ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಹಾಗೂ ಭ್ರಷ್ಟಾಚಾರ ಪ್ರಕರಣಗಳ ಸಂಬಂಧ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಮಾ.9ರ ಗುರುವಾರ 2 ಗಂಟೆಗಳ ಕಾಲ ‘ಭ್ರಷ್ಟಾಚಾರ ವಿರೋಧಿಸಿ ಕರ್ನಾಟಕ ಬಂದ್‌’ಗೆ ರಾಜ್ಯ ಕಾಂಗ್ರೆಸ್‌ ಕರೆ ನೀಡಿದೆ.

ಬೆಂಗಳೂರು (ಮಾ.06): ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಹಾಗೂ ಭ್ರಷ್ಟಾಚಾರ ಪ್ರಕರಣಗಳ ಸಂಬಂಧ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಮಾ.9ರ ಗುರುವಾರ 2 ಗಂಟೆಗಳ ಕಾಲ ‘ಭ್ರಷ್ಟಾಚಾರ ವಿರೋಧಿಸಿ ಕರ್ನಾಟಕ ಬಂದ್‌’ಗೆ ರಾಜ್ಯ ಕಾಂಗ್ರೆಸ್‌ ಕರೆ ನೀಡಿದೆ.

ಬೆಳಗ್ಗೆ 9ರಿಂದ 11 ಗಂಟೆವರೆಗೆ ‘ಸಾಂಕೇತಿಕ ಬಂದ್‌’ ನಡೆಯಲಿದೆ. ಈ ವೇಳೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆ, ಸಾರಿಗೆ ಹಾಗೂ ಇತರ ಅಗತ್ಯ ಸೇವೆಗಳನ್ನು ಬಂದ್‌ ವ್ಯಾಪ್ತಿಯಿಂದ ಹೊರಗಿಡಲಾಗುವುದು. ಉಳಿದ ಸಂಸ್ಥೆಗಳು ಹಾಗೂ ವ್ಯಾಪಾರಿಗಳು ಬಂದ್‌ಗೆ ಬೆಂಬಲ ಸೂಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮನವಿ ಮಾಡಿದ್ದಾರೆ.

ಭ್ರಷ್ಟಾಚಾರದ ರಾಯಭಾರಿ ಡಿ.ಕೆ.ಶಿವಕುಮಾರ್: ಸಚಿವ ಶ್ರೀರಾಮುಲು ಕಿಡಿ

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್‌ ಪಕ್ಷ ರಾಜ್ಯದ ಪ್ರತಿ ನಗರದಲ್ಲೂ ಬಿಜೆಪಿ ಹಾಗೂ ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಪ್ರತಿಭಟನೆ ನಡೆಸಲಿದೆ. ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಕನ್ನಡಿಗರು ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಪಣ ತೊಟ್ಟಿದ್ದಾರೆ. ಹೀಗಾಗಿ ಬಂದ್‌ಗೆ ಬೆಂಬಲ ಸೂಚಿಸುವ ಮೂಲಕ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಬೇಕು ಎಂದು ಕೋರಿದ್ದಾರೆ.

ಬಿಜೆಪಿಯ ಲೂಟಿ ವಿರುದ್ಧ ಬಂದ್‌ಗೆ ಕರೆ: ರಾಜ್ಯದಲ್ಲಿ ಭ್ರಷ್ಟಜನತಾ ಪಕ್ಷದ (ಬಿಜೆಪಿ) ಭ್ರಷ್ಟಾಚಾರದ ದುರ್ವಾಸನೆ ವಾಕರಿಕೆ ತರಿಸುವ ಮಟ್ಟಿಗೆ ಹೆಚ್ಚಾಗಿದೆ. 40 ಪರ್ಸೆಂಟ್‌ ಕಮಿಷನ್‌ನಿಂದ ಜನರ ಬದುಕು ಸರ್ವನಾಶವಾಗಿದೆ. ಹೀಗಾಗಿ ಬಿಜೆಪಿ ಸರ್ಕಾರದ ಲೂಟಿ ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದೇವೆ. ಭ್ರಷ್ಟಾಸುರ ಬೊಮ್ಮಾಯಿ ಸರ್ಕಾರವು ಭ್ರಷ್ಟಾಚಾರದಿಂದ, ಭ್ರಷ್ಟಾಚಾರಕ್ಕಾಗಿ, ಭ್ರಷ್ಟಾಚಾರಕ್ಕೋಸ್ಕರ ಸರ್ಕಾರ ಎಂಬಂತಾಗಿದೆ ಎಂದು ಟೀಕಿಸಿದ್ದಾರೆ.

