Asianet Suvarna News Asianet Suvarna News

ಇಂದು ಇಡೀ ದಿನ ಸಿಎಂ ಸಿದ್ದರಾಮಯ್ಯ ಬಜೆಟ್‌ ಪೂರ್ವಭಾವಿ ಸಭೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಇಡೀ ದಿನ ಬಜೆಟ್‌ ಪೂರ್ವ ಭಾವಿ ಸಭೆ ನಡೆಸಲಿದ್ದಾರೆ. ಇದಕ್ಕೆ ಸಂಬಂಧಿಸಿದ ಇಲಾಖಾವಾರು ವೇಳಾಪಟ್ಟಿಯಲ್ಲಿ ಕೆಲ ಪರಿಷ್ಕರಣೆ ಮಾಡಲಾಗಿದೆ.
 

CM Siddaramaiah pre budget meeting all day today gvd
Author
First Published Jan 22, 2024, 7:43 AM IST

ಬೆಂಗಳೂರು (ಜ.22): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಇಡೀ ದಿನ ಬಜೆಟ್‌ ಪೂರ್ವ ಭಾವಿ ಸಭೆ ನಡೆಸಲಿದ್ದಾರೆ. ಇದಕ್ಕೆ ಸಂಬಂಧಿಸಿದ ಇಲಾಖಾವಾರು ವೇಳಾಪಟ್ಟಿಯಲ್ಲಿ ಕೆಲ ಪರಿಷ್ಕರಣೆ ಮಾಡಲಾಗಿದೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 7.35ರವರೆಗೂ ಇಡೀ ದಿನ ಸುಮಾರು 16 ಇಲಾಖೆಗಳಿಗೆ ಸಂಬಂಧಿಸಿದಂತೆ ಬಜೆಟ್‌ ಪೂರ್ವಭಾವಿ ಚರ್ಚೆಯನ್ನು ಮುಖ್ಯಮಂತ್ರಿಗಳು ನಡೆಸಲಿದ್ದಾರೆ. ಪ್ರತಿ ಇಲಾಖೆಗೂ ಸುಮಾರು ಅರ್ಧಗಂಟೆ ಕಾಲಾವಕಾಶ ನೀಡಲಾಗಿದೆ. 

ಪರಿಷ್ಕೃತ ವೇಳಾಪಟ್ಟಿಯಲ್ಲಿ ಮೊದಲು ವೈದ್ಯಕೀಯ ಶಿಕ್ಷಣ ಇಲಾಖೆ, ನಂತರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಯುವಜನ ಸೇವೆ ಮತ್ತು ಕ್ರೀಡೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗಳ ಬಜೆಟ್‌ ಪೂರ್ವಭಾವಿ ಚರ್ಚೆ ಮಧ್ಯಾಹ್ನ 2 ಗಂಟೆ ವರೆಗೆ ನಡೆಯಲಿದೆ. ಭೋಜನವಿರಾಮದ ನಂತರ 3.30ರಿಂದ ಮತ್ತೆ ಸಭೆ ಶುರುವಾಗಲಿದ್ದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ಕೃಷಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್‌ ಮತ್ತು ವಸತಿ ಇಲಾಖೆಯ ಮೇಲಿನ ಚರ್ಚೆ ನಿಗದಿಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಸಿದ್ಧತೆ ಸಭೆ ಆರಂಭ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.16 ರಂದು ದಾಖಲೆಯ 15ನೇ ಬಾರಿಗೆ ಬಜೆಟ್ ಮಂಡನೆ ಮಾಡಲು ಸಿದ್ಧತೆ ಆರಂಭಿಸಿದ್ದು, ಶನಿವಾರ ಹತ್ತಕ್ಕೂ ಹೆಚ್ಚು ಇಲಾಖೆಗಳ ಅಧಿಕಾರಿಗಳ ಜತೆ ಬಜೆಟ್ ಪೂರ್ವಭಾವಿ ಸಿದ್ಧತೆ ಸಭೆ ನಡೆಸಿದ್ದಾರೆ. 1994-99 ರವರೆಗೆ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಅವರು ಐದು ಬಾರಿ ಬಜೆಟ್‌ ಮಂಡನೆ ಮಾಡಿದ್ದರು. ಬಳಿಕ 2005-06ರಲ್ಲಿ ಧರಂಸಿಂಗ್‌ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಎರಡು ಬಾರಿ ಬಜೆಟ್‌ ಮಂಡಿಸಿದ್ದರು. 2013-18ರವರೆಗೆ ಮುಖ್ಯಮಂತ್ರಿ ಹುದ್ದೆ ಜತೆಗೆ ಹಣಕಾಸು ಇಲಾಖೆ ಹೊಂದಿದ್ದ ಅವರು ಆರು ಬಾರಿ ಬಜೆಟ್‌ ಮಂಡಿಸಿದ್ದರು. ಕಳೆದ ವರ್ಷ 14ನೇ ಬಜೆಟ್‌ ಮಂಡಿಸಿದ್ದ ಅವರು, ಬರುವ ಫೆಬ್ರುವರಿ 16ರಂದು 15ನೇ ಬಜೆಟ್ ಮಂಡಿಸಲಿದ್ದಾರೆ.

ಮಾಲಿನ್ಯ ತಡೆಯದ ಕಾರ್ಖಾನೆ ಮೇಲೆ ಕ್ರಿಮಿನಲ್‌ ಕೇಸ್‌: ಸಚಿವ ಈಶ್ವರ್‌ ಖಂಡ್ರೆ

ಕಳೆದ ವರ್ಷಕ್ಕೆ ಹೋಲಿಸಿದರೆ ಬಜೆಟ್‌ ಗಾತ್ರ ಶೇ.13ರಷ್ಟು ಹೆಚ್ಚಳ ಆಗುವ ಸಾಧ್ಯತೆಯಿದೆ. ಕಳೆದ 3.27 ಲಕ್ಷ ಕೋಟಿ ರು.ಗಳಿಂದ 3.7 ಲಕ್ಷ ಕೋಟಿ ರು.ಗಳಿಗೆ ಬಜೆಟ್‌ ಗಾತ್ರ ಹೆಚ್ಚಾಗುವ ಅಂದಾಜಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ರೇಷ್ಮೆ ಮತ್ತು ಪಶುಸಂಗೋಪನೆ, ಬೆಂಗಳೂರು ಅಭಿವೃದ್ಧಿ, ಉನ್ನತ ಶಿಕ್ಷಣ ಇಲಾಖೆ, ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಜೀವಶಾಸ್ತ್ರ, ಅರಣ್ಯ ಇಲಾಖೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಯಾವ್ಯಾವ ಹೊಸ ಯೋಜನೆಗಳನ್ನು ನೀಡಬೇಕು ಎಂಬ ಬಗ್ಗೆ ಚರ್ಚಿಸಿದ್ದಾರೆ.

Follow Us:
Download App:
  • android
  • ios