ಕೇಂದ್ರ ಸರ್ಕಾರವು ಹದಿನೈದನೇ ಹಣಕಾಸು ಆಯೋಗದ ವರದಿಯಲ್ಲಿ ನಮ್ಮ ರಾಜ್ಯಕ್ಕೆ ತೀವ್ರ ಅನ್ಯಾಯ ಮಾಡಿದೆ. ರಾಜ್ಯದಿಂದ ಪ್ರತಿ ವರ್ಷ 4 ಲಕ್ಷ ಕೋಟಿ ರು. ಆದಾಯ ಪಡೆಯುವ ಕೇಂದ್ರವು ರಾಜ್ಯಕ್ಕೆ 50 ಸಾವಿರ ರು.ಗಳನ್ನಷ್ಟೇ ನೀಡುತ್ತಿದೆ. 

ಬೆಂಗಳೂರು (ಮೇ.21): ‘ಕೇಂದ್ರ ಸರ್ಕಾರವು ಹದಿನೈದನೇ ಹಣಕಾಸು ಆಯೋಗದ ವರದಿಯಲ್ಲಿ ನಮ್ಮ ರಾಜ್ಯಕ್ಕೆ ತೀವ್ರ ಅನ್ಯಾಯ ಮಾಡಿದೆ. ರಾಜ್ಯದಿಂದ ಪ್ರತಿ ವರ್ಷ 4 ಲಕ್ಷ ಕೋಟಿ ರು. ಆದಾಯ ಪಡೆಯುವ ಕೇಂದ್ರವು ರಾಜ್ಯಕ್ಕೆ 50 ಸಾವಿರ ರು.ಗಳನ್ನಷ್ಟೇ ನೀಡುತ್ತಿದೆ. ಈ ಅನ್ಯಾಯವನ್ನು ಪ್ರಶ್ನಿಸಿ ಸೂಕ್ತ ತೆರಿಗೆ ಪಾಲು ಪಡೆಯುಲು ಹಿಂದಿನ ಬೇಜವಾಬ್ದಾರಿ ಹಾಗೂ ಅಸಮರ್ಥ ಬಿಜೆಪಿ ಸರ್ಕಾರ ವಿಫಲವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ರಾಜ್ಯದಿಂದ ಜಿಎಸ್ಟಿ, ಪೆಟ್ರೋಲ್‌-ಡೀಸೆಲ್‌, ಅಡುಗೆ ಅನಿಲ ಮತ್ತಿತರ ತೆರಿಗೆಗಳಿಂದ ಪ್ರತಿ ವರ್ಷ 4 ಲಕ್ಷ ಕೋಟಿ ರು.ಗಳಷ್ಟುಆದಾಯ ಪಡೆಯುತ್ತಿದೆ. ಇದರಲ್ಲಿ ನನ್ನ ಪ್ರಕಾರ ತೆರಿಗೆ ಪಾಲು ಹಾಗೂ ಸಹಾಯಧನ ಸೇರಿ 1 ಲಕ್ಷ ಕೋಟಿ ರು. ರಾಜ್ಯಕ್ಕೆ ವಾಪಸು ನೀಡಬೇಕು. ಆದರೆ ಕೇಂದ್ರವು 37 ಸಾವಿರ ಕೋಟಿ ರು. ತೆರಿಗೆ ಪಾಲು ಹಾಗೂ 13 ಸಾವಿರ ಕೋಟಿ ರು. ಸಹಾಯಧನ ಸೇರಿ 50 ಸಾವಿರ ಕೋಟಿ ರು. ಮಾತ್ರ ನೀಡುತ್ತಿದೆ ಎಂದು ಹೇಳಿದರು.

5ನೇ ಬಾರಿ ಶಾಸಕತ್ವ ಬಡವರ ಪರ ಹೋರಾಟ ಫಲ: ಆರಗ ಜ್ಞಾನೇಂದ್ರ

5,495 ಕೋಟಿ ರು. ವಿಶೇಷ ಸಹಾಯಧನ ನಷ್ಟ: ಇನ್ನು 15ನೇ ಹಣಕಾಸು ಆಯೋಗವು ಜಿಎಸ್‌ಟಿಯಲ್ಲಿ ನಮಗೆ ಆದ ಅನ್ಯಾಯ ಪರಿಗಣಿಸಿ 5,495 ಕೋಟಿ ರು. ವಿಶೇಷ ಸಹಾಯಧನ ನೀಡಲು ಮದ್ಯಂತರ ವರದಿ ನೀಡಿತ್ತು. ಆದರೆ, ಈ ಹಣವನ್ನು ಅಂದಿನ ಅಸಮರ್ಥ ರಾಜ್ಯ ಸರ್ಕಾರ ಪಡೆದುಕೊಳ್ಳಲಿಲ್ಲ. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ ನಿರ್ಮಲಾ ಸೀತಾರಾಮನ್‌ ಅಂತಿಮ ವರದಿಯಲ್ಲಿ ವಿಶೇಷ ಪರಿಹಾರ ತೆಗೆಸಿಬಿಟ್ಟರು. ಹೀಗಾಗಿ ಅವರಿಂದ ರಾಜ್ಯವು ನಷ್ಟಅನುಭವಿಸಬೇಕಾಯಿತು ಎಂದು ತಿಳಿಸಿದರು.

