ನಾಡು ಕಂಡ ಧೀಮಂತ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೊಂದಿಗೆ ನಿಮ್ಮ ತಂದೆಯನ್ನು ಹೋಲಿಸುವುದು ಹಾಸ್ಯಾಸ್ಪದ ಎಂದು ಆರ್.ಅಶೋಕ್ ಯತೀಂದ್ರಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ಜು.26): ‘ನಾಡು ಕಂಡ ಧೀಮಂತ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೊಂದಿಗೆ ನಿಮ್ಮ ತಂದೆಯನ್ನು ಹೋಲಿಸುವುದು ಹಾಸ್ಯಾಸ್ಪದ, ಅಸಂಬದ್ಧ ಮತ್ತು ಕೃಷ್ಣರಾಜ ಒಡೆಯರ್ ಅವರಿಗೆ ಮಾಡುವ ಘೋರ ಅಪಮಾನ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಯತೀಂದ್ರ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಯತೀಂದ್ರ ಅವರಿಗೆ ಆತ್ಮಸಾಕ್ಷಿ ಇದ್ದರೆ, ಮೈಸೂರು ರಾಜಮನೆತನದ ಬಗ್ಗೆ ಗೌರವ ಇದ್ದರೆ ತಕ್ಷಣ ತಮ್ಮ ಅಸಂಬದ್ಧ ಹೇಳಿಕೆ ಹಿಂಪಡೆದು ನಾಡಿನ ಜನತೆ ಬಳಿ ಕ್ಷಮೆ ಕೇಳಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ತಂದೆಯನ್ನು ಹೋಲಿಸಿದ ಶಾಸಕ ಯತೀಂದ್ರ ಹೇಳಿಕೆ ವಿಚಾರವಾಗಿ ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾತ್ಮ ಗಾಂಧಿ ಅವರಿಂದ ರಾಜರ್ಷಿ ಎಂಬ ಬಿರುದು ಪಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೆಲ್ಲಿ, ಅಧಿಕಾರಕ್ಕಾಗಿ ನಕಲಿ ಗಾಂಧಿಗಳ ಗುಲಾಮಗಿರಿ ಮಾಡುತ್ತಿರುವ ಈ ಸಿದ್ದರಾಮಯ್ಯ ಅವರೆಲ್ಲಿ ಎಂದು ಲೇವಡಿ ಮಾಡಿದರು.

ನಾಲ್ವಡಿ ಭೂಪ ಮನೆ ಮನೆ ದೀಪ ಎಂದು ಶತಮಾನದ ನಂತರವೂ ಕನ್ನಡಿಗರು ದಿನನಿತ್ಯ ನೆನೆದುಕೊಳ್ಳುವ ರೀತಿ ಜನ ಮನ್ನಣೆ ಗಳಿಸಿದ್ದ ಅಭಿವೃದ್ಧಿಯ ಹರಿಕಾರರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೆಲ್ಲಿ? ಕರ್ನಾಟಕದ ಪ್ರತಿ ಮನೆ ಮೇಲೂ ಸಾಲದ ಹೊರೆ ಹೊರಿಸಿ, ಕರ್ನಾಟಕವನ್ನು ಅಭಿವೃದ್ಧಿ ಶೂನ್ಯ ಮಾಡಿರುವ ಸಿದ್ದರಾಮಯ್ಯ ಅವರೆಲ್ಲಿ?

ಶತಮಾನದ ಹಿಂದೆಯೇ ಮೈಸೂರು ವಿವಿ ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೆಲ್ಲಿ? ಅನುದಾನ ಕೊಡಲಾಗದೆ 9 ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತಿರುವ ಸಿದ್ದರಾಮಯ್ಯ ಅವರೆಲ್ಲಿ? ತಮ್ಮ ಮನೆಯ ಚಿನ್ನಾಭರಣ ಮಾರಿ ಕೆಆರ್‌ಎಸ್‌ ಅಣೆಕಟ್ಟು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೆಲ್ಲಿ? ಜನಸಾಮಾನ್ಯರಿಗೆ ಸಿಗಬೇಕಾಗಿದ್ದ 14 ಸೈಟು ಕಬಳಿಸಿದ ಸಿದ್ದರಾಮಯ್ಯ ಅವರೆಲ್ಲಿ ಎಂದು ಅಶೋಕ್‌ ವ್ಯಂಗ್ಯವಾಡಿದರು.