Asianet Suvarna News Asianet Suvarna News

ಸ್ಥಳೀಯ ಸಂಸ್ಥೆ ಚುನಾವಣೆ ನಿರ್ಧಾರ ಸಿಎಂ ಹೆಗಲಿಗೆ

ಸ್ಪೀಕರ್‌ ಸ್ಥಾನದ ಬಗ್ಗೆ ಜಮೀರ್‌ ಅಹಮದ್ ಖಾನ್‌ ಅವರ ಹೇಳಿಕೆ ಪ್ರಸ್ತಾಪಿಸಿದರೆ, ಎಲ್ಲಾ ಶಾಸಕರು ಒಟ್ಟಾಗಿ ಜಮೀರ್‌ ಅವರ ಸಮರ್ಥನೆಗೆ ಬರಬೇಕು ಎಂಬುದು ಸೇರಿದಂತೆ ಪ್ರತಿಪಕ್ಷಗಳನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

CM Siddaramaiah Will Take Decision About Local Body Election grg
Author
First Published Dec 7, 2023, 8:25 PM IST

ಬೆಳಗಾವಿ(ಡಿ.07):  ಲೋಕಸಭೆ ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆ ನಡೆಸುವ ಬಗ್ಗೆ ಮಹತ್ವದ ಚರ್ಚೆ ನಡೆದಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಬೆಳಗಾವಿಯಲ್ಲಿ ಬುಧವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಲೋಕಸಭೆ ಚುನಾವಣೆ ಸಿದ್ಧತೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು.

ಈ ವೇಳೆ ಕೆಲ ಶಾಸಕರು ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಬಿಬಿಎಂಪಿ ಸೇರಿದಂತೆ ಕೆಲ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬವಾಗುತ್ತಿರುವ ಬಗ್ಗೆ ಸ್ಪರ್ಧಾಕಾಂಕ್ಷಿ ಕಾರ್ಯಕರ್ತರು, ಮುಖಂಡರಲ್ಲಿ ಅಸಮಾಧಾನ ಉಂಟಾಗಿದೆ. ಲೋಕಸಭೆ ಚುನಾವಣೆಗೆ ಮೊದಲೇ ಈ ಚುನಾವಣೆಗಳು ನಡೆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬಹುದು. ಗೆದ್ದವರು ಲೋಕಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ಕಾರ ಉಪ್ಪೂ ಕೊಡದಷ್ಟು ಪಾಪರ್‌ ಆಗಿದೆಯಾ?: ಸಿದ್ದು ಸರ್ಕಾರದ ವಿರುದ್ಧ ಹರಿಹಾಯ್ದ ಅಶೋಕ್‌

ಮತ್ತೊಂದಷ್ಟು ಶಾಸಕರು, ಪ್ರಸ್ತುತ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿದರೆ ಆಗುವ ಅನನುಕೂಲಗಳ ಬಗ್ಗೆಯೂ ಚರ್ಚೆಯಾಗಬೇಕು. ಒಟ್ಟಾರೆ ಈ ಚುನಾವಣೆಗಳನ್ನು ನಡೆಸಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ಗ್ಯಾರಂಟಿಗಳನ್ನು ಜನರಿಗೆ ತಲುಪಿಸಿ:

ಇನ್ನು ಶಾಸಕರು ಹಾಗೂ ಸಚಿವರು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಲು ಹಿಂಜರಿಯುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಯೋಜನಾ ವೆಚ್ಚದಲ್ಲಿ ಅರ್ಧಕ್ಕಿಂತ ಹೆಚ್ಚು ಮೊತ್ತವನ್ನು ಜನರ ಅನುಕೂಲಕ್ಕಾಗಿ ನೇರವಾಗಿ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೀಡಲಾಗುತ್ತಿದೆ. ಇಂತಹ ಅದ್ಭುತ ಯೋಜನೆಗಳ ಬಗ್ಗೆ ನಾನು ಹಾಗೂ ಉಪಮುಖ್ಯಮಂತ್ರಿಗಳು ಹೊರತುಪಡಿಸಿದರೆ ಉಳಿದ್ಯಾರೂ ಮಾತನಾಡುತ್ತಿಲ್ಲ. ಇನ್ನು ಮುಂದೆ ಶಾಸಕರು ಹಾಗೂ ಎಲ್ಲಾ ಸಚಿವರು ಜನರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಜತೆಗೆ ಮನೆ-ಮನೆಗೂ ಯೋಜನೆಗಳನ್ನು ತಲುಪಿಸುವ ಹಾಗೂ ಇದರ ಬಗ್ಗೆ ಮಾಹಿತಿ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು ಎನ್ನಲಾಗಿದೆ.

ಪ್ರತಿಪಕ್ಷಗಳನ್ನು ಒಟ್ಟಾಗಿ ಎದುರಿಸಿ:

ಅಧಿವೇಶನದಲ್ಲಿ ಬಿಜೆಪಿ-ಜೆಡಿಎಸ್‌ ಜಂಟಿಯಾಗಿ ಮಾಡುವ ಪ್ರತಿ ಹೋರಾಟವನ್ನು ಒಟ್ಟಾಗಿ ಹೇಗೆ ಎದುರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು. ಡಿ.ಕೆ.ಶಿವಕುಮಾರ್‌ ಅವರ ಮೇಲಿನ ಸಿಬಿಐ ತನಿಖೆ ಹಿಂಪಡೆದಿರುವ ಬಗ್ಗೆ ವಿಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದರೆ, ಅಡ್ವೊಕೇಟ್‌ ಜನರಲ್‌ ಅಭಿಪ್ರಾಯದ ವಿರುದ್ಧವಾಗಿ ಬಿಜೆಪಿಯವರು ಯಾಕೆ ತನಿಖೆಗೆ ವಹಿಸಿದ್ದೀರಿ ಎಂದು ದಾಖಲೆಗಳನ್ನು ಮುಂದಿಟ್ಟುಕೊಂಡು ಪ್ರಶ್ನಿಸಬೇಕು.

ಬ್ರ್ಯಾಂಡ್‌ ಬೆಂಗಳೂರು: ಸದನದಲ್ಲಿ ಕೈ-ಕಮಲ ಕಿತ್ತಾಟ, ನಗರದ ಮಾನ ಕಳೆಯಬೇಡಿ ಎಂದ ಖಾದರ್

ಬರದ ವೈಫಲ್ಯದ ಬಗ್ಗೆ ಪ್ರಸ್ತಾಪಿಸಿದರೆ ಕೇಂದ್ರದ ನೆರವಿಲ್ಲದಿದ್ದರೂ ರಾಜ್ಯ ಸರ್ಕಾರ 2 ಸಾವಿರ ರು.ವರೆಗೆ ಪರಿಹಾರ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಬೇಕಿರುವ 27 ಮಂದಿ ಸಂಸದರು ಹಾಗೂ ಐದು ಮಂದಿ ಕೇಂದ್ರ ಸಚಿವರು ಏಕೆ ಮೌನವಾಗಿದ್ದಾರೆ ಎಂದು ತರಾಟೆಗೆ ತೆಗೆದುಕೊಳ್ಳಬೇಕು.

ಸ್ಪೀಕರ್‌ ಸ್ಥಾನದ ಬಗ್ಗೆ ಜಮೀರ್‌ ಅಹಮದ್ ಖಾನ್‌ ಅವರ ಹೇಳಿಕೆ ಪ್ರಸ್ತಾಪಿಸಿದರೆ, ಎಲ್ಲಾ ಶಾಸಕರು ಒಟ್ಟಾಗಿ ಜಮೀರ್‌ ಅವರ ಸಮರ್ಥನೆಗೆ ಬರಬೇಕು ಎಂಬುದು ಸೇರಿದಂತೆ ಪ್ರತಿಪಕ್ಷಗಳನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios