Asianet Suvarna News Asianet Suvarna News

ಶ್ರೀಮಂತರ ಜೇಬು ತುಂಬಿಸುವವರು ದೇಶದಲ್ಲಿ ಅಧಿಕಾರದಲ್ಲಿದ್ದಾರೆ: ಸಿದ್ದರಾಮಯ್ಯ

ಕಳೆದ 9 ವರ್ಷಗಳಿಂದ ದೇಶದಲ್ಲಿ ಅಂಬಾನಿ, ಅದಾನಿಯಂತಹ ಶ್ರೀಮಂತರ ಜೇಬು ತುಂಬಿಸುವವರು ಅಧಿಕಾರದಲ್ಲಿದ್ದಾರೆ. ಆದರೆ ತಿಮ್ಮ, ಬೋರ, ಕಾಳನಂತಹ ಸಾಮಾನ್ಯ ಜನರ ಜೇಬಿಗೆ ಹಣ ಹಾಕಬೇಕೆನ್ನುವುದು ನಮ್ಮ ಉದ್ದೇಶ. ಅದಕ್ಕೆ ತಕ್ಕಂತೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

CM Siddaramaiah Slams On BJP Central Govt gvd
Author
First Published Aug 26, 2023, 9:25 AM IST

ಬೆಂಗಳೂರು (ಆ.26): ಕಳೆದ 9 ವರ್ಷಗಳಿಂದ ದೇಶದಲ್ಲಿ ಅಂಬಾನಿ, ಅದಾನಿಯಂತಹ ಶ್ರೀಮಂತರ ಜೇಬು ತುಂಬಿಸುವವರು ಅಧಿಕಾರದಲ್ಲಿದ್ದಾರೆ. ಆದರೆ ತಿಮ್ಮ, ಬೋರ, ಕಾಳನಂತಹ ಸಾಮಾನ್ಯ ಜನರ ಜೇಬಿಗೆ ಹಣ ಹಾಕಬೇಕೆನ್ನುವುದು ನಮ್ಮ ಉದ್ದೇಶ. ಅದಕ್ಕೆ ತಕ್ಕಂತೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕರ್ನಾಟಕ ಆದಿಜಾಂಬವ ಸಾಂಸ್ಕೃತಿಕ ವೇದಿಕೆ ವತಿಯಿಂದ ಗಾಂಧಿ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕವಿ ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ದೇಶದಲ್ಲಿ ಸಂವಿಧಾನಕ್ಕೆ ವಿರುದ್ಧವಾದವರು ಅಧಿಕಾರದಲ್ಲಿದ್ದಾರೆ. ಹೀಗಾಗಿ ಸಂವಿಧಾನದ ಆಶಯಗಳು ಈಡೇರದಂತಾಗಿದೆ. ಸಿರಿವಂತರನ್ನು ಮತ್ತಷ್ಟು ಶ್ರೀಮಂತವಾಗಿಸುವುದು ಅವರ ಉದ್ದೇಶ. ಆದರೆ, ಸಾಮಾನ್ಯ ಜನರಿಗೆ ಹಣ ನೀಡಿ ಆರ್ಥಿಕತೆಗೆ ವೇಗ ನೀಡಬೇಕು ಎಂಬುದು ನಮ್ಮ ಗುರಿ. ಶೋಷಿತ ವರ್ಗದವರಿಗೆ ಸಾಮಾಜಿಕ, ಆರ್ಥಿಕ ಶಕ್ತಿ ಬಂದಾಗ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಯಾರೇ ಅಧಿಕಾರದಲ್ಲಿದ್ದರೂ ದಮನಿತರು, ಮಧ್ಯಮ, ಬಡ ವರ್ಗದ ಜನರ ಏಳಿಗೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಿದ್ದು, ಡಿಕೆಶಿ ನಡುವೆ ಪೈಪೋಟಿ ಇಲ್ಲ: ನಾಗೇಂದ್ರ, ಚಲುವರಾಯ

ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ಅಸ್ಪೃಶ್ಯರ ನಡುವೆ ಒಗ್ಗಟ್ಟು ಮೂಡಿಸಬೇಕಿದೆ. ನಮ್ಮನ್ನು ನಾವೇ ದಲಿತರು ಎಂದು ಕರೆದುಕೊಳ್ಳುವುದನ್ನು ಮೊದಲು ನಿಲ್ಲಿಸಬೇಕು. ಆ ಮೂಲಕ ಅಸ್ಪೃಶ್ಯತೆ ನಿವಾರಿಸಬೇಕು. ನಾವೆಲ್ಲ ದ್ರಾವಿಡರಾಗಿದ್ದು, ಈ ದೇಶದ ಮೂಲ ನಿವಾಸಿಗಳು. ಆದರೂ, ನಮ್ಮ ಮೇಲೆ ಸವಾರಿ ಮಾಡಲಾಗುತ್ತಿದೆ. ಅದರ ಜತೆಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಂತಹ ಪ್ರಯತ್ನಗಳ ವಿರುದ್ಧ ಹೋರಾಡಬೇಕಿದೆ ಎಂದು ತಿಳಿಸಿದರು.

