ಪ್ರಸ್ತುತ ರಾಜ್ಯದಲ್ಲಿ ತಾತ್ಕಾಲಿಕ ಸಂಪರ್ಕ ಹಾಗೂ ಹೊಸ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್‌ ಮೀಟರ್‌ ಕಡ್ಡಾಯ ಮಾಡಲಾಗಿದೆ.

ಬೆಂಗಳೂರು (ಜು.18): ಮೈಸೂರು ಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಸುವ ಆರ್‌ಡಿಎಸ್‌ಎಸ್‌ (ರಿವ್ಯಾಂಪ್ಡ್‌ ಡಿಸ್ಟ್ರಿಬ್ಯೂಷನ್‌ ಸೆಕ್ಟರ್‌ ಸ್ಕೀಂ) ಯೋಜನೆ ಜಾರಿ ಮಾಡುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯಾವುದೇ ನಿರ್ಧಾರವಿಲ್ಲದೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ರಾಜ್ಯದಲ್ಲಿ ತಾತ್ಕಾಲಿಕ ಸಂಪರ್ಕ ಹಾಗೂ ಹೊಸ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್‌ ಮೀಟರ್‌ ಕಡ್ಡಾಯ ಮಾಡಲಾಗಿದೆ.

ಸಂಪುಟ ಸಭೆಯಲ್ಲಿ ಸೆಸ್ಕ್‌ ವ್ಯಾಪ್ತಿಯಲ್ಲಿ 3,779 ಕೋಟಿ ರು. ವೆಚ್ಚದಲ್ಲಿ ಆರ್‌ಡಿಎಸ್‌ಎಸ್‌ ಯೋಜನೆ ಅನುಷ್ಠಾನಗೊಳಿಸಿ ಎಲ್ಲ ವಿಧದ ಗ್ರಾಹಕರಿಗೂ ಸ್ಮಾರ್ಟ್‌ ಮೀಟರ್‌ ಕಡ್ಡಾಯಗೊಳಿಸಲು ಪ್ರಸ್ತಾವನೆ ಮಂಡಿಸಲಾಗಿತ್ತು. ಆದರೆ, ಆರ್‌ಡಿಎಸ್‌ಎಸ್‌ ಯೋಜನೆ ಜಾರಿಯಾಗಬೇಕಾದರೆ ಸರ್ಕಾರ ಹಾಗೂ ಸರ್ಕಾರದ ಅಂಗ-ಸಂಸ್ಥೆಗಳು ಎಸ್ಕಾಂಗೆ ಬಾಕಿ ಇರುವ ಸಂಪೂರ್ಣ ಬಿಲ್ ಪಾವತಿಸಬೇಕು. ಇದಕ್ಕಾಗಿ ಸೆಸ್ಕ್‌ ವ್ಯಾಪ್ತಿಯಲ್ಲಿ ಬಾಕಿಯಿರುವ ಹಣ ಸ್ಥಳೀಯ ಸಂಸ್ಥೆಗಳ ಮೂಲಕ ಸಾರ್ವಜನಿಕರಿಗೆ ಶೇ.2 ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲು ಸಂಪುಟದಲ್ಲಿ ಪ್ರಸ್ತಾಪಿಸಲಾಯಿತು.

ಇದಕ್ಕೆ ಸಚಿವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈಗಾಗಲೇ ಸ್ಮಾರ್ಟ್‌ ಮೀಟರ್‌ ಬಗ್ಗೆ ಕೆಟ್ಟ ಅಭಿಪ್ರಾಯ ಇದೆ. ಸ್ಮಾರ್ಟ್‌ ಮೀಟರ್‌ ಗುತ್ತಿಗೆ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಿರುವಾಗ ಜನರಿಗೆ ಹೆಚ್ಚಿವರಿ ತೆರಿಗೆ ವಿಧಿಸಿ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಮಾಡಿದರೆ ಸರ್ಕಾರದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು ಈ ಹಿನ್ನೆಲೆಯಲ್ಲಿ ವಿಷಯವನ್ನು ಮುಂದೂಡಲಾಗಿದೆ.

ಏನಿದು ಆರ್‌ಡಿಎಸ್‌ಎಸ್‌?: ಆರ್‌ಡಿಎಸ್‌ಎಸ್‌ (ರಿವ್ಯಾಂಪ್ಡ್ ಡಿಸ್ಟ್ರಿಬ್ಯೂಷನ್‌ ಸೆಕ್ಟರ್ ಸ್ಕೀಂ) ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಇದರಡಿ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡರೆ ಶೇ.100 ರಷ್ಟು ಮೀಟರ್‌ಗಳನ್ನು ಸ್ಮಾರ್ಟ್‌ ಮೀಟರ್ ಆಗಿ ಬದಲಿಸಬೇಕು. ಇದಕ್ಕಾಗಿ ಮೀಟರ್‌ಗೆ ಶೇ.15ರಷ್ಟು ಸಬ್ಸಿಡಿ ಹಾಗೂ ಮೂಲಸೌಕರ್ಯ ವ್ಯವಸ್ಥೆಗೆ ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತದೆ.

ಆದರೆ, ಈ ಯೋಜನೆ ಅನುಷ್ಠಾನಗೊಳಿಸಲು ಮೊದಲು ಎಸ್ಕಾಂಗಳಿಗೆ ಸರ್ಕಾರ ಪಾವತಿಸಬೇಕಾದ ಹಣ ಸಂಪೂರ್ಣ ಪಾವತಿಸಬೇಕು. ಪ್ರಸ್ತುತ ರಾಜ್ಯದಲ್ಲಿ ವಿವಿಧ ಸರ್ಕಾರಿ ಸಂಸ್ಥೆಗಳು ಎಸ್ಕಾಂಗಳಿಗೆ 15,000 ಕೋಟಿ ರು. ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿವೆ. ಇಷ್ಟು ಹಣ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲ. ಹೀಗಾಗಿ ಹರ್ಯಾಣ ಮಾದರಿಯಲ್ಲಿ ಸಾರ್ವಜನಿಕರಿಗೆ ಶೇ.2ರಷ್ಟು ಹೆಚ್ಚುವರಿ ತೆರಿಗೆ ವಿಧಿಸಿ ಬಂದಿರುವ ಹಣವನ್ನು ಎಸ್ಕಾಂಗಳಿಗೆ ಪಾವತಿಸಲು ಇಂಧನ ಸಚಿವ ಜಾರ್ಜ್ ಅಧ್ಯಕ್ಷತೆ ಸಭೆಯಲ್ಲಿ ಚರ್ಚಿಸಲಾಗಿತ್ತು. ಈ ಯೋಜನೆ ಪ್ರಾಯೋಗಿಕವಾಗಿ ಮೈಸೂರು ಭಾಗದಲ್ಲಿ ಜಾರಿ ಮಾಡಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಲಾಗಿತ್ತು.