* ಉಪ್ಪಾರಪೇಟೆ ಠಾಣೆ ದೂರು ನೀಡಿದ ಎನ್.ಆರ್.ರಮೇಶ್* ಗೃಹ ಸಚಿವರಿಗೆ ನಿಂದನೆ: ಬಿ.ಕೆ. ಹರಿಪ್ರಸಾದ್ ವಿರುದ್ಧ ದೂರು* ಹರಿಪ್ರಸಾದ್ ಮಾತು ಕಾನೂನಾತ್ಮಕವಾಗಿ ಅಪರಾಧ
ಬೆಂಗಳೂರು(ಏ.14): ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಅವರ ಬಗ್ಗೆ ನಿಂದನಾತ್ಮಕ ಪದ ಬಳಕೆ ಮಾಡಿರುವ ವಿಧಾನ ಪರಿಷತ್ ಬಿ.ಕೆ.ಹರಿಪ್ರಸಾದ್(BK Hariprasad) ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ಎನ್.ಆರ್.ರಮೇಶ್(NR Ramesh) ಬುಧವಾರ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಏ.11ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಕಾಂಗ್ರೆಸ್(Congress) ಪಕ್ಷದ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಬಗ್ಗೆ ಅತ್ಯಂತ ಹಗುರ ಮತ್ತು ನಿಂದನಾತ್ಮಕ ಪದಗಳನ್ನು ಬಳಸಿದ್ದಾರೆ. ಗೃಹಸಚಿವರಿಗೆ ಕುಡಿಯುವ ಅಭ್ಯಾಸ ಇದೆಯೋ? ಇಲ್ಲವೋ? ಅಥವಾ ಗಾಂಜಾ ಸೇದುವ ಅಭ್ಯಾಸ ಇರಬೇಕು ಎಂದು ಬಹಿರಂಗ ಸಭೆಯಲ್ಲಿ ಮಾತನಾಡಿದ್ದಾರೆ. ಅಂತೆಯೇ ಆರಗ ಜ್ಞಾನೇಂದ್ರ ಅಜ್ಞಾನಿ ಜ್ಞಾನೇಂದ್ರ ಎಂಬ ಪದಗಳನ್ನು ಬಳಸಿದ್ದಾರೆ.
'ಅಲ್ಪಸಂಖ್ಯಾತ, ದಲಿತರ, ಮಹಿಳೆಯರ ದೌರ್ಜನ್ಯದ ಹಿಂದೆ ದೊಡ್ಡ ಷಡ್ಯಂತ್ರವಿದೆ'
ಅತ್ಯಂತ ಪ್ರಾಮಾಣಿಕ ರಾಜಕೀಯ ಜೀವನ ನಡೆಸುತ್ತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಬಗ್ಗೆ ಹಗುರ ಮತ್ತು ನಿಂದನಾತ್ಮಕ ಪದಗಳನ್ನು ಬಳಸಿ ಮಾತನಾಡಿರುವ ಬಿ.ಕೆ.ಹರಿಪ್ರಸಾದ್ ಅವರ ಮಾತುಗಳು ಕಾನೂನಾತ್ಮಕವಾಗಿ ಅಪರಾಧವಾಗಿದೆ. ಗೃಹ ಸಚಿವರಿಗೆ ಮಾನಹಾನಿ ಮಾಡಿರುವ ಮತ್ತು ರಾಜ್ಯದ ಗೌರವಕ್ಕೆ ಧಕ್ಕೆ ತಂದಿರುವ ಬಿ.ಕೆ.ಹರಿಪ್ರಸಾದ್ ವಿರುದ್ಧ ಕಾನೂನೂ ರೀತಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಎನ್.ಆರ್.ರಮೇಶ್ ದೂರಿನಲ್ಲಿ ಕೋರಿದ್ದಾರೆ.
