*  ಕರಾವಳಿಯಲ್ಲಿ ಹಿಜಾಬ್ ವಿವಾದ ಹುಟ್ಟು ಹಾಕಿದ ಬಿಜೆಪಿಗರು*  ಪ್ರಿನ್ಸಿಪಾಲ್‌ರನ್ನು ಅಮಾನತು ಮಾಡಿ*  ಕೇಸರಿ ಶಾಲು ಧರಿಸಿ ಬಂದ ನೂರಾರು ವಿದ್ಯಾರ್ಥಿಗಳು 

ಬೆಂಗಳೂರು(ಫೆ.05): ಬಿಬಿಎಂಪಿ ಚುನಾವಣೆಗಾಗಿ(BBMP Election) ವಾರ್ಡ್ ಮರುವಿಂಗಡಣೆ ಮಾಡಲಾಗುತ್ತಿದೆ. ಆದರೆ ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿದ್ದು, ಆರ್‌ಎಸ್‌ಎಸ್‌(RSS) ಹಾಗೂ ಬಿಜೆಪಿ(BJP) ಅಣತಿಯಂತೆ ನಡೆಯುತ್ತದೆ. ಅವರಿಗೆ ಅನಕೂಲ ಆಗುವಂತೆ ವಾರ್ಡ್ ಮರುವಿಂಗಡಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಅವರ ಕ್ಷೇತ್ರಗಳನ್ನ ಹೆಚ್ಚು ವಿಂಗಡಣೆ ಮಾಡಲಾಗುತ್ತಿದ್ದು ಚುನಾವಣೆಗಾಗಿ ಬಿಜೆಪಿಗರು ಏನು ಬೇಕಾದರೂ ಮಾಡ್ತಾರೆ ಅಂತ ವಿಧಾನ ಪರಿಷತ್‌ ವಿರೋಧಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್(BK Hariprasad) ಆರೋಪಿಸಿದ್ದಾರೆ.

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಾರ್ಡ್‌ಗಳನ್ನ ಚೂರು ಚೂರು ಮಾಡಲಾಗ್ತಿದೆ. ಕಳೆದ ಬಾರಿ ಕಾಂಗ್ರೆಸ್(Congress) ಮರುವಿಂಗಡಣೆ ಕಾನೂನು ಬದ್ದವಾಗಿ ಮಾಡಿದೆ. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಎಲ್ಲರೂ ಸೇರಿ ಮರುವಿಂಗಡಣೆ ಮಾಡಲಾಗಿತ್ತು. ಆದರೆ ಈ ಬಾರಿ ಬಿಜೆಪಿ ಕಚೇರಿಯಲ್ಲಿ ಮರು ವಿಂಗಡಣೆ ಮಾಡ್ತಿದ್ದಾರೆ ಅಂತ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. 

Hijab Controversy ಹಿಜಾಬ್ ಹಾಕದೇ ಬರಲಾಗುವುದಿಲ್ಲ ಅಂದ್ರೆ ಕಾಲೇಜಿಗೆ ಬರಬೇಡಿ ಎಂದ ಬಿಜೆಪಿ ಶಾಸಕ

ಹಿಜಾಬ್(Hijab) ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಿ.ಕೆ ಹರಿಪ್ರಸಾದ್, ಕರಾವಳಿಯಲ್ಲಿ ಬಿಜೆಪಿಯವರು ಹಿಜಾಬ್ ವಿವಾದ ಹುಟ್ಟು ಹಾಕಿದ್ದಾರೆ. ದೆಹಲಿಯಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಹೊರಗಿಡಲಾಗಿತ್ತು. ಅದಕ್ಕೆ ವಿರುದ್ಧವಾಗಿ ಕರಾವಳಿಯಲ್ಲಿ ಬಜರಂಗದಳದವರೇ ಪ್ರತಿಭಟನೆ ಮಾಡಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಹಿಜಾಬ್ ವಿಚಾರ ಮುನ್ನೆಲೆಗೆ ಬಂದಿದೆ. ಈ ಸೂಕ್ಷ್ಮ ವಿಚಾರ ಅರ್ಥ ಮಾಡಿಕೊಂಡರೆ ಅದರ ಹಿಂದಿನ ಅಜೆಂಡಾ ಗೊತ್ತಾಗುತ್ತದೆ ಅಂತ ಹೇಳಿದ್ದಾರೆ. 

ಪ್ರಿನ್ಸಿಪಾಲ್‌ರನ್ನು ಅಮಾನತು ಮಾಡಿ

ವಿದ್ಯಾರ್ಥಿನಿಯರನ್ನು ಗೇಟ್ ಹೊರಗಡೆ ನಿಲ್ಲಿಸಿದ ಪ್ರಿನ್ಸಿಪಾಲ್‌ರನ್ನು ಕೂಡಲೇ ಅಮಾನತು ಮಾಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಏನಾದರೂ ಮಾಡಿಕೊಳ್ಳಲಿ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಇಂಥದ್ದೆಲ್ಲಾ ನಡೆಯಬಾರದು. ಇದು ಬಿಜೆಪಿ ನಡೆಸುತ್ತಿರುವ ಕುತಂತ್ರವಾಗಿದೆ ಅಂತ ಆರೋಪಿಸಿದ್ದಾರೆ. 

