ಲೋಕಸಭೆ ಕದನದಿಂದ ಅಧಿಕೃತವಾಗಿ ಹಿಂದೆ ಸರಿದ ಸೋನಿಯಾ, ರಾಜಸ್ಥಾನದಿಂದ ರಾಜ್ಯಸಭೆಗೆ ಫೈಟ್‌!

Sonia Gandhi Rajya Sabha ಲೋಕಸಭೆ ಕದನ ಕಣದಿಂದ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಹಿಂದೆ ಸರಿದಿದ್ದಾರೆ. ರಾಜಸ್ಥಾನದಿಂದ ಅವರು ರಾಜ್ಯಸಭೆಗೆ ಪ್ರವೇಶ ಪಡೆಯಲಿದ್ದಾರೆ. ಬುಧವಾರ ಕಾಂಗ್ರೆಸ್ ಸೋನಿಯಾ ಗಾಂಧಿ ಸೇರಿದಂತೆ ನಾಲ್ಕು ಹೆಸರನ್ನು ಅಂತಿಮಗೊಳಿಸಿದೆ.

Congress announced 4 names for Rajya Sabha Sonia Gandhi to upper house from Rajasthan san

ನವದೆಹಲಿ (ಫೆ.14): ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅಧಿಕೃತವಾಗಿ ಮುಂದಿನ ಲೋಕಸಭೆಯ ಹೋರಾಟದಿಂದ ಹಿಂದೆ ಸರಿದಿದ್ದಾರೆ. ದೆಹಲಿಯಿಂದ ಸಮೀಪದಲ್ಲಿರುವ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾಗಬೇಕು ಎನ್ನುವ ಆಸೆಯಲ್ಲಿದ್ದ ಸೋನಿಯಾ ಗಾಂಧಿ, ರಾಜಸ್ಥಾನದಿಂದ ರಾಜ್ಯಸಭೆಗೆ ಸ್ಪರ್ಧೆ ಮಾಡಲಿದ್ದಾರೆ. ಬುಧವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂದಿನ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಸ್ಪರ್ಧಿಗಳ ಹೆಸರನ್ನು ಘೋಷಣೆ ಮಾಡಿದ್ದು ಅದರಲ್ಲಿ ಸೋನಿಯಾ ಗಾಂಧಿ ಹೆಸರನ್ನೂ ಸೇರಿಸಲಾಗಿದೆ. ಕಾಂಗ್ರೆಸ್‌ನಿಂದ ಬಿಡುಗಡೆಯಾದ ಮೊದಲ ರಾಜ್ಯಸಭಾ ಪಟ್ಟಿಯಲ್ಲಿ ನಾಲ್ಕು ಜನರ ಹೆಸರಿದೆ. ಸೋನಿಯಾ ಗಾಂಧಿ ರಾಜಸ್ಥಾನದಿಂದ ಸ್ಪರ್ಧೆ ಮಾಡಲಿದ್ದರೆ.  ಹಿರಿಯ ವಕೀಲರೂ ಆಗಿರುವ ಅಭಿಷೇಕ್ ಮನು ಸಿಂಘ್ವಿಗೆ ಹಿಮಾಚಲ ಪ್ರದೇಶದಿಂದ ರಾಜ್ಯಸಭೆಯ ಟಿಕೆಟ್‌ ನೀಡಲಾಗಿದೆ. ಬಿಹಾರದಿಂದ ಅಖಿಲೇಶ್ ಪ್ರಸಾದ್ ಸಿಂಗ್ ಹಾಗೂ  ಮಹಾರಾಷ್ಟ್ರದಿಂದ ಹಿಂದುಳಿದ ವರ್ಗಗಳ ನಾಯಕ ಚಂದ್ರಕಾಂತ್ ಹಾಂಡೋರೆ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.

ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸಲುವಾಗಿ ಮಾಜಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ, ಜೈಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆರೋಗ್ಯದ ಕಾರಣಕ್ಕಾಗಿ ರಾಜ್ಯಸಭೆಗೆ ಶಿಫ್ಟ್‌ ಆಗುವ ನಿರ್ಧಾರವನ್ನು ಮಾಡಿದ್ದಾರೆ. ಆರೋಗ್ಯದ ಕಾರಣದಿಂದಾಗಿಯೇ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗೋದಿಲ್ಲ ಎನ್ನುವ ಕಾರಣಕ್ಕೆ ರಾಜ್ಯಸಭೆಯ ಮೂಲಕ ಸಂಸತ್‌ ಪ್ರವೇಶಿಸುವ ನಿರ್ಧಾರ ಮಾಡಿದ್ದಾರೆ. ಅವರು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತರಿರುವ ಸಾಧ್ಯತೆ ಇದೆ. ನಾಮಪತ್ರ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನಾಂಕವಾಗಿದ್ದು, ಫೆಬ್ರವರಿ 27 ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ.