ಆರ್‌ಎಸ್ಎಸ್‌ನವರು ರಣಹೇಡಿಗಳು ಎಂದ ಬಿ.ಕೆ.ಹರಿಪ್ರಸಾದ್
ಬೆಳಗಾವಿ: ಬಿಜೆಪಿ, ಆರ್‌ಎಸ್ಎಸ್‌ನವರು ಕರ್ನಾಟಕದ ಜನ ತಲೆತಗ್ಗಿಸುವಂತ ಕೆಲಸ ಮಾಡ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದರು.
Hijab Controversy: ಬಿಜೆಪಿ ನಡೆಸುತ್ತಿರುವ ಕುತಂತ್ರ: ಕಮಲ ನಾಯಕರ ವಿರುದ್ಧ ಹರಿಹಾಯ್ದ ಹರಿಪ್ರಸಾದ್
ಏ.10 ರಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಬಿ.ಕೆ.ಹರಿಪ್ರಸಾದ್, 'ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ರಾಷ್ಟ್ರವನ್ನು ಸ್ಥಾಪನೆ ಮಾಡಿದವರಿಗೂ ಅಪಮಾನ ಮಾಡುವಂತ ಘಟನೆ ನಡೀತಿದೆ. ಸ್ವಾತಂತ್ರ್ಯ ಹೋರಾಟ ಕೇವಲ ಒಂದು ಜಾತಿ, ಭಾಷೆ, ಪ್ರಾಂತ್ಯದ ವಿಚಾರ ಆಗಿರಲಿಲ್ಲ.ಲಕ್ಷಾಂತರ ಜನ ತ್ಯಾಗ ಬಲಿದಾನ ಮಾಡಿ ಸ್ವಾತಂತ್ರ್ಯ ಪಡೆದಿರುವಂತಹದ್ದು. ಸಂವಿಧಾನ ವಿರುದ್ಧ ಬಿಜೆಪಿ, ಮಂತ್ರಿಗಳು, ಸಂಘಪರಿವಾರ ಸದಸ್ಯರು ಷಡ್ಯಂತ್ರ ಮಾಡೋದನ್ನ ನೋಡ್ತಿದೀವಿ ಎಂದು ಹೇಳಿದ್ದರು.
ಮೊಟ್ಟ ಮೊದಲಿಗೆ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದ್ದು ಬಹದೂರ್ ಎಸ್ ಜಾಫರ್. ಇದನ್ನು ಯಾರೂ ಸಹ ಮರೆಯಕ್ಕಾಗೋದಿಲ್ಲ. ತದನಂತರ 1857ರಲ್ಲಿ ಝಾನ್ಸಿ ರಾಣಿ ಯಾವುದೇ ಧರ್ಮ, ಜಾತಿ, ಭಾಷೆ, ಪ್ರಾಂತ್ಯ ಲೆಕ್ಕಿಸದೇ ಸ್ವಾತಂತ್ರ್ಯ ಹೋರಾಟ ಮಾಡಿದ್ರು. ಏನೂ ನಿರೀಕ್ಷೆ ಇಲ್ಲದೇ ಈ ಭಾರತ ದೇಶವನ್ನ ನಮ್ಮ ಕೈಗೆ ಕೊಟ್ಟಿದ್ದಾರೆ. ಭಾರತ ದೇಶ ಉಳಿಸುವ ಕೆಲಸ ನಾವೆಲ್ಲ ಮಾಡಬೇಕಿದೆ. ಏನಾದರೂ ಒಳ್ಳೆಯ ಕೆಲಸ ಮಾಡೋಣ. ಮುಂದಿನ ಪೀಳಿಗೆಗೆ ಈ ಭಾರತ ದೇಶ ಸಂವಿಧಾನ ಕೊಟ್ಟು ಹೋಗಬೇಕು. ಧಾರವಾಡ, ರಾಯಚೂರು, ಕೋಲಾರದಲ್ಲಿ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆದಿದೆ. ಇದೊಂದು ದೊಡ್ಡ ಷಡ್ಯಂತ್ರ ಮಾಡ್ತಿದ್ದಾರೆ ಎಂದು ತಿಳಿಸಿದ್ದರು.
