ಯಾವುದೇ ಗೊಂದಲ ಇಲ್ಲದಿರುವ ಹಾಗೂ ಒಬ್ಬರೇ ಆಕಾಂಕ್ಷಿ ಇರುವ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್‌ ಬಿಡುಗಡೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಬೆಂಗಳೂರು (ಮಾ.26): ಯಾವುದೇ ಗೊಂದಲ ಇಲ್ಲದಿರುವ ಹಾಗೂ ಒಬ್ಬರೇ ಆಕಾಂಕ್ಷಿ ಇರುವ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್‌ ಬಿಡುಗಡೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್‌ ಶನಿವಾರ 124 ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಿದೆ. ಎರಡ್ಮೂರು ಆಕಾಂಕ್ಷಿಗಳಿರುವ ಕ್ಷೇತ್ರಗಳ ಕುರಿತು ಮತ್ತೊಮ್ಮೆ ಸ್ಕ್ರೀನಿಂಗ್‌ ಸಮಿತಿ ಹಾಗೂ ಕೇಂದ್ರ ಚುನಾವಣೆ ಸಮಿತಿ ಸಭೆಯಲ್ಲಿ ಚರ್ಚಿಸಿ ಅಂತಿಮ ಪಡಿಸಲಾಗುವುದು. 

ಇನ್ನು ಕೆಲವು ಕ್ಷೇತ್ರದಲ್ಲಿ ಬೇರೆ ಆಕಾಂಕ್ಷಿಗಳು ಇರುವುದರಿಂದ ಆರು ಮಂದಿ ಹಾಲಿ ಶಾಸಕರಿಗೆ ಟಿಕೆಟ್‌ ಅಂತಿಮಗೊಂಡಿಲ್ಲ ಎಂದು ತಿಳಿಸಿದರು. ಕೇವಲ ಸರ್ವೇ ವರದಿಯನ್ನು ಆಧಾರವಾಗಿ ಇಟ್ಟುಕೊಂಡು ಟಿಕೆಟ್‌ ನೀಡಿಲ್ಲ ಎಂದರು. ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ, ಕಾರ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು, ಎಐಸಿಸಿ ಕಾರ್ಯದರ್ಶಿಗಳು, ಬ್ಲಾಕ್‌ ಸಮಿತಿಯ ಅಭಿಪ್ರಾಯ ಪಡೆದು ಉತ್ತಮ ಅಭ್ಯರ್ಥಿಗಳನ್ನು ಅಂತಿಮ ಪಡಿಸಲಾಗಿದೆ. ಸರ್ವೇ ವರದಿಯೊಂದೇ ಮಾನದಂಡವಲ್ಲ ಎಂದರು.

ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಎದುರು ವಿಜಯೇಂದ್ರ ಸ್ಪರ್ಧೆ ಮಾಡ್ತಾರಾ?

ಕ್ಷೇತ್ರದ ಆಯ್ಕೆ ಹೈಕಮಾಂಡ್‌ಗೆ ಬಿಟ್ಟಿದ್ದು: ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್‌ಗೆ ಬಿಟ್ಟಿರುವ ವಿಚಾರ. ಹೈಕಮಾಂಡ್‌ ಎಲ್ಲಿ ಹೇಳುತ್ತದೆಯೋ ಅಲ್ಲಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ರಾಹುಲ್‌ ಗಾಂಧಿ ಅವರನ್ನು ಎದುರಿಸಲು ಸಾಧ್ಯವಾಗದೇ ಅವರ ವಿರುದ್ಧ ಬಿಜೆಪಿ ಷಡ್ಯಂತ್ರ ನಡೆಸಿದೆ ಎಂದು ಟೀಕಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ 25ಕ್ಕೂ ಹೆಚ್ಚು ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಅಲ್ಲಿನ ಕಾರ್ಯಕರ್ತರು, ಮುಖಂಡರು ಆಹ್ವಾನ ನೀಡಿದ್ದಾರೆ. 

