ಕಾಂಗ್ರೆಸ್‌ ‘ಭಾರತ್‌ ಜೋಡೋ’ ಪಾದಯಾತ್ರೆ, ಕನ್ಯಾಕುಮಾರಿಯಲ್ಲಿ ಯಾತ್ರೆಗೆ ಇಂದು ಚಾಲನೆ, 12 ರಾಜ್ಯ, 2 ಕೇಂದ್ರಾಡಳಿತ ಪ್ರದೇಶದಲ್ಲಿ 5 ತಿಂಗಳು ಸಂಚಾರ, ನಿತ್ಯ 2 ಹಂತದಲ್ಲಿ ಯಾತ್ರೆ: 22-23 ಕಿ.ಮೀ. ನಡಿಗೆ

ನವದೆಹಲಿ(ಸೆ.07):  2024ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಪಕ್ಷಕ್ಕೆ ಪುನಶ್ಚೇತನ ನೀಡಲು ಹಮ್ಮಿಕೊಳ್ಳಲಾಗುತ್ತಿರುವ ‘ಭಾರತ್‌ ಜೋಡೋ’ ಪಾದಯಾತ್ರೆ ಬುಧವಾರ ಕನ್ಯಾಕುಮಾರಿಯಿಂದ ಆರಂಭವಾಗಲಿದೆ. 3570 ಕಿ.ಮೀ. ಪಾದಯಾತ್ರೆ ಇದಾಗಿದ್ದು 5 ತಿಂಗಳ ಬಳಿಕ ಕಾಶ್ಮೀರದಲ್ಲಿ ಅಂತ್ಯವಾಗಲಿದೆ. ಆರಂಭದಿಂದ ಅಂತ್ಯದವರೆಗೆ ರಾಹುಲ್‌ ಗಾಂಧಿ ಕಾಲ್ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದು, ದೇಶದಲ್ಲಿ ಸಂಚಲನ ಮೂಡಿಸುವ ಸಾಧ್ಯತೆ ಇದೆ.

ಯಾತ್ರೆ ಆರಂಭಕ್ಕೂ ಮುನ್ನ ರಾಹುಲ್‌ ಗಾಂಧಿ ಅವರು ತಂದೆ ರಾಜೀವ್‌ ಗಾಂಧಿ ಹತ್ಯೆಗೀಡಾದ ಸ್ಥಳವಾದ ತಮಿಳುನಾಡಿನ ಶ್ರೀಪೆರಂಬದೂರಿಗೆ ತೆರಳಿ ಪ್ರಾರ್ಥನೆ ನಡೆಸಲಿದ್ದಾರೆ. ಬಳಿಕ ಅವರು ಕನ್ಯಾಕುಮಾರಿಗೆ ತೆರಳಿ ಮಹಾತ್ಮಾ ಗಾಂಧಿ ಮಂಟಪದಿಂದ ಪಾದಯಾತ್ರೆ ಆರಂಭಿಸಲಿದ್ದಾರೆ. ಯಾತ್ರೆಯ ಆರಂಭದ ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ರಾಹುಲ್‌ಗೆ ಖಾದಿ ರಾಷ್ಟ್ರಧ್ವಜ ಸಮರ್ಪಿಸಲಿದ್ದಾರೆ. ರಾಜಸ್ಥಾನ ಹಾಗೂ ಛತ್ತೀಸ್‌ಗಢ ಮುಖ್ಯಮಂತ್ರಿಗಳಾದ ಅಶೋಕ ಗೆಹ್ಲೋಟ್‌ ಹಾಗೂ ಭೂಪೇಶ್‌ ಬಾಘೇಲ್‌, ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

Political Crisis ಕಾಂಗ್ರೆಸ್‌ಗೆ ಮತ್ತೊಂದು ಶಾಕ್, ಮಹಿಳಾ ಘಟಕದ ಅಧ್ಯಕ್ಷೆ ರಾಜೀನಾಮೆ!