ಬಿಜೆಪಿಯಿಂದ ದೇಶ, ರಾಜ್ಯ ಸಾಲದ ಸುಳಿಗೆ: ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸಾಲದ ಸುಳಿಗೆ ಸಿಲುಕುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ‘ಮನ್‌ ಕೀ ಬಾತ್‌’ನಲ್ಲಿ ಹೇಳುತ್ತಾರೆ. ಮನಮೋಹನ್‌ ಸಿಂಗ್‌ ಸರ್ಕಾರ ಅಂತ್ಯವಾದ ವೇಳೆಗೆ 2014ರಲ್ಲಿ ದೇಶದ ಒಟ್ಟು ಸಾಲ 53.11 ಲಕ್ಷ ಕೋಟಿ ರು. ಇತ್ತು. ಈಗ 155 ಲಕ್ಷ ಕೋಟಿ ರು.ಗಳಷ್ಟಾಗಿದೆ. ನರೇಂದ್ರ ಮೋದಿ ಅವಧಿಯಲ್ಲೇ ಬರೋಬ್ಬರಿ 103 ಲಕ್ಷ ಕೋಟಿ ರು.ಗಳಷ್ಟುಸಾಲ ಆಗಿದೆ. ದೇಶವನ್ನು ಸಾಲದ ಸುಳಿಗೆ ಸಿಲುಕಿಸಿದ್ದು ಯಾರು? ಎಂದು ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದರು.

ಇನ್ನು ರಾಜ್ಯದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ 2018ರ ಮಾಚ್‌ರ್‍ ವೇಳೆಗೆ 2.42 ಲಕ್ಷ ಕೋಟಿ ರು. ಸಾಲ ಇತ್ತು. 2023-24ರ ವೇಳೆಗೆ 5.64 ಲಕ್ಷ ಕೋಟಿ ರು.ಗಳಷ್ಟಾಗಿದೆ. ಕಳೆದ ನಾಲ್ಕು ವರ್ಷಗಳ ಬಿಜೆಪಿ ಅವಧಿಯಲ್ಲಿ ಬರೋಬ್ಬರಿ 3 ಲಕ್ಷ ಕೋಟಿ ರು.ಗಳಷ್ಟುಸಾಲ ಮಾಡಿದ್ದಾರೆ. ನನ್ನ 5 ವರ್ಷಗಳ ಅವಧಿಯಲ್ಲಿ 1.16 ಲಕ್ಷ ಕೋಟಿ ರು. ಸಾಲ ಮಾತ್ರ ಮಾಡಿದ್ದೆ. ಬಿಜೆಪಿ ಸರ್ಕಾರದ ಸಾಲದಿಂದಾಗಿ ರಾಜ್ಯದಲ್ಲಿ ಅಸಲು ಹಾಗೂ ಬಡ್ಡಿ ಮರುಪಾವತಿ ಸೇರಿ ಪ್ರತಿ ವರ್ಷ 56 ಸಾವಿರ ಕೋಟಿ ರು. ಪಾವತಿಸಬೇಕಾಗಿದೆ. ಅಸಲು ಬಡ್ಡಿಗಾಗಿಯೇ 56 ಸಾವಿರ ಕೋಟಿ ರು. ವೆಚ್ಚವಾಗುತ್ತಿರುವಾಗ ರಾಜ್ಯಾದ್ಯಂತ ಜನರ ಕಷ್ಟಗಳಿಗೆ ಸ್ಪಂದಿಸಲು ವರ್ಷಕ್ಕೆ 50 ಸಾವಿರ ಕೋಟಿ ರು. ನೀಡಲು ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು.

ದೇಶ ಗೆಲ್ಲಿಸುವ ಲೋಕಸಭಾ ಚುನಾವಣೆಗೆ ಸಜ್ಜಾಗಿ: ಶಾಸಕ ಸಿ.ಸಿ.ಪಾಟೀಲ್‌

ಜುಲೈನಲ್ಲಿ 3.25 ಲಕ್ಷ ಕೋಟಿ ಬಜೆಟ್‌: ಪ್ರಸ್ತುತ ಹಣಕಾಸು ವರ್ಷಕ್ಕೆ ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು 3.10 ಲಕ್ಷ ಕೋಟಿ ರು. ಬಜೆಟ್‌ ಮಂಡಿಸಿದ್ದಾರೆ. ನಾವು ಜುಲೈ ತಿಂಗಳಲ್ಲಿ ಹೊಸದಾಗಿ 3.25 ಲಕ್ಷ ಕೋಟಿ ರು. ಗಾತ್ರದ ಬಜೆಟ್‌ ಮಂಡಿಸಲಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು. ಇದರಿಂದ ಹೆಚ್ಚುವರಿಯಾಗಿ 15 ಸಾವಿರ ಕೋಟಿ ರು. ಲಭ್ಯವಾಗಲಿದೆ. ಉಳಿದಂತೆ ಸಮರ್ಥ ತೆರಿಗೆ ಸಂಗ್ರಹ, ದುಂದು ವೆಚ್ಚಗಳಿಗೆ ಕಡಿವಾಣ ಸೇರಿದಂತೆ ಇತರೆ ಕ್ರಮಗಳಿಂದ 35 ಸಾವಿರ ಕೋಟಿ ರು. ಆದಾಯ ಕ್ರೋಢೀಕರಣ ಮಾಡುತ್ತೇವೆ. ತನ್ಮೂಲಕ ಗ್ಯಾರಂಟಿ ಯೋಜನೆಗಳನ್ನು ಸಮರ್ಥವಾಗಿ ಜಾರಿಗೆ ತರುತ್ತೇವೆ ಎಂದು ಹೇಳಿದರು.