ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಾರೆ. ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿಗರ ಡೋಂಗಿ ರಾಜಕಾರಣದ ಬಗ್ಗೆ ಜನರನ್ನು ಜಾಗೃತರನ್ನಾಗಿಸಲು ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. 

ಬೆಂಗಳೂರು (ಡಿ.29): ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಾರೆ. ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿಗರ ಡೋಂಗಿ ರಾಜಕಾರಣದ ಬಗ್ಗೆ ಜನರನ್ನು ಜಾಗೃತರನ್ನಾಗಿಸಲು ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್‌ ಪಕ್ಷದ 139ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ನಾಯಕರು ಜನರಲ್ಲಿ ಹಿಂದುತ್ವದ ಅಮಲನ್ನು ಬಿತ್ತುತ್ತಿದ್ದಾರೆ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಎನ್ನುತ್ತಾ ಬುರುಡೆ ಬಿಡುತ್ತಿದ್ದಾರೆ. 

ಬಹುತ್ವದ ರಾಷ್ಟ್ರವನ್ನು ಒಡೆಯಲಾಗುತ್ತಿದೆ. ನರೇಂದ್ರ ಮೋದಿ ಸೇರಿದಂತೆ ಎಲ್ಲ ಬಿಜೆಪಿ ನಾಯಕರು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಾ ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ. ಅವರ ಡೋಂಗಿತನ ಬಯಲು ಮಾಡಬೇಕಾದದ್ದು ಕಾಂಗ್ರೆಸ್‌ ಕಾರ್ಯಕರ್ತರ ಕರ್ತವ್ಯವಾಗಿದೆ ಎಂದರು. ನರೇಂದ್ರ ಮೋದಿ ಅವರು ಮಾತಿಗೊಮ್ಮೆ 60 ವರ್ಷ ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎನ್ನುತ್ತಾರೆ. ಆಧುನಿಕ ಭಾರತದ ರಚನೆಗೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಅಡಿಪಾಯ ಹಾಕಿದರು. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ದೇಶದ ಅಭಿವೃದ್ಧಿಗೆ ಕೆಲಸ ಮಾಡಿದರು. ದೇಶದಲ್ಲಿ ಈಗಿರುವ ಅಣೆಕಟ್ಟುಗಳನ್ನು ನಿರ್ಮಿಸಿದ್ದು ಕಾಂಗ್ರೆಸ್‌. ಆದರೆ, ಬಿಜೆಪಿ ಈವರೆಗೆ ಒಂದೇ ಒಂದು ಅಣೆಕಟ್ಟನ್ನೂ ನಿರ್ಮಿಸಿಲ್ಲ. 

