Asianet Suvarna News Asianet Suvarna News

ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಬುಡ ಸಮೇತ ಕಿತ್ತೊಗೆಯುತ್ತೇವೆ: ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷ ಮತ್ತು ಸೇವಾದಳ ಮಾತ್ರ ಸಾಮಾಜಿಕ ನ್ಯಾಯ, ಹೋರಾಟ, ದೇಶದ ಸಮಗ್ರತೆ ಬಗ್ಗೆ ನಂಬಿಕೆ ಇಟ್ಟಕೊಂಡು ದೇಶವನ್ನು, ಸಮಾಜವನ್ನು ಬೆಸೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ಸಿನ ಅಡಿಪಾಯ ಸೇವಾದಳ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

CM Siddaramaiah Slams On BJP Over Lok Sabha Election gvd
Author
First Published Nov 11, 2023, 1:40 AM IST

ಬೆಂಗಳೂರು (ನ.11): ಕಾಂಗ್ರೆಸ್ ಪಕ್ಷ ಮತ್ತು ಸೇವಾದಳ ಮಾತ್ರ ಸಾಮಾಜಿಕ ನ್ಯಾಯ, ಹೋರಾಟ, ದೇಶದ ಸಮಗ್ರತೆ ಬಗ್ಗೆ ನಂಬಿಕೆ ಇಟ್ಟಕೊಂಡು ದೇಶವನ್ನು, ಸಮಾಜವನ್ನು ಬೆಸೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ಸಿನ ಅಡಿಪಾಯ ಸೇವಾದಳ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಶತಮಾನೋತ್ಸವ ಹಾಗೂ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ತೊಡಗಿಸಿಕೊಂಡ ಚರಿತ್ರೆಯಾಗಲಿ, ಇತಿಹಾಸವಾಗಲಿ ಇಲ್ಲ. 

ಸೇವಾದಳ ತ್ಯಾಗ, ಬಲಿದಾನಗಳ ಮೂಲಕ‌ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. ಇದೀಗ ಶತಮಾನೋತ್ಸವ ಆಚರಿಸುತ್ತಿರುವ ಕಾಂಗ್ರೆಸ್‌ ಸೇವಾದಳದ ಸೇವೆ, ಹೋರಾಟ, ಶ್ರಮ ಶ್ಲಾಘನೀಯ ಎಂದರು. ಗ್ರಾಮ ಸ್ವರಾಜ್ಯ ಮಹಾತ್ಮ ಗಾಂಧಿ ಅವರ ಕನಸು. ನೆಹರೂ ಮತ್ತು ಇಂದಿರಾಗಾಂಧಿ ಅವರ ಕಾಲದಲ್ಲಿ ಗ್ರಾಮಗಳ ಅಭಿವೃದ್ಧಿಗಾಗಿ ನೂರಾರು  ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ನಮ್ಮ ಸರ್ಕಾರ ಕೂಡ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಹಿಂದೆ ಅಧಿಕಾರದಲ್ಲಿದ್ದಾಗ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. 

ಬಿಜೆಪಿಗೆ ಬರುವಾಗ ಜಾಮೂನು ನೀಡ್ತಾರೆ, ಬಳಿಕ ವಿಷ ಕೊಡ್ತಾರೆ: ಶಾಸಕ ಎಸ್.ಟಿ.ಸೋಮಶೇಖರ್

ಈ ಬಾರಿಯೂ ನಮ್ಮ ಐದು ಗ್ಯಾರಂಟಿಗಳಾದ ಅನ್ನಭಾಗ್ಯ, ಗೃಹ ಲಕ್ಷ್ಮಿ, ಗೃಹಜ್ಯೋತಿ, ಯುವ ನಿಧಿ ಮತ್ತು ಶಕ್ತಿ ಯೋಜನೆಗಳೊಂದಿಗೆ ಕೊಟ್ಟಿರುವ ಎಲ್ಲ ಭರವಸೆ ಈಡೇರಿಸಲು ಬದ್ಧರಾಗಿದ್ದೇವೆ. ರಾಜ್ಯದ ಅಭಿವೃದ್ಧಿಗೆ ಅಗತ್ಯವಾದ ಎಲ್ಲ ಯೋಜನೆಗಳನ್ನು ಹಂತಹಂತವಾಗಿ ಜಾರಿಗೊಳಿಸಿ ಯಶಸ್ವಿಯಾಗಿ ಪೂರೈಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಸೇವಾದಳ ಕಾರ್ಯಕರ್ತರ ನಿಸ್ವಾರ್ಥ ಸೇವೆಯಿಂದ , ಪ್ರಾಮಾಣಿಕ ಹೋರಾಟವೂ ಕಾರಣ. 

ಜೆಡಿಎಸ್, ಬಿಜೆಪಿಯಿಂದ ಅನೇಕ ಶಾಸಕರು ಕಾಂಗ್ರೆಸ್ಸಿಗೆ: ಸಚಿವ ತಿಮ್ಮಾಪುರ

ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಬುಡ ಸಮೇತ ಕಿತ್ತೊಗೆದು ಭಾರತವನ್ನು ಕಾಪಾಡಿಕೊಳ್ಳುವ ರಾಹುಲ್ ಗಾಂಧಿ ಅವರ ಗುರಿಯನ್ನು ಸಾಧಿಸಬೇಕು. ಅದಕ್ಕಾಗಿ ಪ್ರತಿಯೊಬ್ಬರು ಶ್ರಮಿಸಬೇಕು. ತುಳಿತಕ್ಕೊಳಗಾದವರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್‌ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಿದ್ದು ಎಲ್ಲರೂ ಕಂಕಣಬದ್ಧರಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು. ಸಮಾರಂಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

Follow Us:
Download App:
  • android
  • ios