ಮೀನಾಕ್ಷಿ ನಟರಾಜನ್ ಅವರ ರಾಜ್ಯಸಭೆ ನಾಮಪತ್ರ ತಿರಸ್ಕೃತಗೊಂಡ ನಂತರ, ಬಿಜೆಪಿ 'ಪ್ರಜಾಪ್ರಭುತ್ವವನ್ನು ನಾಶಮಾಡಲು' ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ವರೆಗೆ ಕಾನೂನು ಹೋರಾಟ ನಡೆಸುವುದಾಗಿ ಪಕ್ಷ ಶಪಥ ಮಾಡಿದೆ.
ಮೀನಾಕ್ಷಿ ನಟರಾಜನ್ ಅವರ ರಾಜ್ಯಸಭೆ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ನ ಹಿರಿಯ ನಾಯಕರಾದ ಸುಖ್ಜಿಂದರ್ ಸಿಂಗ್ ರಾಂಧವಾ ಮತ್ತು ಮಾಣಿಕ್ ರಾವ್ ಠಾಕ್ರೆ ಅವರು ಗುರುವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯಿಂದ ಪ್ರಜಾಪ್ರಭುತ್ವ ನಾಶ
ಬಿಜೆಪಿ ಪ್ರಜಾಪ್ರಭುತ್ವವನ್ನು ನಾಶಮಾಡಿ, ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಯಾರು ಚುನಾವಣೆಗೆ ಸ್ಪರ್ಧಿಸಬೇಕು, ಯಾರು ಸ್ಪರ್ಧಿಸಬಾರದು ಎಂಬುದನ್ನು ಬಿಜೆಪಿ ಸರ್ಕಾರವೇ ನಿರ್ಧರಿಸುವ ಮೂಲಕ ಅಧಿಕಾರ ಮೀರಿ ವರ್ತಿಸುತ್ತಿದೆ ಎಂದು ರಾಂಧವಾ ಕಿಡಿಕಾರಿದ್ದಾರೆ. ಯಾವ ಅಭ್ಯರ್ಥಿ ಚುನಾವಣೆಗೆ ನಿಲ್ಲಬೇಕು, ಯಾರು ನಿಲ್ಲಬಾರದು ಎಂಬುದನ್ನು ಈಗ ಬಿಜೆಪಿ ಸರ್ಕಾರವೇ ನಿರ್ಧರಿಸುವಂತಿದೆ. ಇದು ಪ್ರಜಾಪ್ರಭುತ್ವವನ್ನು ನಾಶಮಾಡಲು ನಡೆಸುತ್ತಿರುವ ಸಂಚು ಎಂದು ಗುದಾಸ್ಪುರ್ ಸಂಸದರಾದ ರಾಂಧವಾ ಸುದ್ದಿಗಾರರಿಗೆ ತಿಳಿಸಿದರು.
ಭಾರತ ಮತ್ತೆ ಗುಲಾಮಗಿರಿಯತ್ತ ಸಾಗುತ್ತಿದೆ..
ಭಾರತದ ಸ್ವಾತಂತ್ರ್ಯ ಹೋರಾಟವನ್ನು ಉಲ್ಲೇಖಿಸಿದ ಅವರು, ನಾವು ಬ್ರಿಟಿಷರಿಂದ ದೇಶವನ್ನು ಯಾವ ಕಾರಣಕ್ಕಾಗಿ ಸ್ವತಂತ್ರಗೊಳಿಸಿದೆವೋ... ಈಗ ಮತ್ತೆ ಅದೇ ಪರಿಸ್ಥಿತಿ ಮರುಕಳಿಸುತ್ತಿದೆ. ಇದು ಸ್ವಾತಂತ್ರ್ಯವಲ್ಲ, ನಾವು ಗುಲಾಮಗಿರಿಯತ್ತ ಸಾಗುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ನಮ್ಮ ಹತ್ತಿಕ್ಕಲು ಯತ್ನಿಸುತ್ತಿದೆ
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಮತ್ತೊಬ್ಬ ಕಾಂಗ್ರೆಸ್ ನಾಯಕ ಮಾಣಿಕ್ ರಾವ್ ಠಾಕ್ರೆ, ಬಿಜೆಪಿಯು ಚುನಾವಣಾ ಪ್ರಕ್ರಿಯೆಗಳನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು. ಪಕ್ಷವು ಈ ವಿಷಯವನ್ನು ಕಾನೂನಾತ್ಮಕವಾಗಿ ಎದುರಿಸಲಿದೆ ಎಂದು ಅವರು ಖಚಿತಪಡಿಸಿದರು. ನೋಡಿ, ಬಿಜೆಪಿ ಜನರು ಎಲ್ಲೆಡೆ ನಮ್ಮನ್ನು ಹತ್ತಿಕ್ಕುತ್ತಿದ್ದಾರೆ ಮತ್ತು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಪ್ರಜಾಪ್ರಭುತ್ವ ಮತ್ತು ಯಾವುದೇ ಚುನಾವಣೆಯು ಅವರಿಗೆ ಮುಖ್ಯವಲ್ಲ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ ಎಂದು ಮಾಣಿಕ್ ರಾವ್ ಠಾಕ್ರೆ ಹೇಳಿದರು. ನಾಮಪತ್ರ ತಿರಸ್ಕಾರವನ್ನು ಪ್ರಶ್ನಿಸುವ ಪಕ್ಷದ ನಿರ್ಧಾರವನ್ನು ಒತ್ತಿಹೇಳಿದ ಅವರು, ನಾವು ಸುಪ್ರೀಂ ಕೋರ್ಟ್‌ವರೆಗೆ ಹೋರಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ನಟರಾಜನ್ ನಾಮಪತ್ರ ತಿರಸ್ಕೃತಗೊಂಡಿದ್ದೇಕೆ?
ಜೂನ್ 10 ರಂದು, ಮಧ್ಯಪ್ರದೇಶದಿಂದ ಕಾಂಗ್ರೆಸ್‌ನ ರಾಜ್ಯಸಭಾ ಅಭ್ಯರ್ಥಿಯಾಗಿದ್ದ ನಟರಾಜನ್ ಅವರ ನಾಮಪತ್ರ ತಿರಸ್ಕಾರದ ಕುರಿತು 10 ಸದಸ್ಯರ ಕಾಂಗ್ರೆಸ್ ನಿಯೋಗವು ನವದೆಹಲಿಯಲ್ಲಿ ಚುನಾವಣಾ ಆಯೋಗವನ್ನು ಭೇಟಿ ಮಾಡಿತ್ತು. ಬಿಜೆಪಿಯ ಆಕ್ಷೇಪಣೆಗಳ ನಂತರ, ಚುನಾವಣಾಧಿಕಾರಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿದ್ದರು. ತೆಲಂಗಾಣ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣದ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.
ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸಂಸದ ಹಾಗೂ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿದ ಚುನಾವಣಾಧಿಕಾರಿಯ ನಿರ್ಧಾರವು 'ಕಾನೂನುಬಾಹಿರ ಮತ್ತು ಪ್ರಜಾ ಪ್ರತಿನಿಧಿ ಕಾಯ್ದೆಯ ನಿಬಂಧನೆಗಳಿಗೆ ವಿರುದ್ಧ'ವಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧದ ಕ್ರಿಮಿನಲ್ ಪ್ರಕರಣವು ಇನ್ನೂ ನ್ಯಾಯಾಲಯದ ಪರಿಗಣನೆಯ ಹಂತವನ್ನೂ ತಲುಪಿಲ್ಲ ಎಂದು ಅವರು ವಾದಿಸಿದರು. ಕಾನೂನಿನ ಪ್ರಕಾರ ಮಾಹಿತಿ ಬಹಿರಂಗಪಡಿಸಲು ಅಗತ್ಯವಿರುವುದಕ್ಕಿಂತ ಬಹಳ ಹಿಂದಿನ ಹಂತದಲ್ಲಿಯೇ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಸಿಂಘ್ವಿ ವಾದ ಮಂಡಿಸಿದರು.
ಮಧ್ಯಪ್ರದೇಶದ ಎಲ್ಲಾ ಮೂರು ರಾಜ್ಯಸಭಾ ಸ್ಥಾನಗಳನ್ನು ಬಿಜೆಪಿಗೆ ಖಚಿತಪಡಿಸಿಕೊಳ್ಳಲು ಇದೊಂದು "ರಾಜಕೀಯ ಪಿತೂರಿ" ಎಂದು ಕಾಂಗ್ರೆಸ್ ಆರೋಪಿಸಿದರೆ, ಸಂಬಂಧಿತ ಮಾಹಿತಿಯನ್ನು ಬಹಿರಂಗಪಡಿಸದ ಬಗ್ಗೆ ಬಿಜೆಪಿ ನಟರಾಜನ್ ಅವರನ್ನು ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಟರಾಜನ್
ಈ ಮಧ್ಯೆ, ಮೀನಾಕ್ಷಿ ನಟರಾಜನ್ ತಮ್ಮ ರಾಜ್ಯಸಭೆ ನಾಮಪತ್ರ ತಿರಸ್ಕಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಚುನಾವಣಾಧಿಕಾರಿ ಕಾನೂನುಬಾಹಿರವಾಗಿ ಪಕ್ಷಪಾತದಿಂದ ವರ್ತಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಈ ನಿರ್ಧಾರವನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಈ ವಿಷಯದ ಬಗ್ಗೆ ಶೀಘ್ರ ವಿಚಾರಣೆ ನಡೆಸುವಂತೆ ಕೋರಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ. (ANI)


