ಸಿದ್ದರಾಮಯ್ಯ ಹಾಗೂ ಡಿಕೆಶಿ ಡ್ರಾಮಾ ಬಾಜಿಗಳು, ಭ್ರಷ್ಟಾಚಾರದ ರಾಯಬಾರಿ ಅಂದ್ರೆ ಅದು ಡಿ.ಕೆ ಶಿವಕುಮಾರ್‌, ಮೊದಲು ನೀವು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಬಳಿಕ ಸಿಎಂ ರಾಜಿನಾಮೆ ಕೇಳಿ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಕಿಡಿಕಾರಿದರು.

ಔರಾದ್‌ (ಮಾ.05): ಸಿದ್ದರಾಮಯ್ಯ ಹಾಗೂ ಡಿಕೆಶಿ ಡ್ರಾಮಾ ಬಾಜಿಗಳು, ಭ್ರಷ್ಟಾಚಾರದ ರಾಯಬಾರಿ ಅಂದ್ರೆ ಅದು ಡಿ.ಕೆ ಶಿವಕುಮಾರ್‌, ಮೊದಲು ನೀವು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಬಳಿಕ ಸಿಎಂ ರಾಜಿನಾಮೆ ಕೇಳಿ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಕಿಡಿಕಾರಿದರು. ಅವರು ಔರಾದ್‌ನಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಮಾಧ್ಯಮದವರಿಗೆ ಮಾತನಾಡಿ, ಮೊದಲು ನಿಮ್ಮ ನಾಟಕ ಕಂಪನಿ ಬಂದ್‌ ಮಾಡಿ, ಕಾಂಗ್ರೆಸ್‌ನ ಭ್ರಷ್ಟಾಚಾರದ ಬಗ್ಗೆ ಒಂದು ಸಿನಿಮಾ ಮಾಡಬಹುದು ಎಂದರು.

ಸಿದ್ದರಾಮಯ್ಯ ಭ್ರಷ್ಟಾಚಾರದ ಸೂತ್ರದಾರ. ಇವತ್ತು ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್‌ಗೆ ಯಾವುದೇ ನೈತಿಕತೆಯಿಲ್ಲ. ನಮ್ಮ ಸಿಎಂ ರಾಜಿನಾಮೆ ಕೇಳೋ ಕಿಂಚಿತ್ತೂ ಅಧಿಕಾರ ಇಲ್ಲ ಇವರಿಗೆ, ಭೂತದ ಬಾಯಿಯಲ್ಲಿ ಭಗವದ್ಗೀತೆ ಎಂಬಂತಿದೆ ಎಂದು ವ್ಯಂಗ್ಯವಾಡಿದರು. ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಪ್ರಕರಣವನ್ನು ಬಹಳ ಸೂಕ್ಷ್ಮವಾಗಿ ನೋಡಿತ್ತಿದ್ದೇವೆ. ಲೋಕಾಯುಕ್ತ ನಮ್ಮ ಒಂದು ಅಂಗ. ತಪ್ಪಿಸರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಹೇಳಿದ್ದಾರೆ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.