ಆದರೆ, ನಾನು ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇನೆ. ಅದು ಎಲ್ಲಿ ಹೇಳುತ್ತದೆಯೋ ಅಲ್ಲಿ ಸ್ಪರ್ಧಿಸುವೆ ಎಂದು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯಗೆ ಕ್ಷೇತ್ರವೇ ಇಲ್ಲ ಎಂಬ ಬಿಜೆಪಿಗೆ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕೋಲಾರ, ಬಳ್ಳಾರಿ, ಬಾದಾಮಿ ಹೀಗೆ 25ಕ್ಕೂ ಹೆಚ್ಚು ಕ್ಷೇತ್ರಗಳಿಂದ ಆಹ್ವಾನ ಬಂದಿದೆ ಎಂದರೆ ಕ್ಷೇತ್ರವಿಲ್ಲ ಎಂದು ಹೇಗೆ ಹೇಳುತ್ತೀರಿ? ಗೆಲ್ಲುತ್ತೇನೆ ಎಂಬ ಭರವಸೆ, ಪ್ರೀತಿ ವಿಶ್ವಾಸದಿಂದಲೇ ನನ್ನನ್ನು ಕಾರ್ಯಕರ್ತರು ಕರೆಯುತ್ತಿದ್ದರಲ್ವಾ? ಎಂದು ಮರುಪ್ರಶ್ನೆ ಮಾಡಿದರು.

ಬಿಜೆಪಿ ಷಡ್ಯಂತ್ರ: ರಾಹುಲ್‌ ಗಾಂಧಿ ಅವರನ್ನು ಬಿಜೆಪಿಯವರು ಬೇಕು ಅಂತಾನೆ ಅನರ್ಹಗೊಳಿಸಿದ್ದಾರೆ. ಬೇರೆ ಪಕ್ಷವನ್ನು ಎದುರಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಈ ರೀತಿ ಷಡ್ಯಂತ್ರ ಮಾಡುತ್ತಿದ್ದಾರೆ ಅಷ್ಟೇ ಎಂದು ನುಡಿದ ಅವರು, ಈ ಹಿಂದೆ ಯಾವುದಾದರೂ ಮಾನಹಾನಿ ಕೇಸ್‌ಗೆ ಎರಡು ವರ್ಷ ಶಿಕ್ಷೆಯಾಗಿರುವುದುಂಟಾ? ಇರಲಿ ಕೋರ್ಚ್‌ ತೀರ್ಪು ನೀಡಿದೆ. ಆ ಬಗ್ಗೆ ಮಾತು ಬೇಡ. ಆದರೆ, ಅದೇ ಕೋರ್ಚ್‌ ಜಾಮೀನು ಕೂಡ ಕೊಟ್ಟಿದೆ. ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಆದರೆ ಅಷ್ಟರೊಳಗೆ ಅನರ್ಹಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿ. ನೀರವ್‌ ಮೋದಿ, ವಿಜಯ ಮಲ್ಯ ಸೇರಿದಂತೆ ಹಲವರು ಸಾರ್ವಜನಿಕರ ಹಣ ಲೂಟಿ ಹೊಡೆದವರು. ಅಂಥವರಿಗೆ ಏನಂತ ಕರಿಬೇಕು ಎಂದು ಪ್ರಶ್ನಿಸಿದರು.

ಪ್ರಾದೇಶಿಕ ಭಾಷೆ ಹೆಸರಲ್ಲಿ ರಾಜಕೀಯದಾಟ: ಪ್ರಧಾನಿ ಮೋದಿ

ಇದು ಬಿಜೆಪಿಯವರು ಬೇಕಂತಲೇ ಮಾಡಿರುವ ಷಡ್ಯಂತ್ರ ಎಂದ ಅವರು, ಲೂಟಿ ಹೊಡೆದವರಿಗೆ ಶಿಕ್ಷೆಯಾಗಬೇಕು. ಅವರನ್ನು ರಕ್ಷಿಸುವವರಿಗೆ, ಸಹಕರಿಸಿದವರಿಗೆ ಶಿಕ್ಷೆಯಾಗಬೇಕು. ಸತ್ಯ ಮಾತನಾಡುವುದೇ ತಪ್ಪಾ? ಸತ್ಯ ಮಾತನಾಡಿದವರಿಗೆ ಶಿಕ್ಷೆ ಎಂದರೆ ಹೇಗೆ? ಎಂದ ಅವರು, ಸತ್ಯ ಮಾತನಾಡಿದ್ದಕ್ಕೆ ಅನರ್ಹತೆ ಆಗುತ್ತಾರೆ ಎಂದರೆ ಈ ದಿನವನ್ನು ಕರಾಳ ದಿನ ಎನ್ನದೇ ಮತ್ತೆ ಏನು ಹೇಳಬೇಕು ಎಂದರು. ಇದು ಪ್ರಜಾಪ್ರಭುತ್ವದ ವಿಪರಾರ‍ಯಸ ಎಂದರು.