Asianet Suvarna News Asianet Suvarna News

ದಲಿತ ಸಚಿವರ ಜತೆ ಸಿಎಂ ಸಿದ್ದರಾಮಯ್ಯ ಗೌಪ್ಯ ಚರ್ಚೆ: ಡಿಕೆಶಿ ಬಣ ಹೊರಗಿಟ್ಟು ಸಭೆ

ಔತಣಕೂಟದ ನೆಪದಲ್ಲಿ ಮೂವರು ದಲಿತ (ಪರಿಶಿಷ್ಟ ಜಾತಿ ಹಾಗೂ ಪಂಗಡದ) ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ತಡರಾತ್ರಿ ನಡೆಸಿದ ಗೌಪ್ಯ ಸಭೆ ಕಾಂಗ್ರೆಸ್‌ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. 

CM Siddaramaiahs confidential discussion with Dalit Ministers gvd
Author
First Published Oct 29, 2023, 3:30 AM IST

ಬೆಂಗಳೂರು (ಅ.29): ಔತಣಕೂಟದ ನೆಪದಲ್ಲಿ ಮೂವರು ದಲಿತ (ಪರಿಶಿಷ್ಟ ಜಾತಿ ಹಾಗೂ ಪಂಗಡದ) ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ತಡರಾತ್ರಿ ನಡೆಸಿದ ಗೌಪ್ಯ ಸಭೆ ಕಾಂಗ್ರೆಸ್‌ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಪದೇ ಪದೇ ಕೇಳಿ ಬರುತ್ತಿರುವ ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿ ಹುದ್ದೆ ಬದಲಾವಣೆ, ಸಚಿವ ಸಂಪುಟ ಪುನಾರಚನೆ, ದಲಿತ ಮುಖ್ಯಮಂತ್ರಿ ಕೂಗು ಹಾಗೂ ದಲಿತ ಸಚಿವರ ಜಿಲ್ಲೆಗಳಲ್ಲಿ ಪ್ರಭಾವಿಗಳ ಹಸ್ತಕ್ಷೇಪದಂತಹ ವಿಚಾರಗಳ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತ ಸಚಿವರೊಂದಿಗೆ ಸುದೀರ್ಘ ಸಭೆ ನಡೆಸಿರುವುದು ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಮೇಲ್ಕಾಣಿಸಿದ ಈ ಎಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ.

ವಿಶೇಷವಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ತಮ್ಮ ಸದಾಶಿವ ನಗರದ ನಿವಾಸದಲ್ಲಿ ಆಯೋಜಿಸಿದ್ದ ಈ ಔತಣಕೂಟದ ಸಭೆಗೆ ಕೂಗಳೆತೆ ದೂರದಲ್ಲೇ ಇರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಬಣದ ಯಾರೊಬ್ಬರನ್ನು ಆಹ್ವಾನಿಸದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಸಭೆಯಲ್ಲಿ ಪರಮೇಶ್ವರ್‌ ಅವರ ಆಹ್ವಾನದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಮಾತ್ರ ಸಭೆ ಸೇರಿದ್ದರು.

ರಾಜಕೀಯ ಬಿಟ್ಟು ಅಭಿವೃದ್ಧಿ ಚಿಂತೆ ಮಾಡೋಣ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ದಲಿತ ಸಿಎಂ ಕೂಗಿನಿಂದ ಲಾಭ: ಇದೇ ವೇಳೆ ದಲಿತ ಮುಖ್ಯಮಂತ್ರಿ ಹುದ್ದೆ ಕೂಗಿನ ವಿಚಾರವೂ ಪ್ರಸ್ತಾಪವಾಗಿದೆ. ಒಂದು ವೇಳೆ ಭವಿಷ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಬದಲಾವಣೆಯಾಗುವುದೇ ಆದಲ್ಲಿ ದಲಿತರೊಬ್ಬರಿಗೆ ಅವಕಾಶ ದೊರೆಯುತ್ತದೆ ಎಂದು ಈಗಲೇ ಬಿಂಬಿಸಬೇಕು. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಲಾಭವಾಗುತ್ತದೆ ಎಂಬ ಸಲಹೆಯೂ ಸಭೆಯಲ್ಲಿ ಕೇಳಿ ಬಂತು ಎಂದು ಮೂಲಗಳು ತಿಳಿಸಿವೆ.