‘ಋುಣಾತ್ಮಕ ರಾಜಕೀಯ ಇಂದು ನಡೆಯುತ್ತಿದ್ದು, ಅದರ ಮೂಲಕ ಜನರ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ. ಇದಕ್ಕೆ ಅಂತ್ಯ ಹಾಡಲು ಯಾತ್ರೆ ಅಗತ್ಯವಾಗಿದೆ. ಎಲ್ಲಿ ಸಾಧ್ಯ ಆಗುತ್ತೋ ಅಲ್ಲಿ ಈ ಯಾತ್ರೆಯಲ್ಲಿ ಜನರು ಪಾಲ್ಗೊಳ್ಳಬೇಕು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮನವಿ ಮಾಡಿದ್ದಾರೆ. ಯಾತ್ರೆಯುದ್ದಕ್ಕೂ ಬೆಲೆಯೇರಿಕೆ ವಿಷಯ ಪ್ರಮುಖವಾಗಿ ಪ್ರಸ್ತಾಪ ಆಗುವ ಸಾಧ್ಯತೆ ಇದೆ.

ಹೆಜ್ಜೆ ಹಾಕೋಣ, ದೇಶ ಒಗ್ಗೂಡಿಸೋಣ:

ಈ ಪಾದಯಾತ್ರೆಗೆ ‘ಮಿಲೇ ಕದಂ, ಜುಡೇ ವತನ್‌’ (ಹೆಜ್ಜೆ ಹಾಕೋಣ, ದೇಶ ಒಗ್ಗೂಡಿಸೋಣ) ಎಂಬ ಟ್ಯಾಗ್‌ಲೈನ್‌ ಇರಿಸಲಾಗಿದೆ. ರಾಹುಲ್‌ ಗಾಂಧಿ ಸೇರಿದಂತೆ 119 ಯಾತ್ರಿಕರು ‘ಭಾರತ ಯಾತ್ರಿ’ಗಳಾಗಲಿದ್ದಾರೆ. ಅರ್ಥಾತ್‌ ಇವರು ಕನ್ಯಾಕುಮಾರಿಯಿಂದ ಕಾಲ್ನಡಿಗೆ ಆರಂಭಿಸಿ ಕಾಶ್ಮೀರದವರೆಗೂ ಸಾಗುವ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನಿತ್ಯ 2 ಹಂತದ ಯಾತ್ರೆ- 23 ಕಿ.ಮೀ. ನಡಿಗೆ:

12 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 3,570 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಕಾಶ್ಮೀರದಲ್ಲಿ ಯಾತ್ರೆ ಮುಕ್ತಾಯ ಆಗಲಿದ್ದು, ಮುಕ್ತಾಯಕ್ಕೆ 5 ತಿಂಗಳು ಹಿಡಿಯಲಿದೆ. ದಿನಕ್ಕೆ 2 ಹಂತದಲ್ಲಿ ಪಾದಯಾತ್ರೆ ಸಾಗಲಿದೆ. ಬೆಳಗ್ಗೆ 7 ಗಂಟೆಗೇ ನಿತ್ಯ ಪಾದಯಾತ್ರೆ ಆರಂಭವಾಗಿ 10.30ಕ್ಕೆ ವಿರಾಮ ತೆಗೆದುಕೊಳ್ಳಲಿದೆ. ನಂತರ 3.30ಕ್ಕೆ 2ನೇ ಹಂತದ ಪಾದಯಾತ್ರೆ ಆರಂಭವಾಗಿ ಸಂಜೆ 6.30ಕ್ಕೆ ಅಂತ್ಯಗೊಳ್ಳಲಿದೆ. ನಿತ್ಯ 22-23 ಕಿ.ಮೀ. ಸಾಗುವ ಉದ್ದೇಶ ಇರಿಸಿಕೊಳ್ಳಲಾಗಿದೆ.

ಅತಿಥಿ, ಪ್ರದೇಶ ಯಾತ್ರಿಗಳು:

ರಾಹುಲ್‌ ಸೇರಿ 119 ಜನರು ಇಡೀ 3570 ಕಿ.ಮೀ. ನಡೆಯಲಿದ್ದು ಭಾರತ ಯಾತ್ರಿಗಳು ಎನ್ನಿಸಿಕೊಳ್ಳುತ್ತಾರೆ. ಇನ್ನು ಯಾತ್ರೆ ಸಾಗದ ರಾಜ್ಯಗಳಿಗೆ ಸೇರಿದ 100 ಯಾತ್ರಿಕರು ಅಲ್ಲಲ್ಲಿ ಸೇರಿಕೊಳ್ಳಲಿದ್ದಾರೆ. ಇವರು ‘ಅತಿಥಿ ಯಾತ್ರಿಕರು’ ಎನ್ನಿಸಿಕೊಳ್ಳಲಿದ್ದಾರೆ. ವಿವಿಧ ರಾಜ್ಯಗಳಲ್ಲಿ ಯಾತ್ರೆ ಸಾಗುವಾಗ ಆಯಾ ರಾಜ್ಯದ ಕನಿಷ್ಠ 100 ಜನರು ಯಾತ್ರೆಯಲ್ಲಿ ಇರಲಿದ್ದಾರೆ. ಇವರು ‘ಪ್ರದೇಶ ಯಾತ್ರಿ’ಗಳು ಎನ್ನಿಸಿಕೊಳ್ಳಲಿದ್ದಾರೆ.

Bharat Jodo Yatra: ಪಾದಯಾತ್ರೆ ಐತಿಹಾಸಿಕ ನಡಿಗೆಯಾಗಬೇಕು - ಸಿದ್ದರಾಮಯ್ಯ

ಸೆ.30ಕ್ಕೆ ಕರ್ನಾಟಕ ಪ್ರವೇಶ:

ಸೆ.10ರವರೆಗೆ ತಮಿಳುನಾಡಿನಲ್ಲಿ ಯಾತ್ರೆ ಸಾಗಲಿದ್ದು, ಸೆ.11ಕ್ಕೆ ಕೇರಳ, ಸೆ.30ಕ್ಕೆ ಕರ್ನಾಟಕ ತಲುಪಲಿದೆ. ಕರ್ನಾಟಕದಲ್ಲಿ 21 ದಿನ ಯಾತ್ರೆ ಏರ್ಪಾಡಾಗಿದೆ. ಕರ್ನಾಟಕದ ಮೈಸೂರು, ಬಳ್ಳಾರಿ ಹಾಗೂ ರಾಯಚೂರಿನ ಮೂಲಕ ಯಾತ್ರೆ ತೆಲಂಗಾಣ ಪ್ರವೇಶಿಸಲಿದೆ.

ಕಂಟೇನರ್‌ನಲ್ಲಿ ರಾಹುಲ್‌ ಶಯನ:

ಯಾತ್ರೆಯ ವಿರಾಮದ ಸಮಯದಲ್ಲಿ ರಾತ್ರಿ ವೇಳೆ ರಾಹುಲ್‌ ಗಾಂಧಿ ಸಂಚಾರಿ ಕಂಟೇನರ್‌ ಕ್ಯಾಬಿನ್‌ಗಳಲ್ಲಿ ಮಲಗಲಿದ್ದಾರೆ ಎಂದು ಪಕ್ಷ ತಿಳಿಸಿದೆ. ಇದಕ್ಕಾಗಿ ಸಂಚಾರಿ ಕಂಟೇನರ್‌ಗಳು ಈಗಾಗಳೇ ಕನ್ಯಾಕುಮಾರಿ ತಲುಪಿವೆ.

ಯಾತ್ರೆಯ ಸ್ವಾರಸ್ಯ

- 119 ಭಾರತ ಯಾತ್ರಿಗಳು: ಆರಂಭದಿಂದ ಅಂತ್ಯದವರೆಗೆ 119 ಯಾತ್ರಿಕರು ಭಾಗಿ: ಇವರು ಭಾರತ ಯಾತ್ರಿಗಳು
- 100 ಅತಿಥಿ ಯಾತ್ರಿಗಳು: ಯಾತ್ರೆ ಸಾಗದ ರಾಜ್ಯಗಳ ಯಾತ್ರಿಕರು: ಇವರು ಅತಿಥಿ ಯಾತ್ರಿಗಳು
- 100 ಪ್ರದೇಶ ಯಾತ್ರಿಗಳು: ಆಯಾ ರಾಜ್ಯದಲ್ಲಿ ಕನಿಷ್ಠ 100 ಮಂದಿ ಭಾಗಿ: ಇವರು ಪ್ರದೇಶ ಯಾತ್ರಿಗಳು