ಸುಳ್ಳು, ಮೋಸವೇ ಕಾಂಗ್ರೆಸ್‌ನ ದೇವರು: ಸಿಎಂ ಬೊಮ್ಮಾಯಿ

ಔರಾದ್‌ನಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ: ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪದಿಂದ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಇಂದು ತಾಲೂಕಿನ ವಡಗಾಂವ ಹಾಗೂ ಸಂತಪೂರ ಮುಖಾಂತರ ಔರಾದ್‌ ಪಟ್ಟಣದ ಅಮರೇಶ್ವರ ಮಂದಿರಕ್ಕೆ ಆಗಮಿಸಿ ಪೂಜೆ ಹಾಗೂ ಗೋಪೂಜೆ ನೆರವೇರಿಸಿ ಅಲ್ಲಿಂದ ಬೃಹತ್‌ ರೋಡ್‌ ಶೋ ನಡೆಸಿದರು. ಕ್ಷೇತ್ರಕ್ಕೆ ಆಗಮಿಸಿದ ವಿಜಯ ಸಂಕಲ್ಪ ಯಾತ್ರೆಯ ರಥಕ್ಕೆ ಸಚಿವ ಪ್ರಭು ಚವ್ಹಾಣ್‌ ವಡಗಾಂವ ಗ್ರಾಮದ ಕನಕದಾಸ ವೃತ್ತದ ಬಳಿ ಸ್ವಾಗತಿಸಿದರು. ಮಾಜಿ ಸಿಎಂ ಜಗದೀಶ ಶೆಟ್ಟರ್‌ ನೇತೃತ್ವದಲ್ಲಿ ನಡೆದ ಯಾತ್ರೆಯು ಪಟ್ಟಣದ ಐತಿಹಾಸಿಕ ಅಮರೇಶ್ವರ ದೇವಸ್ಥಾನದಿಂದ ಆರಂಭವಾಗಿ ಬಸವೇಶ್ವರ ವೃತ್ತ, ಎಸ್‌ಬಿಐ ಬ್ಯಾಂಕ್‌, ಅಂಚೆ ಕಚೇರಿ, ಕನಕದಾಸ ವೃತ್ತ, ಶಿವಾಜಿ ವೃತ್ತ, ಬಸ್‌ನಿಲ್ದಾಣ ಮಾರ್ಗವಾಗಿ ಕನ್ನಡಾಂಬೆ ವೃತ್ತಕ್ಕೆ ತೆರಳಿತು.

ಯಾತ್ರೆಯಲ್ಲಿ ಯುವಕರು ಕೈಯಲ್ಲಿ ಬಿಜೆಪಿ ಧ್ವಜ ಹಿಡಿದು, ‘ಭಾರತ್‌ ಮಾತಾ ಕೀ ಜೈ’ ‘ವಂದೇ ಮಾತರಂ’, ‘ಭಾರತೀಯ ಜನತಾ ಪಕ್ಷಕ್ಕೆ ಜಯವಾಗಲಿ’, ಪ್ರಭು ಚವ್ಹಾಣ್‌ ಅವರಿಗೆ ಜಯವಾಗಲಿ ಎನ್ನುವ ಜಯಘೋಷಗಳನ್ನು ಕೂಗುವುದು, ತಮಟೆ ವಾದನ, ಡೊಳ್ಳು ಕುಣಿತ ಹಾಗೂ ಧ್ವನಿವರ್ಧಕಗಳ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಬಿಜೆಪಿ ಧ್ವಜಗಳು ಮತ್ತು ಕೇಸರಿ ಬಣ್ಣದಿಂದ ಅಲಂಕೃತಗೊಂಡ ರಸ್ತೆಗಳಲ್ಲಿ ಬಣ್ಣ ಬಣ್ಣದ ಉಡುಗೆ ಧರಿಸಿ ತಲೆಯ ಮೇಲೆ ಕಳಸ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ತಮಟೆ ವಾದನ, ಕೋಲಾಟ, ಬಂಜಾರಾ ಮಹಿಳೆಯರ ನೃತ್ಯ ಯಾತ್ರೆಯ ಮೆರಗನ್ನು ಹೆಚ್ಚಿಸಿತು.

ಬಹುಮತದೊಡನೆ ಬಿಜೆಪಿ ಮತ್ತೆ ಅಧಿಕಾರಕ್ಕೆ: ಕೆ.ಎಸ್‌.ಈಶ್ವರಪ್ಪ

ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಸಚಿವ ಬಿ.ಶ್ರೀರಾಮುಲು, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ ಮಲ್ಕಾಪುರೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್‌, ಕರ್ನಾಟಕ ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿರಾವ ಮುಳೆ, ಮಾಜಿ ಸಚಿವ ಮಾಲಿಕಯ್ಯಾ ಗುತ್ತೆದಾರ, ರಾಮಶೆಟ್ಟಿಪನ್ನಾಳೆ, ಹಣಮಂತ ಸುರನಾರ, ಖಂಡೋಬಾ ಕಂಗಟೆ, ಮುಖಂಡರಾದ ಈಶ್ವರಸಿಂಗ್‌ ಠಾಕೂರ್‌, ಶಿವರಾಜ ಗಂದಗೆ, ಗುರುನಾಥ ಜ್ಯಾಂತಿಕರ್‌, ಸೇರಿದಂತೆ ಮುಖಂಡರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಜನ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡರು.