Asianet Suvarna News Asianet Suvarna News

ಹಿರಿಯರ ಖಾತೆ ಕ್ಯಾತೆಗೆ ಸಿದ್ದು ಡೋಂಟ್‌ ಕೇರ್‌..!

ಖಾತೆ ಬದಲಿಲ್ಲ, ಪ್ರಮುಖ ಖಾತೆ ನೀಡುವಂತೆ ಕೆಲ ಸಚಿವರು ಇಟ್ಟಬೇಡಿಕೆಗೆ ಮಣಿಯದ ಸಿಎಂ, ಬದಲಾವಣೆ ಮಾಡಲ್ಲ ಎಂಬ ಸಂದೇಶ, ಇಂದು ಸಚಿವರ ಅಧಿಕೃತ ಖಾತೆ ಪಟ್ಟಿ ಪ್ರಕಟ ಸಾಧ್ಯತೆ

CM Siddaramaiah Stand that No Major Changes can be made in the Minister Post grg
Author
First Published May 29, 2023, 4:38 AM IST

ಬೆಂಗಳೂರು(ಮೇ.29): ಖಾತೆ ಹಂಚಿಕೆ ಬಗ್ಗೆ ಹಿರಿಯ ಸಚಿವರ ಅಸಮಾಧಾನ ಮುಂದುವರೆದಿದೆ. ಆದರೆ, ಹಂಚಿಕೆ ಮಾಡಲುದ್ದೇಶಿಸಿರುವ ಖಾತೆಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬ ನಿಲುವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿರುವ ಹಿನ್ನೆಲೆಯಲ್ಲಿ ರಾಮಲಿಂಗಾರೆಡ್ಡಿ ಅವರನ್ನು ಹೊರತುಪಡಿಸಿ ಉಳಿದ ಬಹುತೇಕ ಹಿರಿಯ ಸಚಿವರು ದೊರೆತ ಖಾತೆಯನ್ನು ಒಪ್ಪಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪರೋಕ್ಷವಾಗಿ ಬಹಿರಂಗಪಡಿಸಲಾಗಿರುವ ಕರಡು ಖಾತೆ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆಗಳೊಂದಿಗೆ ಅಧಿಕೃತ ಖಾತೆ ಹಂಚಿಕೆ ಪಟ್ಟಿ ಸೋಮವಾರ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ರಾಮಲಿಂಗಾರೆಡ್ಡಿಗೆ ಒಂದು ಖಾತೆ ತಗೊಂಡ್ರೆ ಮತ್ತೊಂದು ಫ್ರೀ: ಆಪ್ತನಿಗೆ ಆಫರ್‌ ಕೊಟ್ಟ ಡಿ.ಕೆ.ಶಿವಕುಮಾರ್

ಡಾ.ಜಿ.ಪರಮೇಶ್ವರ್‌, ಕೆ.ಎಚ್‌.ಮುನಿಯಪ್ಪ, ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಸಚಿವರಿಗೆ ತಮಗೆ ಹಂಚಿಕೆಯಾಗಿದೆ ಎನ್ನಲಾದ ಖಾತೆಗಳ ಬಗ್ಗೆ ಸಮಾಧಾನವಿಲ್ಲ. ಖಾಸಗಿಯಾಗಿ ಈ ನಾಯಕರು ತಮ್ಮ ಅಸಮಾಧಾನವನ್ನು ತೋರ್ಪಡಿಸಿಕೊಂಡಿದ್ದು, ಬದಲಾವಣೆಗಾಗಿ ಒತ್ತಡ ತರುವ ಪ್ರಯತ್ನವನ್ನು ಮಾಡಿದ್ದಾರೆ. ಈ ಪೈಕಿ ರಾಮಲಿಂಗಾರೆಡ್ಡಿ ಅವರು ತಮಗೆ ಹಂಚಿಕೆ ಮಾಡಲಾಗಿದೆ ಎನ್ನಲಾದ ಸಾರಿಗೆ ಖಾತೆ ಒಪ್ಪಲು ಸಾಧ್ಯವೇ ಇಲ್ಲ ಎನ್ನುವ ಮನಸ್ಥಿತಿ ಮುಟ್ಟಿದ್ದು, ಇದೇ ಖಾತೆ ಒಪ್ಪಬೇಕು ಎಂದಾದರೆ ಸಚಿವ ಸ್ಥಾನವೇ ಬೇಡ ಎಂದು ಬೇಸರಿಸಿದ್ದರು ಎನ್ನಲಾಗಿದೆ.

ಈ ಮಾಹಿತಿ ಹೊರಬಿದ್ದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹೋದರರು ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಸಿದ್ದು, ಇದರಲ್ಲಿ ಬಹುತೇಕ ಯಶಸ್ವಿಯೂ ಆಗಿರುವ ಲಕ್ಷಣಗಳಿವೆ.
ಉಳಿದಂತೆ ಇತರ ಹಿರಿಯ ನಾಯಕರು ಖಾತೆ ಬದಲಾವಣೆಗೆ ಒತ್ತಡ ನಿರ್ಮಾಣ ಮಾಡಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಲಿ ಮಾಡಿರುವ ಖಾತೆ ಹಂಚಿಕೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಒಪ್ಪಲು ಸುತಾರಾಂ ತಯಾರಿಲ್ಲ ಎಂದು ಅವರ ಆಪ್ತಮೂಲಗಳು ಹೇಳಿವೆ. ಹೀಗಾಗಿ ಹಿರಿಯ ಸಚಿವರು ಮನಸ್ಸು ಇಲ್ಲದಿದ್ದರೂ ತಮಗೆ ದೊರೆತ ಖಾತೆಗೆ ಸಮಾಧಾನಪಟ್ಟುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಕೆಲ ಬದಲಾವಣೆಗಳೊಂದಿಗೆ ಇಂದು(ಸೋಮವಾರ) ಖಾತೆ ಹಂಚಿಕೆ ಪಟ್ಟಿ ಅಧಿಕೃತವಾಗಿ ಹೊರ ಬೀಳುವ ನಿರೀಕ್ಷೆಯಿದೆ.

Follow Us:
Download App:
  • android
  • ios