ಬಿಜೆಪಿ ನಾಯಕರ ತಾಳಕ್ಕೆ ಜೆಡಿಎಸ್ ಕುಣಿತ: ಸಿಎಂ ಸಿದ್ದರಾಮಯ್ಯ ಆರೋಪ
ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು ಬಿ.ಎಸ್.ಯಡಿಯೂರಪ್ಪ. ಆಪರೇಷನ್ ಕಮಲ ಮಾಡಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದವರು ಅವರು. ಆದರೆ, ಇದೀಗ ಕುಮಾರಸ್ವಾಮಿ ಅದೇ ಬಿಜೆಪಿಯವರ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಮಂಡ್ಯ (ಮಾ.11): ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು ಬಿ.ಎಸ್.ಯಡಿಯೂರಪ್ಪ. ಆಪರೇಷನ್ ಕಮಲ ಮಾಡಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದವರು ಅವರು. ಆದರೆ, ಇದೀಗ ಕುಮಾರಸ್ವಾಮಿ ಅದೇ ಬಿಜೆಪಿಯವರ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ನಗರದ ಮಂಡ್ಯ ವಿಶ್ವವಿದ್ಯಾಲಯ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಏರ್ಪಡಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಬಿಜೆಪಿಯವರ ಮೇಲೆ ಇದ್ದಕ್ಕಿದ್ದಂತೆ ಜೆಡಿಎಸ್‌ನವರಿಗೆ ಪ್ರೀತಿ ಬಂದಿದೆ. ಬಿಜೆಪಿ ಅವರು ಹೇಳುವುದಕ್ಕೆಲ್ಲ ಜೆಡಿಎಸ್‌ನವರು ತಾಳ ಹಾಕುತ್ತಾರೆ. ನಮ್ಮ ಗ್ಯಾರಂಟಿ ಬಗ್ಗೆ ಬಿಜೆಪಿ ಟೀಕೆ ಮಾಡಿದರೆ ಜೆಡಿಎಸ್ ಅವರು ಚಪ್ಪಾಳೆ ತಟ್ಟುತ್ತಿದ್ದಾರೆ. ಇವರೆಲ್ಲ ರೈತರ ಮಕ್ಕಳು, ಮಣ್ಣಿನ ಮಕ್ಕಳು ಎಂದು ಕುಹಕವಾಡಿದರು.
ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ೨೦೧೮ರಲ್ಲಿ ಕುಮಾರಸ್ವಾಮಿ ಮನೆಗೆ ಹೋಗಿ ಕರೆದುಕೊಂಡು ಬಂದು ಮುಖ್ಯಮಂತ್ರಿ ಮಾಡಿದೆವು. ಆದರೆ, ಕುಮಾರಸ್ವಾಮಿ ವೆಸ್ಟೆಂಡ್ ಹೊಟೇಲ್‌ನಲ್ಲಿ ಕೂತು ಅಧಿಕಾರ ಕಳೆದುಕೊಂಡರು. ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ೧೭ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಸೆಳೆದು ಕುಮಾರಸ್ವಾಮಿ ಸರ್ಕಾರವನ್ನು ಕೆಡವಿದರು. ಈಗ ಇದೇ ಕುಮಾರಸ್ವಾಮಿ ಅಂದು ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿ ಜೊತೆಯೇ ಕೈಜೋಡಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
5, 8, 9ನೇತರಗತಿ ಮಕ್ಕಳಿಗೆ ಇಂದಿನಿಂದ ಬೋರ್ಡ್ ಪರೀಕ್ಷೆ: 28.14 ಲಕ್ಷ ವಿದ್ಯಾರ್ಥಿಗಳು ಭಾಗಿ
ಪಕ್ಷ, ಕುಟುಂಬದ ಉಳಿವಿಗಾಗಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ: ಬಳಿಕ ಕೆಂಗೇರಿಯ ಸೂಲಿಕೇರಿ ಮೈದಾನದಲ್ಲಿ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಕೆಡವಿದ ಬಿಜೆಪಿಯೊಂದಿಗೆ ಎಚ್.ಡಿ.