Asianet Suvarna News Asianet Suvarna News

ಫ್ರೀ ಬಸ್‌ ಪಾಸ್‌ನಲ್ಲಿ ಸ್ತ್ರೀಯರಿಗೆ ದೂರದ ಮಿತಿ ಇಲ್ಲ: ಜೂ.11ಕ್ಕೆ ಶಕ್ತಿ ಯೋಜನೆಗೆ ಸಿಎಂ ಚಾಲನೆ

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಉಚಿತ ಬಸ್‌ ಪ್ರಯಾಣ ‘ಶಕ್ತಿ’ ಯೋಜನೆಯಲ್ಲಿ ಪ್ರಯಾಣದ ದೂರದ ಮಿತಿ ಇರುವುದಿಲ್ಲ ಎಂಬುದೂ ಸೇರಿದಂತೆ ಯೋಜನೆಯ ವಿವಿಧ ಅಂಶಗಳು, ಅಗತ್ಯ ದಾಖಲೆಗಳು ಮತ್ತು ಸಿಬ್ಬಂದಿಗಳ ಜವಾಬ್ದಾರಿಗಳ ಕುರಿತು ಮಾರ್ಗಸೂಚಿಯನ್ನು ಕೆಎಸ್‌ಆರ್‌ಟಿಸಿ ಬಿಡುಗಡೆ ಮಾಡಿದೆ.
 

There is no distance limit for women in free bus pass gvd
Author
First Published Jun 8, 2023, 11:09 AM IST

ಬೆಂಗಳೂರು (ಜೂ.08): ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಉಚಿತ ಬಸ್‌ ಪ್ರಯಾಣ ‘ಶಕ್ತಿ’ ಯೋಜನೆಯಲ್ಲಿ ಪ್ರಯಾಣದ ದೂರದ ಮಿತಿ ಇರುವುದಿಲ್ಲ ಎಂಬುದೂ ಸೇರಿದಂತೆ ಯೋಜನೆಯ ವಿವಿಧ ಅಂಶಗಳು, ಅಗತ್ಯ ದಾಖಲೆಗಳು ಮತ್ತು ಸಿಬ್ಬಂದಿಗಳ ಜವಾಬ್ದಾರಿಗಳ ಕುರಿತು ಮಾರ್ಗಸೂಚಿಯನ್ನು ಕೆಎಸ್‌ಆರ್‌ಟಿಸಿ ಬಿಡುಗಡೆ ಮಾಡಿದೆ.

ಕರ್ನಾಟಕ ರಾಜ್ಯದ ಮಹಿಳೆಯರು ಸೇರಿದಂತೆ 6ರಿಂದ 12 ವರ್ಷದೊಳಗಿನ ಬಾಲಕಿಯರು, ಲೈಂಗಿಕ ಅಲ್ಪಸಂಖ್ಯಾತರಿಗೂ ಯೋಜನೆ ಲಾಭ ಸಿಗಲಿದೆ. ಮಹಿಳೆಯರಿಗೆ ಸಾಮಾನ್ಯ ಮತ್ತು ವೇಗದೂತ ಬಸ್‌ನಲ್ಲಿ ರಾಜ್ಯದ ಒಳಗಡೆ ಪ್ರಯಾಣ ಅವಕಾಶ ಕಲ್ಪಿಸಲಾಗಿದೆ. ಐಷಾರಾಮಿ ಬಸ್‌ಗಳು, ಐರಾವತ, ನಾನ್‌ ಎಸಿ ಸ್ಲೀಪರ್‌, ಎಸಿ ಸ್ಲೀಪರ್‌ ಬಸ್‌ಗಳಲ್ಲಿ ಪ್ರಯಾಣಿಸುವಂತಿಲ್ಲ. ಮಹಿಳಾ ಪ್ರಯಾಣಿಕರು ರಾಜ್ಯದ ಎಲ್ಲಿಗೆ ಬೇಕಾದರೂ ಪ್ರಯಾಣಿಸಬಹುದಾಗಿದೆ. ಅವರಿಗೆ ಪ್ರಯಾಣದ ದೂರದ ಮಿತಿ ಇರುವುದಿಲ್ಲ. ಕೆಲವು ಆಯ್ದ ಅಂತರ್‌ ರಾಜ್ಯ ಸಾರಿಗೆ ಹೊರತುಪಡಿಸಿ ಉಳಿದ ಬಸ್‌ಗಳಲ್ಲಿ ಸಂಚಾರಕ್ಕೆ ಅವಕಾಶವಿಲ್ಲ.

ಕಾಡುಹಂದಿಗಳ ದಾಳಿಯಿಂದ ಗಾಯಗೊಂಡಿದ್ದ ನಾಲ್ಕು ವರ್ಷದ ಚಿರತೆ ಸಾವು!

ಅಗತ್ಯ ದಾಖಲೆಗಳು: ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಪತ್ರ, ವಾಸಸ್ಥಳ ನಮೂದಿಸಿರುವ ಗುರುತಿನ ಚೀಟಿ, ಅಂಗವಿಕಲರ, ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಪತ್ರ ಅಥವಾ ಇವುಗಳಲ್ಲಿ ಯಾವುದಾದರೂ ಒಂದು ಮೂಲ ಗುರುತಿನ ಚೀಟಿಯನ್ನು ಭೌತಿಕವಾಗಿ ಅಥವಾ ಡಿಜಿಲಾಕರ್‌ ಮೂಲಕ ಹಾಜರುಪಡಿಸಬೇಕು. ಈ ಗುರುತಿನ ಚೀಟಿಗಳಲ್ಲಿ ಫೋಟೋ ಮತ್ತು ಕರ್ನಾಟಕ ರಾಜ್ಯದ ವಾಸ ಸ್ಥಳ ನಮೂದಿಸಿರುವುದು ಕಡ್ಡಾಯವಾಗಿದೆ.

ನಿರ್ವಾಹಕರಿಗೂ ಜವಾಬ್ದಾರಿ: ಯೋಜನೆಯ ಲಾಭ ಪಡೆಯುವ ಎಲ್ಲ ಮಹಿಳೆಯರಿಗೆ ಶೂನ್ಯ ಮಾದರಿಯ ಟಿಕೆಟ್‌ ವಿತರಿಸಬೇಕು. ಮಹಿಳೆಯರಿಂದ ಯಾವುದೇ ಮೊತ್ತ ಪಡೆಯಬಾರದು. ಪ್ರಯಾಣದ ವೇಳೆ ಗುರುತಿನ ಚೀಟಿಯನ್ನು ಮಾನ್ಯ ಮಾಡಬೇಕು. ನಿಲ್ದಾಣಗಳಲ್ಲಿ ಮಹಿಳೆಯರಿಗೆ ಅಂತರ್‌ರಾಜ್ಯ ಬಸ್‌ಗಳಲ್ಲಿ ಪ್ರಯಾಣ ಇಲ್ಲದಿರುವುದನ್ನು ನಯವಾಗಿ ತಿಳಿಸಬೇಕು. ಉಚಿತ ಲಗೇಜ್‌ ಮಿತಿ ಹೊರತುಪಡಿಸಿ ಹೆಚ್ಚು ಲಗೇಜ್‌ ಇದ್ದರೆ ಹಣ ಪಡೆಯಬೇಕು. ಮಹಿಳಾ ಪ್ರಯಾಣಿಕರ ಜೊತೆ ಸೌಜನ್ಯದಿಂದ ನಡೆದುಕೊಳ್ಳಬೇಕು. ದೂರು ಬಾರದಂತೆ ಕಾರ್ಯನಿರ್ವಹಣೆ ಮಾಡಬೇಕು. ಕೆಲಸ ಮುಗಿದ ಬಳಿಕ ಮಹಿಳಾ ಪ್ರಯಾಣಿಕರಿಗೆ ವಿತರಿಸಿರುವ ಶೂನ್ಯ ಟಿಕೆಟ್‌ ಸಂಖ್ಯೆ ನಮೂದಿಸಬೇಕು. ಬಸ್ಸುಗಳಲ್ಲಿ ಪ್ರಯಾಣಿಸುತ್ತಿರುವ ವಾಸ್ತವ ಸಂಖ್ಯೆಯ ಮಹಿಳಾ ಪ್ರಯಾಣಿಕರಿಗೆ ಮಾತ್ರ ಉಚಿತ ಟಿಕೆಟ್‌ ವಿತರಿಸಬೇಕು. ಮಾರ್ಗ ಮಧ್ಯದಲ್ಲಿ ಇಟಿಎಂ ಯಂತ್ರಗಳು ದುರಸ್ತಿಗೊಂಡಲ್ಲಿ, ಲಗೇಜು ಚೀಟಿ ಮಾದರಿಯಲ್ಲಿ ಪ್ರತ್ಯೇಕ ಪಿಂಕ್‌ ಬಣ್ಣದ ಖಾಲಿ ಇರುವ ಚೀಟಿಗಳನ್ನು ಮಹಿಳಾ ಪ್ರಯಾಣಿಕರಿಗೆ ನೀಡಬೇಕು ಮತ್ತು ಕಾರ್ಬನ್‌ ಪ್ರತಿಯನ್ನು ಘಟಕಕ್ಕೆ ಹಿಂದಿರುಗಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕಾಫಿನಾಡಲ್ಲಿ ಶಿಕ್ಷಕರ ಕೊರತೆ: ಶಾಲೆಗೆ ಮಕ್ಕಳನ್ನೇ ಕಳುಹಿಸದ ಪೋಷಕರು!

ಜೂನ್‌ 11ಕ್ಕೆ ಶಕ್ತಿ ಯೋಜನೆಗೆ ಚಾಲನೆ: ‘ಶಕ್ತಿ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೂನ್‌ 11ರಂದು ವಿಧಾನಸೌಧದ ಮುಂಭಾಗದಲ್ಲಿ ಚಾಲನೆ ನೀಡಲಿದ್ದಾರೆ. ಅಂದು ಮಧ್ಯಾಹ್ನ 1 ಗಂಟೆಯ ಬಳಿಕ ಈ ಸೌಲಭ್ಯವನ್ನು ಮಹಿಳೆಯರು ಪಡೆದುಕೊಳ್ಳಬಹುದು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಯೋಜನೆಯ ಲೋಗೋ ಹಾಗೂ ಸ್ಮಾರ್ಚ್‌ ಕಾರ್ಡ್‌ ಮಾದರಿಯನ್ನು ಮುಖ್ಯಮಂತ್ರಿಗಳು ಅನಾವರಣಗೊಳಿಸಲಿದ್ದಾರೆ.

Follow Us:
Download App:
  • android
  • ios