ನೋಟಿಸ್ ಕೊಡುವ ಹಂತಕ್ಕೆ ಬಂತು ಕಾಂಗ್ರೆಸ್ ಒಳಜಗಳ: ಎಚ್.ಸಿ.ಯೋಗೇಶ್ ವಿರುದ್ಧ ದೂರು
ವಿಧಾನ ಪರಿಷತ್ತು ಮಾಜಿ ಸದಸ್ಯ ಆಯನೂರು ಮಂಜುನಾಥ್ ಅವರು ಕಾಂಗ್ರೆಸ್ ಸೇರುವ ಮುನ್ನವೇ ಅವರ ಪಕ್ಷ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದ ಎಚ್.ಸಿ.ಯೋಗೇಶ್ ವಿರುದ್ಧ ಕಾಂಗ್ರೆಸ್ ಮುಖಂಡರೇ ದೂರು ನೀಡಿದ್ದು, ಈ ಒಳಜಗಳ ಈಗ ನೋಟೀಸ್ ಜಾರಿಮಟ್ಟಕ್ಕೆ ಹೋಗಿದೆ.
ಶಿವಮೊಗ್ಗ (ಸೆ.08): ವಿಧಾನ ಪರಿಷತ್ತು ಮಾಜಿ ಸದಸ್ಯ ಆಯನೂರು ಮಂಜುನಾಥ್ ಅವರು ಕಾಂಗ್ರೆಸ್ ಸೇರುವ ಮುನ್ನವೇ ಅವರ ಪಕ್ಷ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದ ಎಚ್.ಸಿ.ಯೋಗೇಶ್ ವಿರುದ್ಧ ಕಾಂಗ್ರೆಸ್ ಮುಖಂಡರೇ ದೂರು ನೀಡಿದ್ದು, ಈ ಒಳಜಗಳ ಈಗ ನೋಟೀಸ್ ಜಾರಿಮಟ್ಟಕ್ಕೆ ಹೋಗಿದೆ. ಪಕ್ಷದಲ್ಲಿ ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಮಹಾನಗರ ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಶೋಕಾಸ್ ನೋಟೀಸ್ ಜಾರಿಗೊಳಿಸಿದ್ದಾರೆ. ಆಯನೂರು ಮಂಜುನಾಥ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೆ ನಿರ್ಧರಿಸಿದಾಗ ಎಚ್.ಸಿ ಯೋಗೇಶ್ ಇದನ್ನು ವಿರೋಧಿಸಿದ್ದರು.
ಅವರ ವಿರೋಧವನ್ನು ಲೆಕ್ಕಿಸದೇ ಕಾಂಗ್ರೆಸ್ ವರಿಷ್ಠರು ಆಯನೂರು ಮಂಜುನಾಥ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಪಕ್ಷ ಸೇರ್ಪಡೆಗೊಂಡ ನಂತರ ಮೊದಲ ಬಾರಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಆಯನೂರು ಮಂಜುನಾಥ್ ಅವರನ್ನು ಎಚ್.ಸಿ. ಯೋಗೀಶ್ ದೈಹಿಕವಾಗಿ ತಳ್ಳಿದ್ದಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಪತ್ರಿಕಾಗೋಷ್ಟಿ ಸಂದರ್ಭದಲ್ಲೂ ಆಯನೂರು ಮಂಜುನಾಥ್ ಅವರಿಗೆ ಆಸನ ಸಿಗದಂತೆ ಮಾಡಿ ಅವಮಾನ ಮಾಡಿದ್ದಾರೆ ಎಂದು ಮಾಜಿ ವಿಧಾನ ಪರಿಷತ್ತು ಸದಸ್ಯರಾದ ಆರ್.ಪ್ರಸನ್ನಕುಮಾರ್, ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ ನೇತೃತ್ವದ 20ಕ್ಕೂ ಹೆಚ್ಚಿನ ಕಾಂಗ್ರೆಸ್ ಪದಾಧಿಕಾರಿಗಳು ಜಿಲ್ಲಾ ಕಾಂಗ್ರೆಸ್ ಮತ್ತು ಕೆಪಿಸಿಸಿಗೆ ಲಿಖಿತ ದೂರು ನೀಡಿದ್ದರು.
ದೇಶ ಉಳಿಯಬೇಕಾದರೆ ಬಿಜೆಪಿಯನ್ನು ಬುಡಸಮೇತ ಕಿತ್ತು ಹಾಕಿ: ಕಿಮ್ಮನೆ ರತ್ನಾಕರ್
ವಿಧಾನಸಭಾ ಚುನಾವಣೆಯಲ್ಲಿ ಆಯನೂರು ಮಂಜುನಾಥ್ ಜೆಡಿಎಸ್ ಸೇರ್ಪಡೆಗೊಂಡು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಚ್.ಸಿ. ಯೋಗೇಶ್ ಅವರನ್ನು ಎದುರಿಸಿದ್ದರು. ಇವರ ಜೊತೆಗೆ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದರು. ಚುನಾವಣೆ ಸಂದರ್ಭ ಅನೇಕರು ಕಾಂಗ್ರೆಸ್ ಬಿಟ್ಟು ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದರು. ಇದು ಅಭ್ಯರ್ಥಿಯಾಗಿದ್ದ ಎಚ್.ಸಿ. ಯೋಗೀಶ್ ಅಸಮಾಧಾನಕ್ಕೆ ಕಾರಣವಾಗಿತ್ತು.
ಹೀಗಾಗಿ ಆಯನೂರು ಮಂಜುನಾಥ್ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಗೆ ಎಚ್.ಸಿ.ಯೋಗೇಶ್ ಅವರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಪಕ್ಷದ ನಾಯಕರಿಗೆ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಬೇಡ ಎಂದು ಪತ್ರವನ್ನೂ ಬರೆದಿದ್ದರು. ಈ ಬೆಳೆವಣಿಗೆ ಬೆನ್ನಲ್ಲೆ ಆಯನೂರು ಮಂಜುನಾಥ್ ಅವರು ಬೆಂಗಳೂರಿನಲ್ಲಿ ಪಕ್ಷದ ವರಿಷ್ಠರ ಸಮ್ಮುಖದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದಾದ ಬಳಿಕವೂ ಎಚ್.ಸಿ.ಯೋಗೇಶ್ ಅವರು ಆಯನೂರು ವಿರುದ್ಧ ಅಸಮಾಧಾನ ಹೊರಹಾಕುತ್ತಲೇ ಬಂದಿದ್ದರು.
ಆಯನೂರು ಪಕ್ಷದ ಸೇರ್ಪಡೆಯಾದರೂ ಪಕ್ಷದಲ್ಲಿ ಎಚ್.ಸಿ.ಯೋಗೇಶ್ ಸರ್ವಾಧಿಕಾರಿ ಧೋರಣೆ, ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ಪಕ್ಷದ ವರಿಷ್ಟರ ತೀರ್ಮಾನದ ವಿರುದ್ಧ ಪಕ್ಷದ ಗಮನಕ್ಕೆ ತಾರದೆ ಪತ್ರಿಕಾಗೋಷ್ಟಿ ನಡೆಸುವುದು ಸೇರಿದಂತೆ ಹಲವು ಆರೋಪಗಳ ಪಟ್ಟಿ ಮಾಡಿ ಕೆಪಿಸಿಸಿ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ದೂರು ನೀಡಲಾಗಿತ್ತು. ವಿಧಾನಸಭೆ, ಲೋಕಸಭೆ, ರಾಜ್ಯಸಭೆ, ವಿಧಾನ ಪರಿಷತ್ತು ಸೇರಿದಂತೆ ನಾಲ್ಕೂ ಸದನಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯ ನಾಯಕ ಆಯನೂರು ಮಂಜುನಾಥ್ ಅವರ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ ಬಂದಂತಾಗಿದೆ.
ರಾಜ್ಯದಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ಈ ಹಿನ್ನಲೆಯಲ್ಲೇ ಪಕ್ಷದ ಕರ್ನಾಟಕ ಉಸ್ತುವಾರಿ ರಣಧೀಪ್ ಸುರ್ಜಿವಾಲಾ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಆಯನೂರು ಮಂಜುನಾಥ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಆದರೆ, ಆಯನೂರು ಅವರ ಸೇರ್ಪಡೆಯನ್ನು ವಿರೋಧಿಸುವ ಹೇಳಿಕೆಗಳನ್ನು ನೀಡಿರುವ ಯೋಗೀಶ್ ಅವರು ಆಯನೂರು ಮಂಜುನಾಥ್ ಪಕ್ಷದ ಕಚೇರಿಗೆ ಆಗಮಿಸಿದಾಗ ಅವರನ್ನು ಅವಮಾನಿಸಿದ್ದಾರೆ. ಇದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಪ್ರಮುಖ ಪದಾಧಿಕಾರಿಗಳು ಕೆಪಿಸಿಸಿ ಮತ್ತು ಜಿಲ್ಲಾ ಕಾಂಗ್ರೆಸ್‌ಗೆ ನೀಡಿರುವ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದು, ಪಕ್ಷದ ಶಿಸ್ತು ಉಲ್ಲಂಘಿಸಿರುವ ಯೋಗೀಶ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಿದ್ದಾರೆ.
ಇಂಡಿಯಾ ಬದಲು ಭಾರತ ಹೆಸರಿನಲ್ಲೂ ಕಾಂಗ್ರೆಸ್ ರಾಜಕೀಯ: ಸಂಸದ ರಾಘವೇಂದ್ರ
ಈ ದೂರಿನ ಹಿನ್ನೆಲೆಯಲ್ಲಿ ಯೋಗೀಶ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಎಸ್. ಸುಂದರೇಶ್ ಅವರು ಪಕ್ಷದ ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಯಾಕೆ ಪಕ್ಷದಿಂದ ಉಚ್ಚಾಟಿಸಬಾರದು ಎಂದು ಶೋಕಾಸ್ ನೋಟೀಸ್ ಜಾರಿಗೊಳಿಸಿದ್ದು, ಸೂಕ್ತ ವಿವರಣೆ ನೀಡುವಂತೆ ಮೂರು ದಿನಗಳ ಗಡುವು ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.