ದೇವೇಗೌಡರು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಮೋದಿ ಮತ್ತೆ ಪ್ರಧಾನಿಯಾದರೆ ದೇಶ ತೊರೆಯುತ್ತೇನೆ ಎಂದವರು ಈಗ ಮೋದಿಯವರೊಂದಿಗೆ ಅವಿನಾಭಾವ ಸಂಬಂಧ ಎನ್ನುತ್ತಿದ್ದಾರೆ. ತಮ್ಮ ಪಕ್ಷ ಮತ್ತು ಕುಟುಂಬದ ಉಳಿವಿವಾಗಿ ದೇವೇಗೌಡರು ತೆಗೆದುಕೊಂಡ ನಿರ್ಧಾರಕ್ಕೆಲ್ಲಾ ಜನರು ಕಣ್ಣುಮುಚ್ಚಿ ಬೆಂಬಲಿಸುವ ಕಾಲ ಈಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅನ್ನ ಕಸಿದ ಬಿಜೆಪಿ: ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಬಡವರಿಗೆ ೭ ಕೆ.ಜಿ. ಅಕ್ಕಿ ನೀಡಿದ್ದೆ. ಬಿಜೆಪಿಯವರು ಅಧಿಕಾರಕ್ಕೆ ಬಂದ ಬಳಿಕ ಅದನ್ನು ೫ ಕೆ.ಜಿ.ಗೆ ಇಳಿಸಿದರು. ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಮಾಡಬೇಕೆಂಬ ಹಠದೊಂದಿಗೆ ೨೦೨೩ರ ಚುನಾವಣೆಗೂ ಮುನ್ನ ೧೦ ಕೆ.ಜಿ. ಅಕ್ಕಿ ನೀಡುವುದಾಗಿ ಘೋಷಿಸಿದೆ. ನಾವು ಅಧಿಕಾರಕ್ಕೆ ಬಂದ ನಂತರ ಕೇಳಿದರೂ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಹೀಗಾಗಿ ೫ ಕೆ.ಜಿ. ಅಕ್ಕಿ ಜೊತೆಗೆ ೧೭೦ ರು. ಅನ್ನು ನೇರವಾಗಿ ಜನರ ಖಾತೆಗೆ ಹಾಕುತ್ತಿದ್ದೇನೆ. ನಾವೆಂದೂ ಮಾತಿಗೆ ತಪ್ಪಿ ನಡೆದಿಲ್ಲ ಎಂದರು.
ಜನರ ಆಶೀರ್ವಾದ ಪಡೆದು ಬಿಜೆಪಿ ಯಾವಾಗಲೂ ಅಧಿಕಾರಕ್ಕೆ ಬಂದಿಲ್ಲ. ಜೆಡಿಎಸ್‌ನವರೂ ಇನ್ನೊಬ್ಬರ ಹೆಗಲ ಮೇಲೆ ಕೂತು ಅಧಿಕಾರಕ್ಕೆ ಬಂದಿದ್ದಾರೆಯೇ ವಿನಃ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದಿಲ್ಲ. ನಾವು ಮಾತ್ರ ಜನ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರಿದ್ದೇವೆ ಎಂದರು. ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಪುಟ್ಟಣ್ಣ ಜಯಗಳಿದ ಹಿನ್ನೆಲೆಯಲ್ಲಿ ಕಂಗೇರಿಯ ಸೂಲಿಕೇರಿ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ‘ಶಿಕ್ಷಕರ ಕೃತಜ್ಞತಾ ಸಭೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಪ್ರಧಾನಿ ದೇವೇಗೌಡರು ತಮ್ಮದು ಜಾತ್ಯಾತೀ ಪಕ್ಷ ಕೋಮುವಾದಿ ಪಕ್ಷದ ವಿರುದ್ಧ ಹೋರಾಡುತ್ತೇವೆ ಎಂದಿದ್ದರು. ಮೋದಿ ಮತ್ತೆ ಪ್ರಧಾನಿಯಾದ್ರೆ ದೇಶ ತೊರೆಯುತ್ತೇನೆ. ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ ಅಂತೆಲ್ಲಾ ಹಿಂದೆ ಹೇಳಿಕೆಗಳನ್ನು ನೀಡಿದ್ದವರು. ಈಗ ಇದೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಮೋದಿ ಮತ್ತು ತಮ್ಮದು ಅವಿನಾಭಾವ ಸಂಬಂಧ ಎಂದು ವಿಪರೀತ ಹೊಗಳುತ್ತಿದ್ದಾರೆ. ಬಹಳ ಆಶ್ಚರ್ಯವಾಗುತ್ತಿದೆ. ಪ್ರಧಾನಿಯಾಗಿದ್ದವರು ಹಿಂದೆ ಹೇಳಿದ್ದೆಲ್ಲಾ ಮರೆತುಬಿಟ್ರಾ? ತಮ್ಮ ಪಕ್ಷ, ಕುಟುಂಬದ ಉಳಿವಿವಾಗಿ ಮಾಡಿಕೊಂಡಿರುವ ಅಪವಿತ್ರ ಮೈತ್ರಿ ಇದು. ಪ್ರಜ್ಞಾವಂತ ಜನ ಅವರ ದ್ವಂಧ್ವ ನಿಲುವನ್ನು ತುಲನೆ ಮಾಡಬೇಕು. ತಾವು ಏನೇ ನಿರ್ಧಾರ ಮಾಡಿದರೂ ಜನ ಕಣ್ಣುಮುಚ್ಚಿಕೊಂಡು ಬೆಂಬಲಿಸುತ್ತಾರೆ ಎಂದುಕೊಂಡಿದ್ದಾರೆ. ಅಂತಹ ಸಂದರ್ಭ ಈಗಿಲ್ಲ ಎಂದರು.