ಮಾಜಿ ಸಚಿವ ಎಚ್‌.ಆಂಜನೇಯ ಮಾತನಾಡಿ, ಸಿದ್ದಲಿಂಗಯ್ಯ ಸೇರಿದಂತೆ ಅವರ ಸಮಕಾಲೀನ ಸಾಹಿತಿಗಳು ಕಾಂಗ್ರೆಸ್ಸನ್ನು ಬಹುವಾಗಿ ವಿರೋಧಿಸುತ್ತಿದ್ದರು. ಇಂದಿರಾ ಗಾಂಧಿ, ದೇವರಾಜ ಅರಸು ಕಂಡರೆ ಅವರಿಗೆ ಆಗುತ್ತಿರಲಿಲ್ಲ. ಕೊನೆಗೆ ಕಾಂಗ್ರೆಸ್‌ನ ಕಾರ್ಯಗಳನ್ನು ಕಂಡು ಅವರ ವಿರೋಧ ಕಡಿಮೆಯಾಯಿತು. ಈ ಬಾರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಕಾರಣಕ್ಕಾಗಿಯೇ ಅಹಿಂದ ಮತಗಳು ಕಾಂಗ್ರೆಸ್‌ ಪರವಾಗಿ ಚಲಾವಣೆಗೊಂಡಿವೆ. ಅದಕ್ಕೆ ತಕ್ಕಂತೆ ಸಿದ್ದರಾಮಯ್ಯ ಅವರು ಕೆಲಸ ಮಾಡುತ್ತಿದ್ದಾರೆ ಎಂದರು. ಸಾಹಿತಿಗಳಾದ ಪ್ರೊ.ಮರುಳಸಿದ್ದಪ್ಪ, ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಇಂದಿರಾ ಕೃಷ್ಣಪ್ಪ, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಸಿದ್ದಲಿಂಗಯ್ಯ ಅವರ ಪುತ್ರಿ ಮಾನಸಾ, ಹಿರಿಯ ಪತ್ರಕರ್ತ ರವೀಂದ್ರ ಭಟ್‌ ಇತರರಿದ್ದರು.

ವಿಜಯಪುರ ಲೋಕಸಭೆ ಟಿಕೆಟ್‌ ಈ ಸಲವೂ ನನಗೇ ಖಚಿತ: ಸಂಸದ ಜಿಗಜಿಣಗಿ

ಪಟ್ಟಭದ್ರ ಹಿತಾಸಕ್ತಿಗಳಿಂದ ಜಾತಿ ವ್ಯವಸ್ಥೆ ಜೀವಂತ: ಜಾತಿ ವ್ಯವಸ್ಥೆ ಜಡತ್ವ ವ್ಯವಸ್ಥೆಯಾಗಿದೆ. ಹೀಗಾಗಿ ಸಮಾಜದಲ್ಲಿನ ಅಸಮಾನತೆ ಇನ್ನೂ ಕಡಿಮೆಯಾಗಿಲ್ಲ. ನಾವೆಲ್ಲ ಬದಲಾಗದಿದ್ದರೆ, ಜಾತಿ ವ್ಯವಸ್ಥೆ ವಿರುದ್ಧ ಮಾತನಾಡದಿದ್ದರೆ ಇನ್ನು ಸಾವಿರ ವರ್ಷಗಳಾದರೂ ಅಸಮಾನತೆ ಹಾಗೆಯೇ ಇರಲಿದೆ. ಅಲ್ಲದೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜಾತಿ ವ್ಯವಸ್ಥೆ ಬದಲಾಗದಂತೆ, ಕೊನೆಯಾಗದಂತೆ ಮಾಡುತ್ತಿವೆ. ಬುದ್ಧನ ಕಾಲದಿಂದ ಈವರೆಗೆ ಅದನ್ನು ಬದಲಿಸಲು ಹಲವು ಪ್ರಯತ್ನಗಳು ನಡೆದರೂ ಅದು ಸಾಧ್ಯವಾಗಿಲ್ಲ. ಹೀಗಾಗಿಯೇ ಬಸವಣ್ಣ ಅವರ ವಚನಗಳು ಈಗಲೂ ಪ್ರಸ್ತುತ ಎನ್ನುವಂತಿವೆ. ಸಿದ್ದಲಿಂಗಯ್ಯ ಅವರ ಕವಿತೆಗಳೂ ಅದೇ ದಿಕ್ಕಿನಲ್ಲಿದ್ದವು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

Follow Us:
Download App:
  • android
  • ios