ಮದ್ದೂರು ಗೆಲ್ಲಲು ಕಾಂಗ್ರೆಸ್‌ ಭರ್ಜರಿ ಪ್ಲಾನ್‌: ಡಿಕೆಶಿ ನೇತೃತ್ವದಲ್ಲಿ ಮಹತ್ವದ ಚರ್ಚೆ

2023ರ ಚುನಾವಣೆಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರವನ್ನು ಶತಾಯಗತಾಯ ಗೆಲ್ಲುವುದಕ್ಕೆ ಭರ್ಜರಿ ಪ್ಲಾನ್‌ ಮಾಡುತ್ತಿರುವ ಕಾಂಗ್ರೆಸ್‌, ಹಾಲಿ ಶಾಸಕ ಡಿ.ಸಿ.ತಮ್ಮಣ್ಣ ಅವರನ್ನು ಮಣಿಸಲು ರಣತಂತ್ರ ರೂಪಿಸುತ್ತಿದೆ. 

Congress Big Plan to Win Maddur Important discussion led by DK Shivakumar gvd

ಮಂಡ್ಯ ಮಂಜುನಾಥ

ಮಂಡ್ಯ (ಫೆ.17): 2023ರ ಚುನಾವಣೆಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರವನ್ನು ಶತಾಯಗತಾಯ ಗೆಲ್ಲುವುದಕ್ಕೆ ಭರ್ಜರಿ ಪ್ಲಾನ್‌ ಮಾಡುತ್ತಿರುವ ಕಾಂಗ್ರೆಸ್‌, ಹಾಲಿ ಶಾಸಕ ಡಿ.ಸಿ.ತಮ್ಮಣ್ಣ ಅವರನ್ನು ಮಣಿಸಲು ರಣತಂತ್ರ ರೂಪಿಸುತ್ತಿದೆ. ಸಮಾಜಸೇವೆಯ ಮೂಲಕ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿ ಜನರ ವಿಶ್ವಾಸ ಗಳಿಸಿರುವ ಕದಲೂರು ಉದಯ್‌ ಅವರನ್ನು ಪಕ್ಷಕ್ಕೆ ಸೆಳೆಯುವುದಕ್ಕೆ ಗಂಭೀರವಾಗಿ ಪ್ರಯತ್ನಗಳು ನಡೆದಿವೆ. 

ಇದಕ್ಕೆ ಪೂರಕವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಲಾಗಿದ್ದು, ಎಐಸಿಸಿ ಮೈಸೂರು ವಿಭಾಗ ಉಸ್ತುವಾರಿ ರೋಸಿ ಜಾನ್‌, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ್‌, ಸಂಭಾವ್ಯ ಅಭ್ಯರ್ಥಿ ಗುರುಚರಣ್‌, ಮಾಜಿ ಶಾಸಕ ಡಾ.ಮಹೇಶ್‌ಚಂದ್‌ ಹಾಗೂ ಕದಲೂರು ಉದಯ್‌ ಜೊತೆ ಸಭೆ ನಡೆಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಸಂಸದೆ ಸುಮಲತಾ ಕಾಂಗ್ರೆಸ್‌ ಪಕ್ಷ ಸೇರಲು ಅಭ್ಯಂತರವಿಲ್ಲ: ಡಿ.ಕೆ.ಶಿವಕುಮಾರ್‌

ಅಧಿಕೃತ ಅಭ್ಯರ್ಥಿಯಲ್ಲ: ಇತ್ತೀಚೆಗಷ್ಟೇ ಮದ್ದೂರಿನಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದ ಕದಲೂರು ಉದಯ್‌ ಮುಂಬರುವ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದ್ದರು. ಇದಾದ ನಂತರದಲ್ಲಿ ಗುರುಚರಣ್‌ ನೇತೃತ್ವದ ನಿಯೋಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಮದ್ದೂರಿನಿಂದ ಸ್ಪರ್ಧಿಸುವಂತೆ ಆಹ್ವಾನಿಸಿದ್ದರು. ಮದ್ದೂರಿನಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್‌ ಮಾತನಾಡುವ ವೇಳೆ ಗುರುಚರಣ್‌ ಪಕ್ಕದಲ್ಲಿ ಬಂದು ನಿಂತಾಗ, ಇನ್ನು ಗಂಡೇ ಆಗಿಲ್ಲ. ಆಗಲೇ ನಿಲ್ಲಲು ಬಂದಿದ್ದೀಯಾ ಎಂದು ವ್ಯಂಗ್ಯ ಮಾಡುವುದರೊಂದಿಗೆ ಗುರುಚರಣ್‌ ಇನ್ನೂ ಅಧಿಕೃತ ಅಭ್ಯರ್ಥಿಯಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ನೀಡಿದ್ದರು.

ಇದರ ನಡುವೆಯೇ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದಿರುವ ಸಭೆ ಮದ್ದೂರು ಕ್ಷೇತ್ರದೊಳಗೆ ರಾಜಕೀಯವಾಗಿ ಒಂದಷ್ಟುಸಂಚಲನ ಸೃಷ್ಟಿಸಿದೆ. ಕದಲೂರು ಉದಯ್‌ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನ ನಡೆದಿರುವುದಾಗಿ ಹೇಳಲಾಗುತ್ತಿದೆ. ಆದರೆ, ಉದಯ್‌ ಅವರನ್ನು ಗುರುಚರಣ್‌ ಬದಲಿಗೆ ಅಭ್ಯರ್ಥಿಯಾಗಿ ಮಾಡುವರೋ ಅಥವಾ ಚುನಾವಣೆಯಲ್ಲಿ ಗುರುಚರಣ್‌ಗೆ ಬೆಂಬಲವಾಗಿ ನಿಲ್ಲುವಂತೆ ಮಾಡಲು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದಾರೋ ಎನ್ನುವುದು ಸ್ಪಷ್ಟವಾಗಬೇಕಿದೆ.

ಬಿಜೆಪಿ ಸೇರಲು ಒತ್ತಡ: ಕದಲೂರು ಉದಯ್‌ ಬಿಜೆಪಿ ಅಭ್ಯರ್ಥಿಯಾಗುವುದಕ್ಕೆ ತೀವ್ರ ಕಸರತ್ತು ನಡೆಸಿದ್ದರು. ಸಿ.ಪಿ.ಯೋಗೇಶ್ವರ್‌ ಮೂಲಕ ನಾಯಕರ ಮೇಲೆ ಒತ್ತಡವನ್ನೂ ಹೇರಿದ್ದರು. ಆದರೆ, ಬಿಜೆಪಿ ಎಸ್‌.ಪಿ.ಸ್ವಾಮಿ ಅವರನ್ನೇ ಅಧಿಕೃತ ಅಭ್ಯರ್ಥಿಯನ್ನಾಗಿ ಮಾಡಲು ತೀರ್ಮಾನಿಸಿದಂತೆ ಕಂಡುಬರುತ್ತಿದೆ. ಬಿಜೆಪಿ ಟಿಕೆಟ್‌ಗೆ ಕಾದು ಪ್ರಯೋಜನವಿಲ್ಲವೆಂದರಿತ ಕದಲೂರು ಉದಯ್‌ ಕಾಂಗ್ರೆಸ್‌ ಪಾಳಯದತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಸ್ಥಳೀಯವಾಗಿ ಗುರುಚರಣ್‌, ಡಾ.ಮಹೇಶ್‌ಚಂದ್‌ ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರ ನೇತೃತ್ವದಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಕಾಂಗ್ರೆಸ್‌ ಗೆಲುವಿಗೆ ಶ್ರಮಿಸಿ: ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಕದಲೂರು ಉದಯ್‌ ತೀವ್ರ ಉತ್ಸುಕರಾಗಿದ್ದು, ಕಾಂಗ್ರೆಸ್‌ ಟಿಕೆಟ್‌ ನೀಡುವಂತೆ ಸಭೆಯಲ್ಲಿ ಬೇಡಿಕೆಯನ್ನೂ ಇಟ್ಟಿದ್ದಾರೆ. ಆದರೆ, ಉದಯ್‌ಗೆ ಟಿಕೆಟ್‌ ನೀಡುವುದಕ್ಕೆ ಕಾಂಗ್ರೆಸ್‌ ನಾಯಕರು ಸುಲಭಕ್ಕೆ ಒಪ್ಪಿಗೆ ಸೂಚಿಸಿಲ್ಲ. ಈ ಚುನಾವಣೆಯಲ್ಲಿ ಪೂರ್ಣ ಬೆಂಬಲವನ್ನು ಕಾಂಗ್ರೆಸ್‌ ಪಕ್ಷಕ್ಕೆ ನೀಡುವಂತೆಯೂ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಎರಡು-ಮೂರು ಕ್ಷೇತ್ರಗಳ ಜವಾಬ್ದಾರಿಯನ್ನು ನಿಮಗೇ ನೀಡುತ್ತೇವೆ. ಪಕ್ಷದೊಳಗೆ ಸೂಕ್ತ ಸ್ಥಾನ-ಮಾನ ನೀಡುತ್ತೇವೆ. ಚುನಾವಣೆಯಲ್ಲಿ ಗುರುಚರಣ್‌ ಬೆಂಬಲಿಸಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿಕೊಂಡು ಬರುವಂತೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಬೆಂಬಲಿಗರ ಸಭೆಯಲ್ಲಿ ಚರ್ಚಿಸುವೆ: ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ ಎಂದು ಈಗಾಗಲೇ ಘೋಷಿಸಿರುವ ಕದಲೂರು ಉದಯ್‌ ಅವರು ಕಾಂಗ್ರೆಸ್‌ ನಾಯಕರ ಮಾತನ್ನೂ ಸುಲಭವಾಗಿ ಸ್ವೀಕರಿಸಿಲ್ಲ. ಈ ವಿಷಯವಾಗಿ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ನಿರ್ಧಾರ ತಿಳಿಸುವುದಾಗಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

