ಪ್ರಾದೇಶಿಕ ಭಾಷೆ ಹೆಸರಲ್ಲಿ ರಾಜಕೀಯದಾಟ: ಪ್ರಧಾನಿ ಮೋದಿ
ದೇಶದಲ್ಲಿ ಪ್ರಾದೇಶಿಕ ಭಾಷೆಗಳ ಹೆಸರಿನಲ್ಲಿ ನಡೆಯುವ ರಾಜಕೀಯಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಿಡಿಕಾರಿದ್ದಾರೆ. ಕಳೆದ 70 ವರ್ಷಗಳಲ್ಲಿ ಕೆಲ ರಾಜಕೀಯ ಪಕ್ಷಗಳು ಭಾಷೆಗಳ ಹೆಸರಿನಲ್ಲಿ ರಾಜಕೀಯದಾಟ ಆಡಿಕೊಂಡು ಬಂದಿವೆ.
ಚಿಕ್ಕಬಳ್ಳಾಪುರ (ಮಾ.26): ದೇಶದಲ್ಲಿ ಪ್ರಾದೇಶಿಕ ಭಾಷೆಗಳ ಹೆಸರಿನಲ್ಲಿ ನಡೆಯುವ ರಾಜಕೀಯಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಿಡಿಕಾರಿದ್ದಾರೆ. ಕಳೆದ 70 ವರ್ಷಗಳಲ್ಲಿ ಕೆಲ ರಾಜಕೀಯ ಪಕ್ಷಗಳು ಭಾಷೆಗಳ ಹೆಸರಿನಲ್ಲಿ ರಾಜಕೀಯದಾಟ ಆಡಿಕೊಂಡು ಬಂದಿವೆ. ರಾಜಕೀಯ ಸ್ವಾರ್ಥ ಮತ್ತು ವೋಟ್ ಬ್ಯಾಂಕ್‌ಗಾಗಿ ಪ್ರಾದೇಶಿಕ ಭಾಷೆಗಳನ್ನು ಬಳಸಿಕೊಂಡವೇ ಹೊರತು ಅವುಗಳಿಗೆ ಯಾವುದೇ ಪ್ರೋತ್ಸಾಹ ನೀಡಲಿಲ್ಲ. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ರಾಮೀಣ, ಬಡ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಸೇರಿ ವಿವಿಧ ಪ್ರಾದೇಶಿಕ ಭಾಷೆಗಳಲ್ಲೂ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಪಡೆಯಲು ಅವಕಾಶ ಒದಗಿಸಿದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಶನಿವಾರ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಧುಸೂದನ ಸಾಯಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಉದ್ಘಾಟಿಸಿದ ಬಳಿಕ ಪ್ರೇಮಾಮೃತಂ ಸಭಾಂಗಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಕನ್ನಡ ಒಂದು ಸಮೃದ್ಧ ಹಾಗೂ ದೇಶದ ಗೌರವ ಹೆಚ್ಚಿಸುವ ಭಾಷೆಯಾಗಿದೆ. ಈ ಹಿಂದಿನ ಸರ್ಕಾರಗಳು ಎಂಜಿನಿಯರಿಂಗ್, ಮೆಡಿಕಲ್ ಮತ್ತು ತಾಂತ್ರಿಕ ಶಿಕ್ಷಣವನ್ನು ಕನ್ನಡ ಸೇರಿ ಯಾವುದೇ ಪ್ರಾದೇಶಿಕ ಭಾಷೆಗಳಲ್ಲಿ ನೀಡಲು ಕ್ರಮ ಕೈಗೊಂಡಿರಲಿಲ್ಲ.
ರಾಹುಲ್‌ಗೊಂದು, ಇನ್ನೊಬ್ಬರಿಗೊಂದು ಕಾನೂನಿಲ್ಲ: ಸಿಎಂ ಬೊಮ್ಮಾಯಿ
ಕೆಲ ರಾಜಕೀಯ ಪಕ್ಷಗಳು ಭಾಷೆಗಳ ಹೆಸರಲ್ಲಿ ಸ್ವಹಿತಾಸಕ್ತಿ ಕಾಯ್ದುಕೊಂಡು ಬಂದಿವೆ. ಇಂಥವರಿಗೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ಮುಖ್ಯವಾಯಿತೇ ಹೊರತು ಭಾಷೆಗಳ ಅಭಿವೃದ್ಧಿಗೆ ಯಾವುದೇ ಬೆಂಬಲವಾಗಲಿ, ಪ್ರೋತ್ಸಾಹವಾಗಲಿ ಅವರಿಂದ ಸಿಗಲಿಲ್ಲ. ಅಲ್ಲದೆ ಅವರಿಗೆ ಗ್ರಾಮೀಣ, ಬಡ ಮತ್ತು ಹಿಂದುಳಿದ ಕುಟುಂಬಗಳ ಮಕ್ಕಳು ವೈದ್ಯರು, ಎಂಜಿನಿಯರ್‌ಗಳು ಆಗುವುದು ಇಷ್ಟವೂ ಇರಲಿಲ್ಲ ಎಂದು ದೂರಿದರು. ಆದರೆ ಗ್ರಾಮೀಣ ಪ್ರದೇಶದ ಯುವಕ, ಯುವತಿಯರು ಎದುರಿಸುತ್ತಿರುವ ಸವಾಲುಗಳನ್ನು ನಮ್ಮ ಸರ್ಕಾರ ಅರ್ಥ ಮಾಡಿಕೊಂಡಿದ್ದು, ಕನ್ನಡ ಸೇರಿ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಕ್ಷಣ ಬಿಬಿಎಂಪಿ ಚುನಾವಣೆ: ಸಿದ್ದರಾಮಯ್ಯ
ವೈದ್ಯ ಕಾಲೇಜು ಹೆಚ್ಚಳ: 2014ರಲ್ಲಿ ದೇಶದಲ್ಲಿ 380ಕ್ಕಿಂತಲೂ ಕಡಿಮೆ ಮೆಡಿಕಲ್ ಕಾಲೇಜುಗಳಿದ್ದವು. ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕದ 9 ವರ್ಷಗಳ ಅವಧಿಯಲ್ಲಿ ದೇಶದ ಮೆಡಿಕಲ್ ಕಾಲೇಜುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಪ್ರಸ್ತುತ 650ಕ್ಕೂ ಹೆಚ್ಚು ಮೆಡಿಕಲ್ ಕಾಲೇಜಗಳಿವೆ. ಕರ್ನಾಟಕವೊಂದರಲ್ಲೇ 70 ಮೆಡಿಕಲ್ ಕಾಲೇಜುಗಳಿವೆ. 75 ವರ್ಷಗಳಲ್ಲಿ ವೈದ್ಯರಾದ ಸಂಖ್ಯೆಯಷ್ಟುವೈದ್ಯರು ಮುಂದಿನ 10 ವರ್ಷಗಳಲ್ಲಿ ಸೃಷ್ಟಿಯಾಗಲಿದ್ದಾರೆ. ಮೆಡಿಕಲ್ ಕಾಲೇಜುಗಳ ಜೊತೆ ಜೊತೆಗೆ ನರ್ಸಿಂಗ್ ಕ್ಷೇತ್ರಕ್ಕೂ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದ್ದು, ಈ ವರ್ಷದ ಬಜೆಟ್‌ನಲ್ಲಿ ಒಟ್ಟು 150 ನರ್ಸಿಂಗ್ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಘೋಷಣೆ ಮಾಡಿದೆ ಎಂದರು.