ಬಿಜೆಪಿ ಸರ್ಕಾರದ ಅವಧಿಯಲ್ಲಾಗಿರುವ ಪಿಎಸ್‌ಐ ನೇಮಕಾತಿ, ಬಿಟ್ ಕಾಯಿನ್, ಗಂಗಾ ಕಲ್ಯಾಣ ಅಕ್ರಮ ಸೇರಿದಂತೆ ಹೆಣದ ಮೇಲೆ ಹಣ ಮಾಡಿದ ಹಗರಣವನ್ನೂ ತನಿಖೆ ಮಾಡುತ್ತೇವೆ.
ಬೆಂಗಳೂರು (ಜೂ.17): ಬಿಜೆಪಿ ಸರ್ಕಾರದ ಅವಧಿಯಲ್ಲಾಗಿರುವ ಪಿಎಸ್‌ಐ ನೇಮಕಾತಿ, ಬಿಟ್ ಕಾಯಿನ್, ಗಂಗಾ ಕಲ್ಯಾಣ ಅಕ್ರಮ ಸೇರಿದಂತೆ ಹೆಣದ ಮೇಲೆ ಹಣ ಮಾಡಿದ ಹಗರಣವನ್ನೂ ತನಿಖೆ ಮಾಡುತ್ತೇವೆ. ಕೆಲ ಪ್ರಕರಣಗಳು ಇಲಾಖಾವಾರು ತನಿಖೆ ನಡೆಸಿದರೆ, ಉಳಿದವರನ್ನು ನ್ಯಾಯಾಂಗ ತನಿಖೆ ನಡೆಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸದಾಶಿವನಗರದಲ್ಲಿನ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೃಹ ಕಚೇರಿಯಲ್ಲಿ ನಡೆದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಸರ್ಕಾರವಿದ್ದಾಗ ನಾವು ಮಾಡಿದ್ದ ಆರೋಪಗಳನ್ನು ತನಿಖೆ ನಡೆಸುತ್ತೇವೆ. ಯಾವ ತಂಡಗಳಿಂದ ತನಿಖೆ ನಡೆಸಬೇಕು ಎಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಬಿಟ್ ಕಾಯಿನ್ ಹಗರಣಕ್ಕೆ ಸೈಬರ್ ಪರಿಣಿತರ ತಂಡದ ಅವಶ್ಯಕತೆಯಿದೆ. ಕೆಲವು ಕಡೆ ಎಸ್‌ಐಟಿ ತನಿಖೆ, ಇಲಾಖಾವಾರು ತನಿಖೆ ನಡೆಸಬೇಕು. ಉಳಿದ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಕೊಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಕೃಷಿ ಜತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಿ: ಸಚಿವ ಚಲುವರಾಯಸ್ವಾಮಿ
ಹಗರಣಗಳ ಸ್ವರೂಪವನ್ನು ಗಮನಿಸಿ ಅದಕ್ಕೆ ತಕ್ಕಂತೆ ತನಿಖೆಗೆ ಕೊಡಲಾಗುವುದು. ಬಿಟ್ ಕಾಯಿನ್, ಪಿಎಸ್‌ಐ, ಕೆಪಿಟಿಸಿಎಲ್, ಸಹಾಯಕ ಪ್ರೊಫೆಸರ್ ನೇಮಕಾತಿ ಅಕ್ರಮ, ಗಂಗಾ ಕಲ್ಯಾಣ ಅಕ್ರಮ, ಕೊರೋನಾ ಸಂದರ್ಭದಲ್ಲಿ ಮಾಡಿದ ಭ್ರಷ್ಟಾಚಾರಗಳನ್ನು ತನಿಖೆಗೊಳಪಡಿಸಲಾಗುವುದು. ಹೆಣದ ಮೇಲೆ ಹಣ ಮಾಡಿದವರಿಗೂ ಶಿಕ್ಷೆ ಕೊಡಿಸಲಾಗುವುದು ಎಂದರು. ಗಂಗಾ ಕಲ್ಯಾಣ ಅಕ್ರಮ ಕುರಿತಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎರಡು ಎಫ್‌ಐಆರ್ ದಾಖಲಾಗಿದೆ. ಕಲ್ಯಾಣ ಕರ್ನಾಟಕ ಯೋಜನೆಯಲ್ಲಿ ನಡೆದಿರುವ ಸಾವಿರಾರು ಕೋಟಿ ರು. ಅಕ್ರಮದ ಬಗೆ ಇಲಾಖಾ ತನಿಖೆ ನಡೆಯುತ್ತಿದೆ. ಅದಕ್ಕೆ ಉನ್ನತಾಧಿಕಾರಿಗಳನ್ನು ತನಿಖಾ ತಂಡದಲ್ಲಿ ನೇಮಕ ಮಾಡಲಾಗುತ್ತಿದೆ. ಹಂತ ಹಂತವಾಗಿ ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು.
ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆ ಆಗಬೇಕು. ಕೆಲ ಅಕ್ರಮಗಳಲ್ಲಿ ಪ್ರಿಯಾಂಕ್ ಖರ್ಗೆ ಅವರೇ ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ನಾನೇ ಭಾಗಿಯಾಗಿದ್ದರೂ ಶಿಕ್ಷೆಯಾಗಲಿ. ಕಾಂಗ್ರೆಸ್ ಅವರೇ ಸಿಕ್ಕಿ ಹಾಕಿಕೊಂಡರೂ ಶಿಕ್ಷೆ ಕೊಡಿಸಲಾಗುವುದು. ಕೆಪಿಎಸ್ಸಿ, ಕೆಇಎ ಅಭ್ಯರ್ಥಿಗಳು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ವಯಸ್ಸಾಗುತ್ತಿದೆ. ಪ್ರಾಮಾಣಿಕ ಯುವಕರ ಭವಿಷ್ಯ ನಮಗೆ ಮುಖ್ಯ. ಅದಕ್ಕಾಗಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ನಾಯಕರು ಕೇಂದ್ರದ ವಿರುದ್ಧ ಪ್ರತಿಭಟಿಸಲಿ: ಅನ್ನಭಾಗ್ಯ ಯೋಜನೆ ಅಕ್ಕಿ ನೀಡಲು ಭಾರತೀಯ ಆಹಾರ ನಿಗಮ ಹಿಂದೇಟು ಹಾಕುತ್ತಿರುವುದು ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣಕ್ಕೆ ನಿದರ್ಶನವಾಗಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬಿಜೆಪಿಯನ್ನು ಗೆಲ್ಲಿಸದಿದ್ದರೆ ಕೇಂದ್ರ ಸರ್ಕಾರದ ನೆರವು ರಾಜ್ಯಕ್ಕೆ ಸಿಗುವುದಿಲ್ಲ ಎಂದಿದ್ದರು. ಅದರ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಅನ್ನಭಾಗ್ಯ ಜಾರಿಗಾಗಿ ಬಿಜೆಪಿ ನಾಯಕರು ಪ್ರತಿಭಟಿಸುತ್ತೇವೆ ಎನ್ನುತ್ತಿದ್ದಾರೆ. ಅವರಿಗೆ ನಿಜವಾಗಲೂ ದಮ್ಮು, ತಾಕತ್ತು ಇದ್ದರೆ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
ಕೇಂದ್ರ ಸರ್ಕಾರ ಉಚಿತವಾಗಿ ರಾಜ್ಯಕ್ಕೆ ಅಕ್ಕಿ ಕಳುಹಿಸುವುದು ಬೇಡ. ಅದಕ್ಕೆ ಬದಲಾಗಿ ರಾಜ್ಯ ಸರ್ಕಾರ ಹಣ ಪಾವತಿಸುತ್ತದೆ. ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ಶೇಖರಣೆಯಾಗಿರುವ ಆಹಾರ ಧಾನ್ಯವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರದ ಆದೇಶದಲ್ಲಿ ಸೂಚಿಸಲಾಗಿದೆ. ಇದನ್ನು ಗಮನಿಸಿದರೆ ಜನರಿಗೆ ಅಗತ್ಯವಿರುವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡದಿರುವುದು ಸ್ಪಷ್ಟವಾಗುತ್ತದೆ ಎಂದರು.
ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯನ್ನು ಶೇ.33ಕ್ಕೆ ಹೆಚ್ಚಿಸಲು ಸರ್ಕಾರ ಪ್ರಯತ್ನ: ಸಚಿವ ಈಶ್ವರ ಖಂಡ್ರೆ
20, 21ಕ್ಕೆ ಸಚಿವರಿಂದ ಹೈಕಮಾಂಡ್ ಭೇಟಿ: ಸಚಿವರು ಹೈಕಮಾಂಡ್ ಭೇಟಿಯಾದರೆ ಯಾವುದೇ ತಪ್ಪಿಲ್ಲ. ಯಾವುದೇ ಸರ್ಕಾರ ಬಂದಾಗಲು ಪಕ್ಷದ ವರಿಷ್ಠರನ್ನು ಭೇಟಿ ಮಾಡುತ್ತಾರೆ. ಅವರಿಂದ ಸಲಹೆ, ಮಾರ್ಗದರ್ಶನ ಪಡೆಯುತ್ತಾರೆ. ಜೂನ್ 20 ಮತ್ತು 21ರಂದು ಹೈಕಮಾಂಡ್ ನಾಯಕರನ್ನು ಸಚಿವರೆಲ್ಲರೂ ಭೇಟಿಯಾಗಲಿದ್ದಾರೆ. ಇದು ಸೌಜನ್ಯದ ಭೇಟಿಯಷ್ಟೇ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
