ಗ್ಯಾರಂಟಿ ಸ್ಕೀಂ ಲೆಕ್ಕ ನೀಡಿ ವಿಪಕ್ಷಗಳಿಗೆ ಸಿಎಂ ಚಾಟಿ
ಕಳೆದ ಆರು ತಿಂಗಳಲ್ಲಿ ಗೃಹ ಲಕ್ಷ್ಮೀ ಯೋಜನೆಯಡಿ 99.52 ಲಕ್ಷ ನೋಂದಾಯಿತ ಮಹಿಳೆಯರ ಖಾತೆಗೆ ಹಣ ವರ್ಗಾವಣೆಯಾಗಿದೆ. ಈ ಯೋಜನೆಗೆ 17,500 ಕೋಟಿ ರು. ಅನುದಾನ ಮೀಸಲಿಟ್ಟಿದ್ದು, ಈವರೆಗೆ 11,200 ಕೋಟಿ ರು. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು(ನ.21): ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಪ್ರತಿಪಕ್ಷಗಳ ಟೀಕೆಗೆ ಪ್ರತಿಯಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಅಂಕಿ-ಅಂಶಗಳ ಸಹಿತ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಳೆದ ಆರು ತಿಂಗಳ ಅವಧಿಯಲ್ಲಿ ನಾಡಿನ ಜನತೆಗೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ ಆರು ತಿಂಗಳಲ್ಲಿ ಗೃಹ ಲಕ್ಷ್ಮೀ ಯೋಜನೆಯಡಿ 99.52 ಲಕ್ಷ ನೋಂದಾಯಿತ ಮಹಿಳೆಯರ ಖಾತೆಗೆ ಹಣ ವರ್ಗಾವಣೆಯಾಗಿದೆ. ಈ ಯೋಜನೆಗೆ 17,500 ಕೋಟಿ ರು. ಅನುದಾನ ಮೀಸಲಿಟ್ಟಿದ್ದು, ಈವರೆಗೆ 11,200 ಕೋಟಿ ರು. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ: ಡಿ.ಕೆ.ಶಿವಕುಮಾರ್
ಗೃಹಜ್ಯೋತಿ ಯೋಜನೆಯಡಿ 200 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವ ಪ್ರತಿಯೊಂದು ಕುಟುಂಬಕ್ಕೂ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ 1.56 ಕೋಟಿ ಕುಟುಂಬಗಳಿಗೆ ಅನುಕೂಲವಾಗುವಂತೆ 2152 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಶಕ್ತಿ ಯೋಜನೆಗೆ 2,071 ಕೋಟಿ ರು. ವೆಚ್ಚ:
ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುವ ಶಕ್ತಿ ಯೋಜನೆಗೆ 2023-24ನೇ ಸಾಲಿನಲ್ಲಿ ಸರ್ಕಾರ ಒಟ್ಟು 2,800 ಕೋಟಿ ರು. ಅನುದಾನ ಮೀಸಲಿಟ್ಟಿದೆ. ಜೂನ್ 11ರಿಂದ ಅಕ್ಟೋಬರ್‌ವರೆಗೆ 87.31 ಕೋಟಿ ಮಹಿಳೆಯರು (ಟ್ರಿಪ್) ಉಚಿತವಾಗಿ ಪ್ರಯಾಣಿಸಿದ್ದಾರೆ. ಇದಕ್ಕೆ 2,071 ಕೋಟಿ ರು. ವೆಚ್ಚವಾಗಿದೆ ಎಂದು ಹೇಳಿದರು.
ಅನ್ನಭಾಗ್ಯ ಅಡಿ 2,444 ಕೋಟಿ ರು. ಹಣ:
ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬಗಳ ಪ್ರತಿ ಫಲಾನುಭವಿಗೆ ಮಾಸಿಕ ತಲಾ 10 ಕೆ.ಜಿ ಅಕ್ಕಿ ನೀಡುವುದಾಗಿ ಹೇಳಲಾಗಿತ್ತು. ಪ್ರಸ್ತುತ 5 ಕೆ.ಜಿ. ಆಹಾರಧಾನ್ಯ ನೀಡಲಾಗುತ್ತಿದ್ದು, ಅಕ್ಕಿಯ ಅಲಭ್ಯತೆಯ ಕಾರಣಕ್ಕಾಗಿ ತಲಾ 170 ರು. ಹಣದ ವರ್ಗಾವಣೆ ಮಾಡಲಾಗುತ್ತಿದೆ. ಈ ರೀತಿ 3.92 ಕೋಟಿ ಫಲಾನುಭವಿಗಳ ಖಾತೆಗೆ 2,444 ಕೋಟಿ ರು. ಹಣ ಜಮೆಯಾಗಿದೆ.
ಕಳೆದ 6 ತಿಂಗಳ ಅವಧಿಯಲ್ಲಿ ನಾಡಿನ ಜನತೆಗೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸುವ ಪ್ರಯತ್ನ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳು ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ. ಸಮಾಜದ ಶಾಂತಿ-ಸಾಮರಸ್ಯದ ರಕ್ಷಣೆ ನಮ್ಮ ಸರ್ಕಾರದ ಪ್ರಮುಖ ಉದ್ದೇಶ ಎಂದು ಹೇಳಿದರು.
ಯುವನಿಧಿಯಿಂದ 4.5 ಲಕ್ಷ ಜನಕ್ಕೆ ಅನುಕೂಲ:
ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3,000 ರು. ಹಾಗೂ ಡಿಪ್ಲೊಮಾ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 1,500 ರು. ನಿರುದ್ಯೋಗ ಭತ್ಯೆ ನೀಡುವ ‘ಯುವನಿಧಿ’ ಯೋಜನೆ ಜಾರಿಗೆ ತರಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 4.5 ಲಕ್ಷ ಯುವ ಜನರಿಗೆ ಇದರಿಂದ ಅನುಕೂಲವಾಗುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪದವೀಧರರಿಗೆ ಗುಡ್ ನ್ಯೂಸ್: 2024ರಿಂದ ಕಾಂಗ್ರೆಸ್ 5ನೇ ಗ್ಯಾರಂಟಿ ಯುವನಿಧಿ ಯೋಜನೆ ಜಾರಿ-ಸಿಎಂ ಸಿದ್ದರಾಮಯ್ಯ
ಶಾಂತಿ-ಸಾಮರಸ್ಯ ರಕ್ಷಣೆ ನಮ್ಮ ಉದ್ದೇಶ
ಕಳೆದ 6 ತಿಂಗಳ ಅವಧಿಯಲ್ಲಿ ನಾಡಿನ ಜನತೆಗೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸುವ ಪ್ರಯತ್ನ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳು ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ. ಸಮಾಜದ ಶಾಂತಿ-ಸಾಮರಸ್ಯದ ರಕ್ಷಣೆ ನಮ್ಮ ಸರ್ಕಾರದ ಪ್ರಮುಖ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗೃಹ ಲಕ್ಷ್ಮೀ
99.52 ಲಕ್ಷ: ತಲಾ 2000 ರು.ನಂತೆ ಹಣ ಪಡೆದ ಮಹಿಳೆಯರ ಸಂಖ್ಯೆ
₹11200 ಕೋಟಿ: ಸ್ತ್ರೀಯರ ಖಾತೆಗೆ ಸರ್ಕಾರ ವರ್ಗಾಯಿಸಿದ ಹಣದ ಮೌಲ್ಯ
ಗೃಹ ಜ್ಯೋತಿ
1.56 ಕೋಟಿ: ಉಚಿತ ವಿದ್ಯುತ್ ಸೌಲಭ್ಯ ಪಡೆದ ಕುಟುಂಬಗಳು
₹2152 ಕೋಟಿ: ಜನರು ಬಳಸಿದ ಉಚಿತ ವಿದ್ಯುತ್ ಮೌಲ್ಯ
ಶಕ್ತಿ
87.31 ಕೋಟಿ: ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ ಸ್ತ್ರೀಯರ ಸಂಖ್ಯೆ
₹2071 ಕೋಟಿ: ಮಹಿಳೆಯರ ಉಚಿತ ಪ್ರಯಾಣಕ್ಕೆ ಸರ್ಕಾರ ಭರಿಸಿದ ವೆಚ್ಚ
ಅನ್ನಭಾಗ್ಯ
3.92 ಕೋಟಿ: ರಾಜ್ಯದಲ್ಲಿರುವ ಅನ್ನಭಾಗ್ಯ ಫಲಾನುಭವಿಗಳು
₹2444 ಕೋಟಿ: ಉಚಿತ ಅಕ್ಕಿ ಬದಲು ಕೇಜಿಗೆ 170 ರು.ನಂತೆ 5 ಕೇಜಿ ಕೊಡಲು ಆದ ವೆಚ್ಚ