ಮೋದಿ ಹೆಸರಲ್ಲಿ ಗೆಲ್ಲುತ್ತೇವೆ ಮೂರ್ಖತನ: ಲೋಕಸಭಾ ಚುನಾವಣೆಯಲ್ಲಿ ಮೋದಿ ಹೆಸರಿನ ಮೇಲೆ ಗೆದ್ದು ಬರುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಮೋದಿಯವರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದ ಯಾವ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲೇ ಇಲ್ಲ. ಕಾಂಗ್ರೆಸ್ 136 ಸ್ಥಾನ ಗಳಿಸಿತು. ಹೀಗಾಗಿ ಮೋದಿಯವರ ಹೆಸರಿನ ಮೇಲೆಯೇ ಗೆಲ್ಲುತ್ತೇವೆ ಎನ್ನುವ ಇವರಷ್ಟು ಮೂರ್ಖರು ಯಾರೂ ಇಲ್ಲ ಎಂದು ಲೇವಡಿ ಮಾಡಿದರು. ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದರು.
ಆದರೆ, ಅವರು ಅಪವಿತ್ರ ಮೈತ್ರಿ ಮಾಡಿಕೊಂಡ ನಂತರ ನಡೆದ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದ ಪುಟ್ಟಣ್ಣ ಗೆದಿದ್ದಾರೆ. ನನಗೂ ಆರಂಭದಲ್ಲಿ ಭಯ ಇತ್ತು. ಈ ಮೈತ್ರಿಯಿಂದ ಏನಾಗುತ್ತೋ ಅಂದುಕೊಂಡಿದ್ದೆ. ಆದರೆ ಐದನೇ ಬಾರಿಗೂ ಅವರು ಗೆದ್ದರು. ಜನ ಲೋಕಸಭಾ ಚುನಾವಣೆಯಲ್ಲೂ ಪ್ರಜ್ಞಾವಂತ ಮತದಾರರು ಯೋಚನೆ ಮಾಡಬೇಕು. ಕೇಂದ್ರ ಸರ್ಕಾರದವರು ಕರ್ನಾಟದಿಂದ 2023-24ನೇ ಸಾಲಿನಲ್ಲಿ 4.30 ಲಕ್ಷ ಕೋಟಿ ರು. ತೆರಿಗೆ ಸಂಗ್ರಹಿಸಿದ್ದರೂ 50,257 ಕೋಟಿ ರು. ಮಾತ್ರ ಪಾಸ್ ಕೊಟ್ಟು ಅತ್ಯಂತ ಅನ್ಯಾಯ ಮಾಡಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳವವರು, ಕೆಲಸ ಮಾಡಿರುವವರಿಗೆ ತಾನೇ ಕೂಲಿ ಕೊಡುವುದು. ಗೇಯ್ಮೆ ಮಾಡುವ ಎತ್ತಿಗೆ ಹುಲ್ಲು ಹಾಕಬೇಕು. ಕಳ್ಳ ಎತ್ತಿಗೆ ಹುಲ್ಲು ಹಾಕಬಾರದು.
Loksabha Elections 2024: ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಶೆಟ್ಟರ್‌ಗೋ, ಬೊಮ್ಮಾಯಿಗೋ
ಹಾಗಾಗಿ ಕೊಟ್ಟ ಮಾತಿನಂತೆ ನಡೆದ ಕಾಂಗ್ರೆಸ್‌ಗೆ ಓಟು ಹಾಕಬೇಕಾ, ಇಲ್ಲ ನಾಲ್ಕು ವರ್ಷ ಲೂಟಿ ಹೊಡೆದುಕೊಂಡು ಇದ್ದವರಿಗೆ ಓಟು ಹಾಕಬೇಕಾ ಎಂದು ಜನ ತೀರ್ಮಾನ ಮಾಡಬೇಕು ಎಂದರು. ಐದನೇ ಬಾರಿಗೆ ತಮ್ಮನ್ನು ಆಯ್ಕೆ ಮಾಡಿದ ಶಿಕ್ಷಕರಿಗೆ ಅಭಿನಂದನೆ ತಿಳಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಶಿಕ್ಷಕರಿಗೆ ಹಳೆ ಪಿಂಚಿಣಿ ಯೋಜನೆ ಜಾರಿ, 7ನೇ ವೇತನ ನೀತಿ ಜಾರಿ, ಭೂ ಪರಿವರ್ತನೆ ಹೆಸರಲ್ಲಿ ಖಾಸಗಿ ಶಾಲೆಗಳ ಮೇಲಾಗುತ್ತಿರುವ ಕಿರಿಕಿರಿ ತಪ್ಪಿಸಲು ಇದೇ ವೇಳೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಚಲುವರಾಯಸ್ವಾಮಿ ಮತ್ತಿತರರಿದ್ದರು.