ಪ್ರತಿಯೊಂದು ಗುತ್ತಿಗೆಯಲ್ಲೂ 40% ಕಮಿಷನ್‌, ಶಾಲಾ ಅನುದಾನದಲ್ಲಿ 40% ಕಮಿಷನ್‌, ಧಾರ್ಮಿಕ ಮಠಗಳ ಅನುದಾನದಲ್ಲಿ 30% ಕಮಿಷನ್‌, ಮೈಸೂರು ಸ್ಯಾಂಡಲ ಸೋಪ್‌ ಅಕ್ರಮದಲ್ಲಿ ಲಂಚ, ವರ್ಗಾವಣೆ ಮತ್ತು ಪೋಸ್ಟಿಂಗ್‌ಗೆ ಲಂಚ, ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕ, ಸಹಾಯಕ ಎಂಜಿನಿಯರ್‌, ಜ್ಯೂನಿಯರ್‌ ಎಂಜಿನಿಯರ್‌, ಜಿಲ್ಲಾ ಸಹಕಾರಿ ಬ್ಯಾಂಕ್‌, ಪೌರಕಾರ್ಮಿಕರ ಕೆಲಸ, ಕೆಎಂಎಫ್‌ ಹುದ್ದೆ, ಸಹಾಯಕ ರಿಜಿಸ್ಟ್ರಾರ್‌ ಹುದ್ದೆ ಸೇರಿದಂತೆ ಎಲ್ಲಾ ನೇಮಕಾತಿಯಲ್ಲೂ ಅಕ್ರಮಗಳನ್ನು ನಡೆಸಿದ್ದಾರೆ. ಬಿಜೆಪಿ ಹಾಗೂ ಬೊಮ್ಮಾಯಿ ಅವರ ಭ್ರಷ್ಟಾಚಾರಕ್ಕೆ ಇತ್ತೀಚಿನ ಕೆಎಸ್‌ಡಿಎಲ್‌ ಅಕ್ರಮವೇ ಸಾಕ್ಷಿ ಎಂದು ಕಿಡಿಕಾರಿದ್ದಾರೆ.

ಕಾನೂನು ಕೈಗೆತ್ತಿಕೊಳ್ಳಬಾರದು- ಡಿಕೆಶಿ: ಈ ಬಗ್ಗೆ ತುಮಕೂರಿನಲ್ಲಿ ಮಾತನಾಡಿರುವ ಡಿ.ಕೆ. ಶಿವಕುಮಾರ್‌ ಅವರು, ಬಿಜೆಪಿಯ ಭ್ರಷ್ಟಾಚಾರ ಖಂಡಿಸಿ ಮಾ.9 ರಂದು ಬೆಳಗ್ಗೆ 9 ರಿಂದ 11 ಗಂಟೆವರೆಗೆ ಎಲ್ಲಾ ವ್ಯಾಪಾರಿಗಳು ಬಂದ್‌ಗೆ ಬೆಂಬಲ ನೀಡುವಂತೆ ಕೋರುತ್ತಿದ್ದೇನೆ. ಬಂದ್‌ ವೇಳೆ ಯಾವುದೇ ಶಾಲೆ, ಕಾಲೇಜು, ಆಸ್ಪತ್ರೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಬಾರದು. ಕಾನೂನು ಕೈಗೆತ್ತಿಕೊಳ್ಳುವ ಕೆಲಸವನ್ನು ಯಾರೂ ಮಾಡಬಾರದು. ಎಲ್ಲಾ ಸಂಘ, ಸಂಸ್ಥೆ ಹಾಗೂ ವ್ಯಾಪಾರಿಗಳು ರಾಜ್ಯವನ್ನು ಭ್ರಷ್ಟ ಮುಕ್ತ ಮಾಡಲು ಸಹಕಾರ ನೀಡಬೇಕು ಎಂದರು.

ಡಿಕೆಶಿ, ಸಿದ್ದರಾಮಯ್ಯ ಪರಸ್ಪರ ಯಾವಾಗ ಚುಚ್ಚಿಕೊಳ್ತಾರೋ?: ಕೆ.ಎಸ್‌.ಈಶ್ವರಪ್ಪ

ಮಾ.9ರಂದು ಕಾಂಗ್ರೆಸ್‌ ಪಕ್ಷ ರಾಜ್ಯದ ಪ್ರತಿ ನಗರದಲ್ಲೂ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಲೂಟಿ ವಿರೋಧಿಸಿ ಪ್ರತಿಭಟನೆ ನಡೆಸಲಿದೆ. ಸರ್ಕಾರದ 40% ಕಮಿಷನ್‌ ದಂಧೆಗೆ ಮೈಸೂರು ಸ್ಯಾಂಡಲ್‌ ಸೋಪ್‌ ಲಂಚಾವತಾರದ ಇತ್ತೀಚಿನ ಪ್ರಕರಣವೇ ಸಾಕ್ಷಿ.
- ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