ಮಂಡ್ಯ ಜಿಲ್ಲೆ ಗೆಲ್ಲಲು ಬಿಜೆಪಿ ಚಾಣಕ್ಯ ತಂತ್ರ: ಅಶ್ವತ್ಥ್, ವಿಜಯೇಂದ್ರ ನೇತೃತ್ವದಲ್ಲಿ ಬಿಗ್‌ ಪ್ಲಾನ್‌

ರಾಜಕೀಯ ತೀರ್ಮಾನ ನಿಗೂಢ: ಮದ್ದೂರು ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನವಿಶ್ವಾಸ ಗಳಿಸಿರುವ ಕದಲೂರು ಉದಯ್‌ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಲ್ಲಿ ಗೆಲ್ಲುವುದು ಸ್ವಲ್ಪ ಕಷ್ಟವಾಗಬಹುದು. ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿಯಾದರೆ ಇನ್ನೂ ಹೆಚ್ಚಿನ ಶಕ್ತಿ ಬರುತ್ತದೆ ಎಂಬ ಅಭಿಪ್ರಾಯದೊಂದಿಗೆ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗುವುದಕ್ಕೆ ಹೋರಾಟ ನಡೆಸುತ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಅಭ್ಯರ್ಥಿಯಾಗಲು ಎಡರು-ತೊಡರು ಇರುವುದರಿಂದ ಸ್ಪಷ್ಟತೀರ್ಮಾನಕ್ಕೆ ಬರಲಾಗುತ್ತಿಲ್ಲವೆಂದು ಹೇಳಲಾಗಿದೆ.

ಅಂತಿಮ ಘಳಿಗೆಯಲ್ಲಿ ಗುರುಚರಣ್‌ಗೆ ಟಿಕೆಟ್‌ ತಪ್ಪಿಸಿ ಕಾಂಗ್ರೆಸ್‌ ನಾಯಕರು ಕದಲೂರು ಉದಯ್‌ಗೆ ಕೊಡುವರೇ ಅಥವಾ ಕದಲೂರು ಉದಯ್‌ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಗುರುಚರಣ್‌ರನ್ನು ಬೆಂಬಲಿಸುವರೇ ಅಥವಾ ಪಕ್ಷೇತರ ಅಭ್ಯರ್ಥಿಯಾಗಿಯೇ ಕಣಕ್ಕಿಳಿದು ಅದೃಷ್ಟಪರೀಕ್ಷಿಸುವರೇ ಎನ್ನುವುದನ್ನು ಕಾದುನೋಡಬೇಕಿದೆ.

Latest Videos
Follow Us:
Download App:
  • android
  • ios