ನವದೆಹಲಿ (ಸೆ. 18): ಸಂಪುಟ ವಿಸ್ತರಣೆ ಮಾಡಲೇಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ಬಂದಿದ್ದಾರೆ. ಆದರೆ ದಿಲ್ಲಿ ಬಿಜೆಪಿ ನಾಯಕರು ಸಂಪುಟ ವಿಸ್ತರಣೆ ಬಿಹಾರ ಚುನಾವಣೆ ನಂತರ ಮಾಡೋಣ ಎಂಬ ಮನಸ್ಥಿತಿಯಲ್ಲಿದ್ದಾರೆ. ಯಡಿಯೂರಪ್ಪ ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಿದ್ದರಾದರೂ ಒಂದು ರಾಜ್ಯದ ಸಂಪುಟ ವಿಸ್ತರಣೆಯಲ್ಲಿ ಪ್ರಧಾನಿ ತಲೆಹಾಕುವುದಿಲ್ಲ.

ಇನ್ನು ಕಳೆದ 5 ವರ್ಷಗಳಿಂದ ರಾಜ್ಯದ ಬಿಜೆಪಿಯ ಎಲ್ಲ ನಿರ್ಣಯಗಳನ್ನೂ ತೆಗೆದುಕೊಳ್ಳುತ್ತಿರುವ ಗೃಹ ಸಚಿವ ಅಮಿತ್‌ ಭಾಯಿ ಅಸ್ಪತ್ರೆಯಲ್ಲಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್‌ರನ್ನು ಯಡಿಯೂರಪ್ಪ ಭೇಟಿ ಆಗಲು ಸಮಯ ಕೇಳಿದ್ದರೂ ಕೂಡ ಅಮಿತ್‌ ಶಾ ಒಪ್ಪಿಗೆ ಇಲ್ಲದೆ ಹೈಕಮಾಂಡ್‌ ಹಸಿರು ನಿಶಾನೆ ಕೊಡುವ ಸಾಧ್ಯತೆ ತುಂಬಾ ಕಡಿಮೆ ಎಂದು ಮೂಲಗಳು ಹೇಳುತ್ತಿವೆ.

ಬಿಹಾರದಲ್ಲಿ ಬಿಜೆಪಿ ಲೆಕ್ಕಾಚಾರ ವರ್ಕೌಟ್ ಆಗುತ್ತಾ?

ಯಡಿಯೂರಪ್ಪ ಭರವಸೆ ಕೊಟ್ಟಂತೆ ಉಮೇಶ ಕತ್ತಿ, ಎಂಟಿಬಿ ನಾಗರಾಜ್‌, ಆರ್‌.ಶಂಕರ್‌ ಮತ್ತು ಎಚ್‌.ವಿಶ್ವನಾಥ್‌ ಅವರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂಬ ಬೇಡಿಕೆಯನ್ನು ಹೈಕಮಾಂಡ್‌ ಮುಂದೆ ಇಟ್ಟರೂ ಅರವಿಂದ ಲಿಂಬಾವಳಿ, ರಾಮದಾಸ್‌, ಸುನೀಲ… ಕುಮಾರ್‌, ಮುರುಗೇಶ್‌ ನಿರಾಣಿ, ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ, ಶಂಕರ್‌ ಮುನೇನಕೊಪ್ಪ ಇವರೆಲ್ಲ ತಮ್ಮದೇ ಆದ ಲಾಬಿಯನ್ನು ದೆಹಲಿ ಮಟ್ಟದಲ್ಲಿ ನಡೆಸುತ್ತಿದ್ದಾರೆ. ಕೆಲವರಿಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಬೆಂಬಲ ಇದೆಯಾದರೆ, ಇನ್ನು ಕೆಲವರಿಗೆ ಸಂತೋಷ್‌ ಬೆಂಬಲವಿದೆ.

ದಿಲ್ಲಿ ‘ಬೇಹುಗಾರಿಕಾ ಪ್ರತಿನಿಧಿ’

ಯಾವುದೇ ರಾಜ್ಯ ಸರ್ಕಾರದ ದಿಲ್ಲಿ ಪ್ರತಿನಿಧಿ ಎಂದರೆ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದ ತ್ವರಿತ ಅನುಮತಿಗೆ ಪ್ರಯತ್ನ ಮಾಡಬೇಕು. ಆದರೆ ಬಹುತೇಕ ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳೂ ದಿಲ್ಲಿ ಹೈಕಮಾಂಡ್‌ನಲ್ಲಿ ತನ್ನ ವಿರುದ್ಧ ಇರುವವರ ಬೇಹುಗಾರಿಕೆಗೆ ಪ್ರತಿನಿಧಿಗಳನ್ನು ಸೀಮಿತವಾಗಿ ಬಳಸುತ್ತಾರೆ. ಯಡಿಯೂರಪ್ಪ ಮೊದಲ ಅವಧಿಯಲ್ಲಿ ಧನಂಜಯ ಕುಮಾರ್‌ ಅವರನ್ನು ಅನಂತ ಕುಮಾರ್‌ ವಿರುದ್ಧ ಬಳಸುತ್ತಿದ್ದರು. ನಂತರ ಸಿದ್ದರಾಮಯ್ಯನವರು ಸಲೀಂ ಅಹ್ಮದರನ್ನು ಅಹ್ಮದ್‌ ಪಟೇಲ್ ಜೊತೆ ತಾಳಮೇಳಕ್ಕಾಗಿ ನೇಮಿಸಿದ್ದರು.

ಈಗ ಯಡಿಯೂರಪ್ಪ ತಮ್ಮ ರಾಜಕೀಯ ಕಾರ್ಯದರ್ಶಿ ಆಗಿದ್ದ ಶಂಕರೇಗೌಡರನ್ನು ದಿಲ್ಲಿಗೆ ಕಳುಹಿಸಿದ್ದಾರೆ. ಸಮಸ್ಯೆ ಎಂದರೆ ಶಂಕರೇಗೌಡ ಪಾಟೀಲರಿಗೆ ಬಿಜೆಪಿ ಹೈಕಮಾಂಡ್‌ ಸಂಪರ್ಕ ಅಷ್ಟಕಷ್ಟೆ. ಮತ್ತು ದಿಲ್ಲಿಯಲ್ಲಿ ಪ್ರಹ್ಲಾದ್‌ ಜೋಶಿ, ಸಂತೋಷ್‌, ನಳಿನ್‌ ಕಟೀಲು ಪ್ರಭಾವದ ಮುಂದೆ ಶಂಕರೇಗೌಡರು ಮಂಕಾಗಬಹುದೋ ಏನೋ. ಅಂದಹಾಗೆ, 10 ವರ್ಷಗಳ ಹಿಂದೆ ಧನಂಜಯ ಕುಮಾರ್‌ ಏನೋ ಮಾಡಲು ಹೋಗಿ ಸುಷ್ಮಾ ಸ್ವರಾಜ್‌ರಿಂದ ಬೈಸಿಕೊಂಡಿದ್ದರು. ಎಷ್ಟರ ಮಟ್ಟಿಗೆ ಎಂದರೆ ಸ್ವತಃ ಯಡಿಯೂರಪ್ಪ ಮುಂದೆ ನಿಂತು ಧನಂಜಯರಿಂದ ಕ್ಷಮಾಪಣೆ ಪತ್ರ ಬರೆಸಿ ಸುಷ್ಮಾಗೆ ಕೊಡಿಸಿದ್ದರು. ನಂತರವಷ್ಟೇ ರೆಡ್ಡಿ ಜಗಳ ಬಗೆಹರಿದಿತ್ತು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