PSI Scam: ಎಚ್ಡಿಕೆ, ಇತರರಿಗೆ ಯಾಕೆ ನೋಟಿಸ್‌ ನೀಡಿದ್ದಾರೆಂದು ಗೊತ್ತಿಲ್ಲ: ಸಚಿವ ಪರಮೇಶ್ವರ್‌

ಇದು ಒಂದು ಉದಾಹರಣೆಯಷ್ಟೇ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್‌ ಬಹುದೊಡ್ಡ ಕೊಡುಗೆ ನೀಡಿದೆ. ಇದನ್ನು ಜನರಿಗೆ ತಿಳಿಸಬೇಕಿದೆ ಎಂದು ಹೇಳಿದರು. ಸ್ವಾತಂತ್ರ್ಯ ಹೋರಾಟದ ದೃಷ್ಟಿಯಿಂದ ರಚನೆಯಾದ ಕಾಂಗ್ರೆಸ್, ಈಗ ಬೃಹದಾಕಾರವಾಗಿ ಬೆಳೆದಿದೆ. ಕಾಂಗ್ರೆಸ್‌ನ ಸದಸ್ಯರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ನಾವೆಲ್ಲ ಕಾಂಗ್ರೆಸ್‌ನ ಸದಸ್ಯರಾಗಿದ್ದಕ್ಕೆ ಹೆಮ್ಮೆ ಪಡಬೇಕು. ಆದರೆ, ಆರ್‌ಎಸ್‌ಎಸ್‌, ಜನಸಂಘ ಮತ್ತು ಬಿಜೆಪಿಯ ಸದಸ್ಯರು ದೇಶಕ್ಕಾಗಿ ಹೋರಾಟವನ್ನೇ ಮಾಡಲಿಲ್ಲ. ಅಂತಹವರು ಕಾಂಗ್ರೆಸ್‌ ಪಕ್ಷವನ್ನು ಪ್ರಶ್ನಿಸುವ ನೈತಿಕತೆ ಹೊಂದಿಲ್ಲ ಎಂದು ವಾಗ್ದಾಳಿ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಸಚಿವರಾದ ದಿನೇಶ್‌ ಗುಂಡೂರಾವ್‌, ಈಶ್ವರ್‌ ಖಂಡ್ರೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಸಚಿವೆ ರಾಣಿ ಸತೀಶ್‌ ಇತರರಿದ್ದರು.

ಹಿಂದುತ್ವದಲ್ಲಿ ಭೇದವಿಲ್ಲ: ಬಿಜೆಪಿ ನಾಯಕರು ಹಿಂದುತ್ವದಲ್ಲಿ ಮೃದು-ಗಟ್ಟಿ ಎಂದು ವಿಂಗಡಣೆ ಮಾಡುತ್ತಿದ್ದಾರೆ. ಆದರೆ, ಹಿಂದುತ್ವ ಎಂದರೆ ಒಂದೇ. ನಾವೆಲ್ಲರೂ ಹಿಂದೂಗಳೇ. ನಾವೂ ನಮ್ಮ ಊರುಗಳಲ್ಲಿ ರಾಮನ ದೇವಸ್ಥಾನ ನಿರ್ಮಿಸಿದ್ದೇವೆ, ರಾಮ ಭಜನೆಯನ್ನು ಮಾಡುತ್ತೇವೆ. ಆದರೆ, ಬಿಜೆಪಿಗರು ಮಾತ್ರ ಡೋಂಗಿ ಹಿಂದುತ್ವದ ಹಿಂದೆ ಬಿದ್ದಿದ್ದಾರೆ. ಇದರ ಬಗ್ಗೆ ಜನರನ್ನು ಎಚ್ಚರಿಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ವೀರಶೈವ ಅಧಿವೇಶನ ಬಗ್ಗೆ ಅಸಮಾಧಾನ ಇಲ್ಲ: ಸಚಿವ ಎಂ.ಬಿ.ಪಾಟೀಲ್‌

ರಾಹುಲ್‌ ಗಾಂಧಿ ಪ್ರಧಾನಿ ಮಾಡಲು ಕೆಲಸ ಮಾಡೋಣ: ದೇಶದ ಸಮಸ್ಯೆಗೆ ಪರಿಹಾರ ನೀಡಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಭಿನ್ನಾಭಿಪ್ರಾಯ ಮರೆತು ಒಂದಾಗಿ ಕೆಲಸ ಮಾಡಿ ದೇಶದಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಬೇಕು ಹಾಗೂ ರಾಹುಲ್‌ ಗಾಂಧಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕು. ದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದ ಕೂಡಲೆ ರಾಜಕೀಯವಾಗಿ ಮಹಿಳಾ ಮೀಸಲಾತಿ ನೀಡಲಾಗುವುದು ಹಾಗೂ ಸಾಮಾಜಿಕ ನ್ಯಾಯವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು. ಅದಕ್ಕೆ ರಾಹುಲ್‌ ಗಾಂಧಿ ಪ್ರಧಾನಿಯಾಗುವುದು ಅತ್ಯಗತ್ಯ ಎಂದು ಸಿದ್ದರಾಮಯ್ಯ ಅಭಿಪ್ರಾಯಟ್ಟರು.