Asianet Suvarna News Asianet Suvarna News

ಜೂ.11ರಂದು ಕಂಡಕ್ಟರ್‌ ಆಗಲಿದ್ದಾರೆ ಸಿದ್ದು: ಬಸ್‌ನಲ್ಲಿ ಸ್ತ್ರೀಯರಿಗೆ ಉಚಿತ ಟಿಕೆಟ್‌ ನೀಡಿ ‘ಶಕ್ತಿ’ ಯೋಜನೆಗೆ ಚಾಲನೆ

ಮೆಜೆಸ್ಟಿಕ್‌ನಿಂದ ಹೊರಡುವ ಮಾರ್ಗ ಸಂಖ್ಯೆ 43ರ ಬಿಎಂಟಿಸಿ ಬಸ್‌ನಲ್ಲಿ ಆ ದಿನ ಪಾರ್ಟ್‌ಟೈಂ ಕಂಡಕ್ಟರ್‌ ಸಿದ್ದರಾಮಯ್ಯ ಅವರು ಬಸ್ಸೇರಲಿರುವ ಮಹಿಳಾ ಪ್ರಯಾಣಿಕರ ಬಳಿ ತೆರಳಿ ‘ಟಿಕೆಟ್‌ ಟಿಕೆಟ್‌...’ ಎನ್ನುತ್ತಾ ಉಚಿತ ಟಿಕೆಟ್‌ ವಿತರಿಸಲಿದ್ದಾರೆ! 

CM Siddaramaiah will become a conductor on June 11th gvd
Author
First Published Jun 9, 2023, 6:02 AM IST

ಎಸ್‌.ಗಿರೀಶ್‌ ಬಾಬು

ಬೆಂಗಳೂರು (ಜೂ.09): ಆ ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸ್‌ ಕಂಡಕ್ಟರ್‌ ಸಿದ್ದರಾಮಯ್ಯ ಆಗಿ ಬದಲಾಗಲಿದ್ದಾರೆ! ಮೆಜೆಸ್ಟಿಕ್‌ನಿಂದ ಹೊರಡುವ ಮಾರ್ಗ ಸಂಖ್ಯೆ 43ರ ಬಿಎಂಟಿಸಿ ಬಸ್‌ನಲ್ಲಿ ಆ ದಿನ ಪಾರ್ಟ್‌ಟೈಂ ಕಂಡಕ್ಟರ್‌ ಸಿದ್ದರಾಮಯ್ಯ ಅವರು ಬಸ್ಸೇರಲಿರುವ ಮಹಿಳಾ ಪ್ರಯಾಣಿಕರ ಬಳಿ ತೆರಳಿ ‘ಟಿಕೆಟ್‌ ಟಿಕೆಟ್‌...’ ಎನ್ನುತ್ತಾ ಉಚಿತ ಟಿಕೆಟ್‌ ವಿತರಿಸಲಿದ್ದಾರೆ! ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಪೈಕಿ ಮೊಟ್ಟಮೊದಲ ಯೋಜನೆಯಾಗಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಅವಕಾಶ ನೀಡುವ ‘ಶಕ್ತಿ’ ಈ ರೀತಿ ಉದ್ಘಾಟನೆಗೊಳ್ಳಲಿದೆ. 

ಇದೇ ಭಾನುವಾರ (ಜೂ.11) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಜೆಸ್ಟಿಕ್‌ನಿಂದ ನಾಡಿನ ಶಕ್ತಿಕೇಂದ್ರವಾದ ವಿಧಾನಸೌಧಕ್ಕೆ ತೆರಳುವ ರೂಟ್‌ ನಂ.43 ಬಸ್‌ನಲ್ಲಿ ಕಂಡಕ್ಟರ್‌ ರೀತಿ ಟಿಕೆಟ್‌ ವಿತರಿಸುವ ಮೂಲಕ ಈ ಮಹಾತ್ವಾಕಾಂಕ್ಷಿ ಯೋಜನೆಗೆ ವಿಶಿಷ್ಟರೀತಿಯಲ್ಲಿ ಚಾಲನೆ ನೀಡಲಿದ್ದಾರೆ. ಅನಂತರ ವಿಧಾನಸೌಧದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಯೋಜನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಇಡೀ ರಾಷ್ಟ್ರದ ಗಮನ ಸೆಳೆದಿರುವ ಗ್ಯಾರಂಟಿ ಯೋಜನೆಗಳ ಉದ್ಘಾಟನೆಯೂ ಸಹ ವಿಭಿನ್ನವಾಗಿರಬೇಕು ಎಂಬ ಆಲೋಚನೆಯಲ್ಲಿರುವ ಸಿದ್ದರಾಮಯ್ಯ ಅವರ ಥಿಂಕ್‌ ಟ್ಯಾಂಕ್‌ ಈ ಶೈಲಿಯಲ್ಲಿ ಕಾರ್ಯಕ್ರಮ ರೂಪಿಸಲು ತೀರ್ಮಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 

ರಾಜ್ಯದ ಡ್ಯಾಂಗಳು ಖಾಲಿ: 10 ಜಲಾಶಯಗಳಲ್ಲಿ ನೀರು ಬರಿದು!

ಈ ವಿಶಿಷ್ಟ ರೀತಿಯ ಉದ್ಘಾಟನೆಯು ಕೇವಲ ಶಕ್ತಿ ಯೋಜನೆಗೆ ಸೀಮಿತವಲ್ಲ. ಉಳಿದ ನಾಲ್ಕು ಯೋಜನೆಗಳನ್ನು ಕೂಡ ವಿಶಿಷ್ಟವಾಗಿ ಉದ್ಘಾಟಿಸುವ ಚಿಂತನೆಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಕಾರ್ಯಕ್ರಮಗಳು ಕೇವಲ ರಾಜ್ಯ ರಾಜಧಾನಿಗೆ ಸೀಮಿತವಾಗಬಾರದು ಎಂಬ ಕಾರಣಕ್ಕೆ ರಾಜ್ಯದ ಐದೂ ವಿಭಾಗೀಯ ಕೇಂದ್ರಗಳಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಶಕ್ತಿ ಕಾರ್ಯಕ್ರಮ ಬೆಂಗಳೂರಿನಲ್ಲಿ ಉದ್ಘಾಟನೆಯಾದರೆ, ಕುಟುಂಬದ ಸದಸ್ಯರಿಗೆ 10 ಕೆ.ಜಿ. ಆಹಾರ ಧಾನ್ಯ ನೀಡುವ ಅನ್ನಭಾಗ್ಯ ಯೋಜನೆಯು ಜು.1ರಂದು ಮೈಸೂರಿನಲ್ಲಿ ಉದ್ಘಾಟನೆಗೊಳ್ಳಲಿದೆ. 

ಕುಟುಂಬದ ಮುಖ್ಯಸ್ಥೆಗೆ 2000 ರು. ನೀಡುವ ಗೃಹ ಲಕ್ಷ್ಮೇ ಯೋಜನೆಯು ಆ.15 (ಒಂದೆರಡು ದಿನ ತಡವೂ ಆಗಬಹುದು) ರಂದು ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ರಾಣಿ ಚೆನ್ನಮ್ಮನ ತಾಣವಾದ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಉದ್ಘಾಟನೆಯಾಗಲಿದೆ. ನಿರುದ್ಯೋಗಿ ಯುವಕರಿಗಾಗಿ ರೂಪಿಸಿರುವ ಮಹತ್ವದ ಯುವ ನಿಧಿ ಯೋಜನೆಯನ್ನು ಮಂಗಳೂರು ನಗರದಲ್ಲಿ ಉದ್ಘಾಟಿಸಲು ಮತ್ತು ನಾಡಿನಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ 200 ಯೂನಿಟ್‌ವರೆಗಿನ ಉಚಿತ ವಿದ್ಯುತ್‌ ಯೋಜನೆಯಾದ ಗೃಹ ಜ್ಯೋತಿಯನ್ನು ಕಲಬುರಗಿ ನಗರದಲ್ಲಿ ಅದ್ಧೂರಿಯಾಗಿ ಉದ್ಘಾಟನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಗೃಹ ಜ್ಯೋತಿ ಯೋಜನೆಯ ಲಾಭವು ಗ್ರಾಹಕರಿಗೆ ಜುಲೈ ತಿಂಗಳಿನಲ್ಲಿ ಬಳಕೆ ಮಾಡಿದ ವಿದ್ಯುತ್‌ಗೆ ಲಭ್ಯವಾಗಲಿದೆ. ಹೀಗಾಗಿ ಅದರ ಬಿಲ್‌ ಆಗಸ್ಟ್‌ 1ಕ್ಕೆ ಗ್ರಾಹಕರನ್ನು ಮುಟ್ಟಲಿದೆ. ಹೀಗಾಗಿ ಈ ವೇಳೆಗೆ ಕಲಬುರಗಿಯಲ್ಲಿ ಉದ್ಘಾಟನೆ ಮಾಡಬೇಕು ಎಂಬ ಚಿಂತನೆಯಿದೆ. ಆದರೆ, ಯುವ ನಿಧಿ ಯೋಜನೆಯ ಉದ್ಘಾಟನಾ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಇನ್ನು ಮನೆಯೊಡತಿಗೆ 2000 ರು. ನೀಡುವ ಗೃಹ ಲಕ್ಷ್ಮೇ ಯೋಜನೆಯನ್ನು ಆಗಸ್ಟ್‌ 15ರಂದೇ ಉದ್ಘಾಟನೆ ಮಾಡಬೇಕು ಎಂಬ ಉದ್ದೇಶವಿದೆ. ಆದರೆ, ಆ.15ರಂದು ಸ್ವಾತಂತ್ರ್ಯೋತ್ಸವವೂ ಇದ್ದು, ಬೆಂಗಳೂರಿನಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮವೂ ನಡೆಯುವುದರಿಂದ ಒಂದೆರಡು ದಿನ ಮುಂದೂಡುವ ಬಗ್ಗೆ ಚರ್ಚೆ ನಡೆದಿದೆ.

ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಚಾಲನೆ: ಈ ಎಲ್ಲ ಯೋಜನೆಗಳನ್ನು ವಿಭಾಗ ಮಟ್ಟದ ಕೇಂದ್ರ ಸ್ಥಾನದಲ್ಲಿ ರಾಜ್ಯ ಮಟ್ಟದ ಉದ್ಘಾಟನಾ ಕಾರ್ಯಕ್ರಮವನ್ನಾಗಿ ನಡೆಸಲಾಗುತ್ತದೆ. ಇದೇ ವೇಳೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಯ ಮುಖ್ಯಸ್ಥರು, ಶಾಸಕರು ಕೂಡ ಕಾರ್ಯಕ್ರಮ ನಡೆಸಿ ಸದರಿ ಯೋಜನೆಗೆ ಜಿಲ್ಲಾ ಮಟ್ಟದಲ್ಲಿ ಚಾಲನೆ ನೀಡಲಿದ್ದಾರೆ. ಅಂದರೆ, ಜೂ. 11ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರು ಶಕ್ತಿ ಯೋಜನೆಗೆ ರಾಜ್ಯ ಮಟ್ಟದಲ್ಲಿ ಚಾಲನೆ ನೀಡಿದರೆ, ಅಂದೇ ಜಿಲ್ಲಾ ಮಟ್ಟದಲ್ಲೂ ಶಾಸಕರು ಹಾಗೂ ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಶಕ್ತಿ ಯೋಜನೆ ಉದ್ಘಾಟನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫ್ರೀ ಬಸ್‌ ಪಾಸ್‌ನಲ್ಲಿ ಸ್ತ್ರೀಯರಿಗೆ ದೂರದ ಮಿತಿ ಇಲ್ಲ: ಜೂ.11ಕ್ಕೆ ಶಕ್ತಿ ಯೋಜನೆಗೆ ಸಿಎಂ ಚಾಲನೆ

ಯಾವ ಗ್ಯಾರಂಟಿಗೆ ಎಲ್ಲಿ ಚಾಲನೆ?
- ಜು.1ಕ್ಕೆ ಮೈಸೂರಿನಲ್ಲಿ ಅನ್ನಭಾಗ್ಯದಡಿ 10 ಕೇಜಿ ರೇಶನ್‌ ವಿತರಣೆಗೆ ಚಾಲನೆ.
- ಗೃಹಲಕ್ಷ್ಮಿ ಯೋಜನೆ ಕಿತ್ತೂರಿನಲ್ಲಿ ಆ.15ರ ಆಸುಪಾಸು ಉದ್ಘಾಟನೆ.
- ಆ.1ರ ವೇಳೆಗೆ ಗೃಹಜ್ಯೋತಿ ಯೋಜನೆಗೆ ಕಲಬುರಗಿಯಲ್ಲಿ ಚಾಲನೆ.
- ಯುವನಿಧಿಗೆ ಮಂಗಳೂರಲ್ಲಿ ಚಾಲನೆ: ದಿನಾಂಕ ಇನ್ನೂ ನಿಗದಿಯಿಲ್ಲ.

Follow Us:
Download App:
  • android
  • ios