ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರೇ, ಸಾರಿಗೆ ನೌಕರರು ಮೊದಲ ಬಾರಿ ವೇತನ‌ ಪರಿಷ್ಕರಣೆಗಾಗಿ ಮುಷ್ಕರ ನಡೆಸಿದಾಗ ಸಾರಿಗೆ ಸಚಿವರಾಗಿದ್ದವರು ನೀವೇ ಅಲ್ಲವೇ? ಎಂದು ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು (ಆ.06): ‘ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರೇ, ಸಾರಿಗೆ ನೌಕರರು ಮೊದಲ ಬಾರಿ ವೇತನ‌ ಪರಿಷ್ಕರಣೆಗಾಗಿ ಮುಷ್ಕರ ನಡೆಸಿದಾಗ ಸಾರಿಗೆ ಸಚಿವರಾಗಿದ್ದವರು ನೀವೇ ಅಲ್ಲವೇ? ಆಗ ಅಸಾಮರ್ಥ್ಯದಿಂದ ಕೈಕಟ್ಟಿ ಕೂತು ನವರಂಗಿ ಆಟ ಆಡಿದ್ದ ನೀವು ಈಗ ಗೋಸುಂಬೆ ನಾಟಕ ಆಡುತ್ತಿದ್ದೀರಾ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಅಧಿಕಾರ ಇದ್ದಾಗ ನವರಂಗಿ ಆಟ, ವಿರೋಧ ಪಕ್ಷದಲ್ಲಿದ್ದಾಗ ಗೋಸುಂಬೆ ನಾಟಕ ನಿಮ್ಮ ಚಾಳಿ. ನನ್ನ ಮತ್ತು ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುವ ಮೊದಲು, ಸಾರಿಗೆ ಸಚಿವರಾಗಿ ನೀವು ಮತ್ತು ನಿಮ್ಮ ಸರ್ಕಾರ ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಮಾಡಿರುವ ಮೋಸ ಮತ್ತು ದ್ರೋಹದ ಇತಿಹಾಸವನ್ನು ನೆನಪು ಮಾಡಿಕೊಳ್ಳಿ’ ಎಂದು ಆಗ್ರಹ ಮಾಡಿದ್ದಾರೆ.

ಶಾಸಕರ ಸಮಸ್ಯೆ ಆಲಿಸಿದ ಸಿಎಂ ಸಿದ್ದು: ಹೈಕಮಾಂಡ್‌ ಸೂಚನೆ ಮೇರೆಗೆ ಸ್ವಪಕ್ಷದ ಶಾಸಕರ ಸಮಸ್ಯೆ ಆಲಿಸುವ ಪ್ರಕ್ರಿಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿದ್ದು, ಮೊದಲ ದಿನದ ಸಭೆಯಲ್ಲಿ ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಸಿದ್ದರಾಮಯ್ಯ ಅವರು ಶಾಸಕರಿಗೆ ಪಾಠ ಮಾಡಿದರು. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಶಾಸಕರೊಂದಿಗೆ ಸಭೆ ನಡೆಸಿ ಸಮಸ್ಯೆ ಆಲಿಸಿದ ನಂತರ, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರ ದೂರುದುಮ್ಮಾನ ಆಲಿಸಲು ನಾಲ್ಕು ದಿನಗಳ ಸಭೆಗೆ ಚಾಲನೆ ನೀಡಿದ್ದಾರೆ.

ವಿಧಾನಸೌಧದ ಮುಖ್ಯಮಂತ್ರಿ ಅವರ ಕಚೇರಿಯಲ್ಲಿ ನಡೆದ ಮೊದಲ ದಿನ ಮೈಸೂರು, ಚಾಮರಾಜನಗರ, ತುಮಕೂರು, ಕೊಡಗು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳ 22 ಶಾಸಕರು ಮತ್ತು ಆಯಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಪ್ರಮುಖವಾಗಿ ಕ್ಷೇತ್ರವಾರು ಅನುಷ್ಠಾನಗೊಳಿಸಬೇಕಾದ ಕಾರ್ಯಕ್ರಮಗಳ ಕುರಿತು ಸಿದ್ದರಾಮಯ್ಯ ಅವರು ಶಾಸಕರಿಂದ ಮಾಹಿತಿ ಪಡೆದರು. ಇದೇ ವೇಳೆ ಯಾವೆಲ್ಲ ಕಾರ್ಯಕ್ರಮಗಳತ್ತ ಹೆಚ್ಚಿನ ಗಮನಕೊಡಬೇಕು ಎಂಬುದರ ಬಗ್ಗೆಯೂ ಶಾಸಕರಿಗೆ ಸೂಚನೆ ನೀಡಿದ್ದಾರೆ.

50 ಕೋಟಿ ರು. ಸರಿಯಾಗಿ ಬಳಸಿಕೊಳ್ಳಿ: ಅನುದಾನ ವಿಚಾರವಾಗಿ ಶಾಸಕರ ಅಸಮಾಧಾನ ತಣಿಸಲು ಕಾಂಗ್ರೆಸ್‌ನ ಎಲ್ಲ ಶಾಸಕರಿಗೆ ತಲಾ 50 ಕೋಟಿ ರು. ಅನುದಾನ ನಿಗದಿ ಮಾಡಲಾಗಿದೆ. ಆ ಅನುದಾನ ಯಾವ ರೀತಿ ಬಳಕೆ ಮಾಡಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ಸೂಚನೆಗಳನ್ನು ನೀಡಿದ್ದಾರೆ. ರಸ್ತೆ, ಸೇತುವೆ ನಿರ್ಮಾಣ ಸೇರಿ ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳಿಗೆ 37.50 ಕೋಟಿ ರು. ಮೊತ್ತದ ಕ್ರಿಯಾಯೋಜನೆ ರೂಪಿಸಬೇಕು ಹಾಗೂ ಉಳಿದ 12.50 ಕೋಟಿ ರು.ಗಳನ್ನು ತಮ್ಮ ವಿವೇಚನಾಧಿಕಾರದ ಕಾಮಗಾರಿಗೆ ಬಳಕೆ ಮಾಡುವಂತೆ ಮತ್ತೊಮ್ಮೆ ಸೂಚಿಸಿದ್ದಾರೆ.