ಕೇಸರಿ ಶಾಲು ಧರಿಸಿ ಬಂದ ನೂರಾರು ವಿದ್ಯಾರ್ಥಿಗಳು

ಕುಂದಾಪುರ: ಉಡುಪಿ(Udupi) ಜಿಲ್ಲೆಯ ಕುಂದಾಪುರ(Kundapura) ಪಟ್ಟಣದ ಆರ್.ಎನ್.ಶೆಟ್ಟಿ ಕಾಲೇಜಿನಲ್ಲಿ ಹಿಜಾಬ್ ವಿರುದ್ಧ ಸಮವಸ್ತ್ರದ ಜೊತೆ ನೂರಾರು ವಿದ್ಯಾರ್ಥಿಗಳು(Students) ಕೇಸರಿ ಶಾಲು ಧರಿಸಿ ಬಂದಿದ್ದಾರೆ. ಕಾಲೇಜಿನಲ್ಲಿ ಅನಾಪೇಕ್ಷಿತ ಘಟನೆ ತಡೆಯಲು ಮುಂಜಾಗರೂಕತೆಯಿಂದ ಕಾಲೇಜಿಗೆ ರಜೆ ನೀಡಲಾಗಿದೆ. 

Hijab Controversy: ಹಿಜಾಬ್‌ ಧರಿಸುವ ವಿದ್ಯಾರ್ಥಿನಿಯರಿಗೆ ಆನ್‌ಲೈನ್‌ ಪಾಠ ಎಂದ ಶಾಸಕ ರಘುಪತಿ ಭಟ್‌

ಹಿಜಾಬ್ ಪ್ರಕರಣದ ಬಗ್ಗೆ ಹೈಕೋರ್ಟ್‌ನಿಂದ ತೀರ್ಪು ಬರುವರೆಗೆ ಕಾಲೇಜಿಗೆ ರಜೆ ನೀಡಲಾಗಿದೆ. ಪೇಟೆಯಲ್ಲಿ ಕೇಸರಿ ಶಾಲು ಧರಿಸಿ ಮೆರವಣಿಗೆ ಮಾಡಿ, ಜೈ ಶ್ರೀರಾಮ್ ಎಂದು ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ. ಈ ವೇಳೆ ವಿದ್ಯಾರ್ಥಿಗಳನ್ನು ತಡೆದ ಪೋಲಸರು, ಮನೆಗೆ ಹೋಗವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕರಾಗಿ ಹರಿಪ್ರಸಾದ್‌

ಬೆಂಗಳೂರು: ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಹುದ್ದೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌(BK Hariprasad), ಉಪನಾಯಕ ಸ್ಥಾನಕ್ಕೆ ಕೆ.ಗೋವಿಂದರಾಜು(K Govindraju) ಹಾಗೂ ವಿಧಾನಪರಿಷತ್‌ ವಿರೋಧಪಕ್ಷದ ಮುಖ್ಯ ಸಚೇತಕ ಹುದ್ದೆಗೆ ಪ್ರಕಾಶ್‌ ರಾಥೋಡ್‌ ಅವರನ್ನು ನೇಮಿಸಿ ಎಐಸಿಸಿ ಆದೇಶ ಹೊರಡಿಸಿದೆ.

ಎಸ್‌.ಆರ್‌.ಪಾಟೀಲ್‌(SR Patil) ವಿಧಾನಪರಿಷತ್‌(Vidhan Parishat) ಅವಧಿ ಮುಕ್ತಾಯದಿಂದ ತೆರವಾಗಿದ್ದ ವಿಧಾನ ಪರಿಷತ್‌ ವಿರೋಧಪಕ್ಷದ ನಾಯಕ(Vidhan Parishat Leader of Opposition) ಸ್ಥಾನ ಬಿ.ಕೆ.ಹರಿಪ್ರಸಾದ್‌ಗೆ ಒಲಿಯುವ ಸಾಧ್ಯತೆ ಇದೆ, ಹೈಕಮಾಂಡ್‌ ಸಹ ಹರಿಪ್ರಸಾದ್‌ಗೆ ಜವಾಬ್ದಾರಿ ನೀಡುವ ಕುರಿತು ಒಪ್ಪಿಗೆ ನೀಡಿದೆ ಎಂದು ಬುಧವಾರವಷ್ಟೇ ‘ಕನ್ನಡಪ್ರಭ’(Kannada Prabha) ವರದಿ ಪ್ರಕಟಿಸಿತ್ತು. ಅದರಂತೆ ಬುಧವಾರ ಸಂಜೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌(KC Venugopal) ನೇಮಕಾತಿ ಆದೇಶ ಹೊರಡಿಸಿದ್ದರು.