ಬಜೆಟ್ ಪ್ರತಿ ಓದಲ್ಲ, ಅಭಿವೃದ್ಧಿ ಶೂನ್ಯ ಅಂತಾರೆ: ಸಿದ್ದರಾಮಯ್ಯ
ಸರ್ಕಾರ ಬಂದು ಒಂದು ವರ್ಷವಾಗಿದೆ. ನಾವು ಏನೇನು ಭರವಸೆ ನೀಡಿದ್ದೆವು, ಯಾವೆಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ ಎಂಬುದನ್ನು ಜನರಿಗೆ ತಿಳಿಸಿದ್ದೇವೆ. ಆದರೂ ಬಿಜೆಪಿಯವರು ಸುಳ್ಳು ಹೇಳುತ್ತಾರೆ, ನೀವೂ ಹೇಳ್ತೀರಾ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ
ಮಂಗಳೂರು(ಮೇ. 22): ಬಿಜೆಪಿಯವರು ಬಜೆಟ್ ಪ್ರತಿಯನ್ನು ಓದಲ್ಲ, ಅಭಿವೃದ್ಧಿ ಶೂನ್ಯ ಅಂತ ಏನೇನೋ ಹೇಳ್ತಾರೆ. ಬಿಜೆಪಿಯವರು ಸುಳ್ಳು ಹೇಳಿದರೆ, ನೀವೂ ಹಾಗೇ ಹೇಳ್ತೀರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಅವರ ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರು ಏರ್‌ಪೋರ್ಟ್‌ಗೆ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರ ಬಂದು ಒಂದು ವರ್ಷವಾಗಿದೆ. ನಾವು ಏನೇನು ಭರವಸೆ ನೀಡಿದ್ದೆವು, ಯಾವೆಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ ಎಂಬುದನ್ನು ಜನರಿಗೆ ತಿಳಿಸಿದ್ದೇವೆ. ಆದರೂ ಬಿಜೆಪಿಯವರು ಸುಳ್ಳು ಹೇಳುತ್ತಾರೆ, ನೀವೂ ಹೇಳ್ತೀರಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ: ಪಂಚ ಗ್ಯಾರಂಟಿಗಳು 4.60 ಕೋಟಿ ಜನರನ್ನು ತಲುಪಿವೆ; ರಣದೀಪ್ ಸುರ್ಜೆವಾಲ
ಹಿಂದಿನ ವರ್ಷ ನೀರಾವರಿಗಾಗಿ 16 ಸಾವಿರ ಕೋಟಿ ರು. ಮೀಸಲಿರಿಸಲಾಗಿತ್ತು. ಈ ವರ್ಷ 18 ಸಾವಿರ ಕೋಟಿ ರು. ಬಜೆಟ್‌ನಲ್ಲಿ ಇಟ್ಟಿದ್ದೇವೆ. ಇದು ಹೆಚ್ಚೋ, ಕಡಿಮೆಯೋ? ಏನೂ ಮಾಡಿಲ್ಲ ಅಂತ ಅಂದ್ರೆ ಏನು ಹೇಳಬೇಕು ಎಂದರು.
ಈ ವರ್ಷ ಗ್ಯಾರಂಟಿ ಯೋಜನೆಗಳು ಸೇರಿ 1. 20 ಲಕ್ಷ ಕೋಟಿ ರು. ಬಜೆಟ್ ಕೊಟ್ಟಿದ್ದೇವೆ. ಬಿಜೆಪಿಯವರು ಬಜೆಟ್ ಪ್ರತಿಯನ್ನೇ ಓದಲ್ಲ. ಅವರಿಗೆ ಎಕನಾಮಿಕ್ಸೇ ಗೊತ್ತಾಗಲ್ಲ. ಸುಮ್ಮನೆ ಅಭಿವೃದ್ಧಿ ಶೂನ್ಯ ಅಂತ ಏನೇನೋ ಹೇಳ್ತಾರೆ ಎಂದು ಸಿಎಂ ಟೀಕಿಸಿದರು.
ಬಡವರಿಗೆ ಆರ್ಥಿಕ ಸಬಲತೆ ನೀಡೋದು ಅಭಿವೃದ್ಧಿ ಅಲ್ವಾ ಎಂದು ತಿರುಗೇಟು ನೀಡಿದ ಅವರು, ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಬಂದರೆ ಮಾತ್ರ ಸಾಲದು, ಆರ್ಥಿಕ- ಸಾಮಾಜಿಕ ಶಕ್ತಿ ಬಂದಾಗ ಮಾತ್ರ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಇದು ಗೊತ್ತಿದೆಯಾ ಅವರಿಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮುಖಂಡರಾದ ರಕ್ಷಿತ್ ಶಿವರಾಮ್, ಐವನ್ ಡಿಸೋಜ, ಶಾಹುಲ್ ಹಮೀದ್, ಟಿ.ಎಂ. ಶಹೀದ್ ಮತ್ತಿತರರು ಇದ್ದರು. ಬಳಿಕ ಸಿದ್ದರಾಮಯ್ಯ ಅವರು ರಸ್ತೆ ಮಾರ್ಗವಾಗಿ ಬೆಳ್ತಂಗಡಿಯ ಗುರುವಾಯನಕೆರೆಗೆ ತೆರಳಿ ವಸಂತ ಬಂಗೇರ ಅವರ ಉತ್ತರ ಕ್ರಿಯೆಯಲ್ಲಿ ಪಾಲ್ಗೊಂಡರು.