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋನಿಯಾ ಗಾಂಧಿ ಅವರು ರಾಜ್ಯಸಭೆಯಿಂದ ನಾಮನಿರ್ದೇಶನಗೊಂಡಿರುವುದನ್ನು ಸ್ವಾಗತಿಸಿದ್ದಾರೆ. ಸೋನಿಯಾ ಯಾವಾಗಲೂ ರಾಜಸ್ಥಾನದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಿದರು. "ಪ್ರಧಾನಿ ಹುದ್ದೆಯನ್ನು ತ್ಯಜಿಸಿದ ಕಾಂಗ್ರೆಸ್‌ ಪಕ್ಷದ ಗೌರವಾನ್ವತ ಸೋನಿಯಾ ಗಾಂಧಿ ಜಿ ಅವರನ್ನು ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಘೋಷಿಸಿರುವುದನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ" ಎಂದು ಗೆಹ್ಲೋಟ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರೊಂದಿಗೆ ಸೋನಿಯಾ ಗಾಂಧಿ ಅವರು ತಮ್ಮ ಪತಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರೊಂದಿಗೆ ರಾಜಸ್ಥಾನಕ್ಕೆ ಭೇಟಿ ನೀಡಿದ ಹಲವು ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

ಸೋಮವಾರ, ಮಲ್ಲಿಕಾರ್ಜುನ ಖರ್ಗೆ, ಮುಕುಲ್ ವಾಸ್ನಿಕ್, ಅಜಯ್ ಮಾಕನ್, ಸಲ್ಮಾನ್ ಖುರ್ಷಿದ್, ಕೆಸಿ ವೇಣುಗೋಪಾಲ್ ಭಾಗವಹಿಸಿದ್ದ ಪಕ್ಷದ ಮುಖಂಡರ ಉನ್ನತ ಮಟ್ಟದ ಸಭೆಯ ನಂತರ, ಸೋನಿಯಾ ಗಾಂಧಿ ಅವರು ಮೊದಲ ಬಾರಿಗೆ ಚುನಾವಣಾ ಕಣದ ಲೋಕಸಭೆಯ ಬದಲಾಗಿ, ರಾಜ್ಯಸಭೆಗೆ ಟಿಕೆಟ್‌ ನೀಡಲು ತೀರ್ಮಾನಿಸಲಾಗಿತ್ತು.. ರಾಜಸ್ಥಾನದ ಹೊರತಾಗಿ, ಪಕ್ಷವು ಹಿಮಾಚಲ ಪ್ರದೇಶವನ್ನು ಸೋನಿಯಾ ಅವರ ಆಯ್ಕೆಯಾಗಿ ನೀಡಲಾಗಿತ್ತು. ಆದರೆ, ಸೋನಿಯಾ ಗಾಂಧಿ ರಾಜಸ್ಥಾನವನ್ನೇ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸೇರಿದ ಕಾಂಗ್ರೆಸ್ ಮಾಜಿ ಸಿಎಂ ಅಶೋಕ್ ಚವಾಣ್, ನಾಳೆ ಕೇಸರಿ ಪಕ್ಷದಿಂದ ರಾಜ್ಯಸಭೆಗೆ ನಾಮಪತ್ರ!

1998 ರಿಂದ 2022ರ ಅವಧಿಯಲ್ಲಿ 22 ವರ್ಷಗಳ ಕಾಲ ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ, ಐದು ಬಾರಿ ಲೋಕಸಭಾ ಸಂಸದರಾಗಿದ್ದಾರೆ. ಉತ್ತರ ಪ್ರದೇಶದ ಅಮೇಠಿ ಹಾಗೂ ಕರ್ನಾಟಕದ ಬಳ್ಳಾರಿಯಿಂದ 1999ಅಲ್ಲಿ ಗೆದ್ದಿದ್ದ ಸೋನಿಯಾ ಗಾಂಧಿ, ಬಳಿಕ ಅಮೇಠಿಯನ್ನು ಉಳಿಸಿಕೊಂಡಿದ್ದರು. 2004ರಲ್ಲಿ ಸೋನಿಯಾ ಗಾಂಧಿ ರಾಯ್‌ಬರೇಲಿಗೆ ಶಿಫ್ಟ್‌ ಆದರೆ, ರಾಹುಲ್‌ ಗಾಂಧಿ ಅಮೇಠಿಯಿಂದ ಸ್ಪರ್ಧೆ ಮಾಡಲು ಆರಂಭಿಸಿದ್ದರು.

ಸೋನಿಯಾ ಗಾಂಧಿ ರಾಜ್ಯಸಭೆಗೆ, ಅಮ್ಮನ ಕ್ಷೇತ್ರದಿಂದ ಮಗಳು ಪ್ರಿಯಾಂಕಾ ಲೋಕಸಭೆಗೆ ಸ್ಪರ್ಧೆ..?

ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾದ ಮನಮೋಹನ್ ಸಿಂಗ್ ಸೇರಿದಂತೆ 15 ರಾಜ್ಯಗಳ ಒಟ್ಟು 56 ರಾಜ್ಯಸಭೆ ಸದಸ್ಯರು ಏಪ್ರಿಲ್‌ನಲ್ಲಿ ನಿವೃತ್ತರಾಗಲಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಆಗಸ್ಟ್ 1964 ರಿಂದ ಫೆಬ್ರವರಿ 1967 ರವರೆಗೆ ರಾಜ್ಯಸಭೆಯ ಸದಸ್ಯರಾಗಿದ್ದರು. ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಪ್ರವೇಶಿಸಿದರೆ, ಗಾಂಧಿ ಕುಟುಂಬದ ರಾಜ್ಯಸಭೆಗೆ ಪ್ರವೇಶ ಪಡೆದ 2ನೇ ಸದಸ್ಯರಾಗಲಿದ್ದಾರೆ. ಸೋನಿಯಾ ಗಾಂಧಿ ಅವರು ರಾಯ್ ಬರೇಲಿಯಿಂದ ಹೊರಗುಳಿದ ನಂತರ, ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಆ ಸ್ಥಾನಕ್ಕೆ ಪರಿಗಣಿಸಬಹುದು ಎಂಬ ಊಹಾಪೋಹಗಳು ಹರಡಿವೆ. ಆದರೆ, ಪ್ರಿಯಾಂಕಾ ಗಾಂಧಿ ಅವರ ಲೋಕಸಭೆ ಚುನಾವಣೆ ಸ್ಪರ್ಧೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

Latest Videos
Follow Us:
Download App:
  • android
  • ios