ಆತ್ಮೀಯತೆ, ವಿಶ್ವಾಸಕ್ಕೂ ಹಾಗೂ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸ ಇದೆ: ಬಿಎಸ್‌ವೈ
• ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಅಖಾಡಕ್ಕೆ ಬಿಎಸ್‌ವೈ ಎಂಟ್ರಿ..!
• 'ಹನುಮಂತ ನಿರಾಣಿ ಹೆಚ್ಚಿನ ಲೀಡ್ ಗೆಲ್ತಾರೆ, ಅರುಣ್ ಶಹಾಪುರ್ ಲೀಡ್ ಕಡಿಮೆ ಬರಬಹುದು'
• ರಾಜ್ಯಸಭೆ ಮೂರು ಸ್ಥಾನಗಳಲ್ಲಿ ಗೆಲ್ತೇವೆ ಎಂದ ರಾಜಾಹುಲಿ..!
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಜೂ.07): ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣಾ ಅಖಾಡಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಎಂಟ್ರಿ ಕೊಟ್ಟಿದ್ದಾರೆ. ಇಂದು ಸಂಜೆ ಬೆಳಗಾವಿಗೆ ಆಗಮಿಸಿದ ಮಾಜಿ ಸಿಎಂ ಬಿಎಸ್‌ವೈ ನಾಳೆಯಿಂದ ಎರಡು ದಿನ ವಾಯುವ್ಯ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, 'ನಾಳೆ ನಾಡಿದ್ದು ಹನುಮಂತ ನಿರಾಣಿ, ಅರುಣ ಶಹಾಪುರ್ ಪರ ಮತ ಯಾಚನೆ ಮಾಡುವೆ. ಹನುಮಂತ ನಿರಾಣಿ 40 ರಿಂದ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಅರುಣ್ ಶಹಾಪುರ್ ಲೀಡ್ ಕಡಿಮೆ ಬರಬಹುದು ಆದ್ರೆ ಗೆಲ್ತೇವೆ' ಎಂದರು.
ಇನ್ನು ರಾಜ್ಯಸಭೆಯ ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದೇವೆ. ಮೂರು ಸ್ಥಾನಗಳನ್ನು ನೂರಕ್ಕೆ ನೂರು ನಾವು ನಿಶ್ಚಿತವಾಗಿ ಗೆಲ್ತೇವೆ. ಲೆಹರ್ ಸಿಂಗ್ ಸೇರಿ ಮೂರು ಸ್ಥಾನಗಳನ್ನು ಗೆಲ್ಲುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಆಶೀರ್ವಾದದಿಂದ ಅನುಕೂಲಕರ ವಾತಾವರಣ ಇದೆ. ಹೀಗಾಗಿ ಬರುವ ಚುನಾವಣೆಯಲ್ಲಿ ಬಹಳ ಸುಲಭವಾಗಿ ಗೆಲ್ಲಲು ಅವಕಾಶವಿದೆ' ಎಂದರು. ಇನ್ನು ಅರುಣ್ ಶಹಾಪುರ್ ಏಕೆ ಕಡಿಮೆ ಲೀಡ್‌ನಲ್ಲಿ ಗೆಲ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬಿಎಸ್‌ವೈ, 'ಹನುಮಂತ ನಿರಾಣಿ ಲೀಡ್ 50 ಸಾವಿರ ಆದ್ರೆ, ಅರುಣ್ ಶಹಾಪುರ್ ಲೀಡ್ 15-20 ಸಾವಿರ ಆಗುತ್ತೆ! ಅಷ್ಟು ದೊಡ್ಡ ಪ್ರಮಾಣದಲ್ಲಿ ಮತದಾರರಿಲ್ಲ, 1 ಲಕ್ಷ ಮತದಾರರಿದ್ದಾರೆ. ಎರಡೂ ಕ್ಷೇತ್ರದಲ್ಲಿ ಗೆಲ್ತೇವೆ' ಎಂದು ಸಮಜಾಯಿಷಿ ಕೊಟ್ಟರು.
Karnataka Politics: 'ಕಾಂಗ್ರೆಸ್‌ನಿಂದ ಟೂಲ್‌ಕಿಟ್ ಟೆರರಿಸಂ'
ಸಿದ್ದರಾಮಯ್ಯ ಭೇಟಿ ವೇಳೆ ರಾಜಕೀಯ ಚರ್ಚೆ ಆಗಿಲ್ಲ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಮಾತುಕತೆ ವಿಚಾರವಾಗಿ ರಾಜ್ಯಸಭೆ ಚುನಾವಣಾ ವಿಚಾರವಾಗಿ ಚರ್ಚೆ ಆಯ್ತಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬಿ.ಎಸ್.ಯಡಿಯೂರಪ್ಪ, 'ಯಾವುದೇ ಒಂದು ಶಬ್ದ ಚರ್ಚೆ ಆಗಿಲ್ಲ. ನಾನು ಹುಬ್ಬಳ್ಳಿಗೆ ಹೋಗಿ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ ಅಂತಾ ಸಿದ್ದರಾಮಯ್ಯ ಹೇಳಿದರು. ನಾನು ಬೆಳಗಾವಿಗೆ ಹೋಗಿ ಚುನಾವಣಾ ಪ್ರಚಾರಕ್ಕೆ ಹೋಗ್ತಿನಿ ಎಂದೆ. ಇಷ್ಟೇ ಮಾತನಾಡಿದ್ದು ರಾಜಕೀಯ ಕುರಿತು ಏನೂ ಮಾತನಾಡಿಲ್ಲ' ಎಂದರು.
MLC Election: 'ಸಿದ್ದರಾಮಯ್ಯ, ಡಿಕೆಶಿಗೆ ಮುಜುಗರ ತಪ್ಪಿಸಲು ರಾಜೀನಾಮೆ'
ಇಬ್ಬರೂ ನಗು ನಗುತಾ ಮಾತನಾಡಿದ್ರಲ್ಲಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, 'ವಿರೋಧ ಏನಿದೆ? ವಿರೋಧ ಪಕ್ಷದಲ್ಲಿದ್ದಾರಂತೆ ವಿರೋಧ ಮಾಡಬೇಕಂತಿದೆಯಾ? ಆತ್ಮೀಯತೆ, ವಿಶ್ವಾಸಕ್ಕೂ ಹಾಗೂ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಅವರು ಅವರದ್ದೇ ಆದ ರೀತಿ ಕೆಲಸ ಮಾಡ್ತಾರೆ, ನಾವು ನಮ್ಮದೇ ಆದ ರೀತಿ ಕೆಲಸ ಮಾಡ್ತೇವೆ' ಎಂದರು. ಕಾಂಗ್ರೆಸ್ ಚಡ್ಡಿ ಸುಡುವ ಅಭಿಯಾನ ಪ್ರಶ್ನೆಗೆ ಪ್ರತಿಕ್ರಿಯಿಸದ ಯಡಿಯೂರಪ್ಪ, 'ಅದಕ್ಕೆ ನಾನೇನೂ ರಿಯ್ಯಾಕ್ಷನ್ ಕೊಡಲು ಇಷ್ಟ ಪಡಲ್ಲ' ಎಂದರು.