ದಲಿತ ಸಿಎಂ ಪರ ನಿಲ್ಲುವೆ ಎಂದ ಸಿಎಂ?: ಅನಂತರ ಎರಡೂವರೆ ವರ್ಷದ ನಂತರ ಸಚಿವ ಸಂಪುಟ ಪುನಾರಚನೆ ಹಾಗೂ ಮುಖ್ಯಮಂತ್ರಿ ಗಾದಿ ಬದಲಾವಣೆ ಬಗ್ಗೆಯೂ ಚರ್ಚೆ ಸುದೀರ್ಘವಾಗಿ ನಡೆದಿದೆ. ದಲಿತ ಸಚಿವರು ಈ ಬಗ್ಗೆ ಮಾಡಿದ ಈ ಎಲ್ಲ ಪ್ರಸ್ತಾಪಗಳನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಂತಹ ಸಂದರ್ಭ ಎದುರಾದರೆ ತಾವು ದಲಿತ ಸಚಿವರ ಪರ ನಿಲುವನ್ನು ತೆಗೆದುಕೊಳ್ಳುವ ಭರವಸೆಯನ್ನು ಸಭೆಗೆ ನೀಡಿದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಜಾರಕಿಹೊಳಿ ಎಚ್ಚರಿಕೆ: ಇದಲ್ಲದೆ, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪದ ಬಗ್ಗೆ ಮುಖ್ಯಮಂತ್ರಿಯವರ ಗಮನ ಸೆಳೆದರು ಎನ್ನಲಾಗಿದೆ. ನಾವು ಬೇರೆ ಯಾರ ಜಿಲ್ಲೆಯಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ. ಹೀಗಿರುವಾಗ ನಮ್ಮ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಸ್ತಕ್ಷೇಪ ನಡೆಸಿದರೆ ಅದು ಪಕ್ಷದ ಮೇಲೆ ಹಾಗೂ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು ಎನ್ನಲಾಗಿದೆ.

ಸಿಎಂ ಬದಲಾವಣೆ ಖರ್ಗೆ, ಸೋನಿಯಾ ಗಾಂಧಿಗಷ್ಟೇ ಗೊತ್ತು: ಬಿ.ಕೆ.ಹರಿಪ್ರಸಾದ್

ಅಲ್ಲಿ ಏನೇನಾಯ್ತು?
- ಮೊನ್ನೆ ತಡರಾತ್ರಿ 3 ಸಚಿವರ ಜತೆ ಸಿದ್ದು ಔತಣಕೂಟ
- ಪರಮೇಶ್ವರ್‌, ಮಹದೇವಪ್ಪ, ಜಾರಕಿಹೊಳಿ ಭಾಗಿ
- ಡಿಕೆಶಿ ಮನೆ ಕೂಗಳತೆ ದೂರದಲ್ಲಿದ್ರೂ ಆಹ್ವಾನವಿಲ್ಲ
- ಸಭೆಯಲ್ಲಿ 2.5 ವರ್ಷ ನಂತರ ಸಿಎಂ ಬದಲಾವಣೆ ಬಗ್ಗೆ ಚರ್ಚೆ
- ದಲಿತ ಸಿಎಂ, ಬೆಳಗಾವಿ ಬಿಕ್ಕಟ್ಟು ಬಗ್ಗೆಯೂ ಮಾತುಕತೆ
- ಸಿಎಂ ಬದಲಾವಣೆ ಆದರೆ ದಲಿತರ ಸಿಎಂ ಪರ ಸಿದ್ದು ಭರವಸೆ?
- ದಲಿತ ಸಿಎಂ ಕೂಗಿನಿಂದ ಪಕ್ಷಕ್ಕೆ ಲಾಭ: ಸಭೆಯಲ್ಲಿ ಅಭಿಮತ
- ಬೆಳಗಾವಿ ವಿಷಯದಲ್ಲಿ ಹಸ್ತಕ್ಷೇಪಕ್ಕೆ ಸತೀಶ್‌ ತೀವ್ರ ಆಕ್ರೋಶ

Follow Us:
Download App:
  • android
  • ios