎಂದಷ್ಟೇ ಹೇಳಿದರು.
ಮುನಿಯಪ್ಪ ಅವರು ಪಕ್ಷದಲ್ಲಿ ತಮ್ಮನ್ನು ಪರಿಗಣಿಸುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಜತೆಗೆ ತಮ್ಮ ಅಭಿಪ್ರಾಯ ಪಡೆಯದೆ ಮಾಜಿ ಶಾಸಕರಾದ ಡಾ.ಎಂ.ಸಿ. ಸುಧಾಕರ್, ಕೊತ್ತೂರು ಮಂಜುನಾಥ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದರ ಬಗ್ಗೆ ಮುನಿಸಿಕೊಂಡಿದ್ದರು. ಹೀಗಾಗಿ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡು ಬಹಿರಂಗವಾಗಿ ಮಾಜಿ ಸ್ಪೀಕರ್ ಕೆ.ಆರ್. ರಮೇಶ್‌ಕುಮಾರ್ ವಿರುದ್ಧ ಹೇಳಿಕೆ ನೀಡುತ್ತಿದ್ದರು. ಈ ನಡುವೆ ಕಳೆದ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಕಾಂಗ್ರೆಸ್ ನಾಯಕ ಕೆಎಚ್ ಮುನಿಯಪ್ಪ ಭೇಟಿ, ಕಾರಣ ಬಿಚ್ಚಿಟ್ಟ ಸಚಿವ ಸುಧಾಕರ್!
‘ನಾನು ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಪಕ್ಷದಲ್ಲಿ ಸಕ್ರಿಯವಾಗಿ ಮುಂದುವರೆಯುತ್ತೇನೆ. ನಾನು ಪಕ್ಷ ಬಿಡುವುದು ಕೇವಲ ಊಹಾಪೋಹ ಮಾತ್ರ’ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕೋಲಾರದ ಕಾಂಗ್ರೆಸ್ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಸ್ಪಷ್ಟಪಡಿಸಿದ್ದರು.
ಜೆಡಿಎಸ್ ಸೇರಿದ ಮುನಿಯಪ್ಪ ಆಪ್ತ, ಹೈಕಮಾಂಡ್‌ಗೆ ಟ್ರೈಲರ್ ತೋರಿಸಿದ್ರಾ ಕೈ ಹಿರಿಯ ನಾಯಕ?
ಕಳೆದ ಶುಕ್ರವಾರ ಬೆಳಗ್ಗೆ ಸದಾಶಿವನಗರದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನಿವಾಸಕ್ಕೆ ಭೇಟಿ ನೀಡಿದ್ದ ಕೆ.ಎಚ್. ಮುನಿಯಪ್ಪ ಸುದೀರ್ಘ ಚರ್ಚೆ ನಡೆಸಿದ್ದರು. ಇದಕ್ಕೂ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಮುನಿಸಿಕೊಂಡಿರುವ ಮುನಿಯಪ್ಪ ಅವರ ಈ ಭೇಟಿಗಳು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಸುಧಾಕರ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ ಮುನಿಯಪ್ಪ, ‘ಆದಿ ಜಾಂಬವ ಮಠ ನಿರ್ಮಾಣಕ್ಕೆ ಜಾಗ ಹಾಗೂ ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಬಗ್ಗೆ ಚರ್ಚಿಸಲು ಸುಧಾಕರ್ ಬಳಿಗೆ ಬಂದಿದ್ದೆ’ ಎಂದಿದ್ದರು.