ಹಿಂದೊಮ್ಮೆ ಕಾರಿನ ಮೇಲೆ ಕಾಗೆ ಕುಳಿತಿದ್ದ ಕಾರಣಕ್ಕೆ ಕಾರನ್ನೇ ಬದಲಾಯಿಸಿ ಸುದ್ದಿಯಾಗಿದ್ದ ಸಿದ್ಧರಾಮಯ್ಯ ಈ ಬಾರಿ, ಮೌಢ್ಯಕ್ಕೆ ಬ್ರೇಕ್ ಹಾಕುವ ಮೂಲಕ ಸುದ್ದಿಯಾಗಿದ್ದಾರೆ. ವಾಸ್ತು ಕಾರಣಕ್ಕೆ ಕಳೆದ ಐದು ವರ್ಷದಿಂದ ಮುಚ್ಚಿದ್ದ ವಿಧಾನಸೌಧದ ಸಿಎಂ ಕಚೇರಿಯ ಬಾಗಿಲನ್ನು ಸಿದ್ಧರಾಮಯ್ಯ ಶನಿವಾರ ತೆಗೆಸಿದ್ದಾರೆ.
ಬೆಂಗಳೂರು (ಜೂ.24): ವಾಸ್ತು ಸರಿಯಿಲ್ಲ ಅನ್ನೋ ಕಾರಣಕ್ಕೆ ಮುಚ್ಚಲ್ಪಟ್ಟಿದ್ದ ತಮ್ಮ ಕಚೇರಿಯ ಬಾಗಿಲನ್ನು ಸಿಎಂ ಸಿದ್ಧರಾಮಯ್ಯ ಓಪನ್ ಮಾಡಿಸಿದ್ದಾರೆ. ದಕ್ಷಿಣಕ್ಕೆ ಬಾಗಿಲು ಇದೆ ಅನ್ನೋ ಕಾರಣಕ್ಕೆ ಯಾವ ಮುಖ್ಯಮಂತ್ರಿಗಳು ಸಹ ಬಳಸದ ಸಿಎಂ ಕಚೇರಿಯ ದಕ್ಷಿಣಾಭಿಮುಖವಾಗಿರುವ ಬಾಗಿಲು ಇಂದು ಸಿದ್ಧರಾಮಯ್ಯ ಅವರ ಸಮ್ಮುಖದಲ್ಲಿಯೇ ತೆರೆಯಲಾಗಿದೆ. ಅನ್ನಭಾಗ್ಯ ಯೋಜನೆ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ತಮ್ಮ ಕಚೇರಿಯ ದಕ್ಷಿಣದ ದ್ವಾರ ಬಂದ್ ಆಗಿರುವುದನ್ನು ಗಮನಿಸಿದರು. ವಾಸ್ತು ಕಾರಣದಿಂದ ಬಂದ್ ಮಾಡಲಾಗಿದೆ ಎನ್ನುವ ಉತ್ತರ ಅಧಿಕಾರಿಗಳಿಂದ ಬಂದ ಬಳಿಕ ಮುಖ್ಯಮಂತ್ರಿಗಳು ಆ ದ್ವಾರದಲ್ಲೇ ನಿಂತರು. ಪಶ್ಚಿಮ ದ್ವಾರದಿಂದ ಸಿಬ್ಬಂದಿ ಒಳಗೆ ಹೋಗಿ ದಕ್ಷಿಣದದ್ವಾರವನ್ನು ತೆರೆದ ಬಳಿಕ ಅದೇ ದ್ವಾರದ ಮೂಲಕವೇ ತಮ್ಮ ಕಚೇರಿ ಪ್ರವೇಶಿಸಿದರು. ಈ ಮೂಲಕ ಕಳೆದ 5 ವರ್ಷಗಳಿಂದ ಬಂದ್ ಆಗಿದ್ದ ದಕ್ಷಿಣದ ಬಾಗಿಲು ಓಪನ್ ಆಯ್ತು.
ಹಿಂದೆ ಸಿಎಂ ಆಗಿದ್ದ ಅವಧಿಯಲ್ಲಿ ಅಂದ್ರೆ ಬರೋಬ್ಬರಿ 5 ವರ್ಷಗಳ ಹಿಂದೆ ಈ ದಕ್ಷಿಣಾಭಿಮುಖವಾಗಿದ್ದ ಈ ಬಾಗಿಲನ್ನು ಸಿದ್ಧರಾಮಯ್ಯ ಓಪನ್ ಮಾಡಿಸಿದ್ದರು. 2013 ರ ಜೂನ್ 6 ರಂದು ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣದ ಬಾಗಿಲು ಓಪನ್ ಮಾಡಲಾಗಿತ್ತು. ಸಿದ್ಧರಾಮಯ್ಯ ಅವರ ಅಧಿಕಾರಾವಧಿ ಮುಗಿಯುತ್ತಿದ್ದಂತೆ ಮತ್ತೇ ಸಿಬ್ಬಂದಿಗಳು ವಾಸ್ತು ಕಾರಣಕ್ಕೆ ಬಂದ್ ಮಾಡಿಸಿದ್ದರು. ಈಗ ಪುನ: 5 ವರ್ಷಗಳ ಬಳಿಕ ಬಾಗಿಲು ತೆರೆಯುವ ಯೋಗ ಬಂದಿದೆ.
ಆರೋಗ್ಯಕರ ಮನಸ್ಸು, ಸ್ವಚ್ಚ ಹೃದಯ, ಜನಪರ ಕಾಳಜಿ, ಒಳ್ಳೆ ಗಾಳಿ ಬೆಳಕು ಬರುವಂತಿದ್ದರೆ ಅದೇ ಉತ್ತಮ ವಾಸ್ತು ಅಂತ ಸ್ಥಳದಲ್ಲೇ ಅಧಿಕಾರಿಗಳಿಗೆ ಹೇಳಿದ ಸಿದ್ಧರಾಮಯ್ಯ, ವಾಸ್ತು ನಂಬಲ್ಲ ಅನ್ನೋದನ್ನು ಬಹಿರಂಗಪಡಿಸಿದ್ದಾರೆ.
ಅರ್ಧಗಂಟೆ ಬೇಡಿದರೂ ಒಂದು ಹಿಡಿ ಅಕ್ಕಿ ಕೊಡದ ಕೇಂದ್ರ ಸರ್ಕಾರ: ಬರಿಗೈಲಿ ಬಂದ ಸಚಿವ ಮುನಿಯಪ್ಪ
ಆದರೆ, ಈ ಹಿಂದೆ ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯಿದೆ ಜಾರಿಗೆ ತರಲು ಹೊರಟಿದ್ದ ಸಿದ್ಧರಾಮಯ್ಯ ಬಳಿಕ ಮೌಢ್ಯವೊಂದಕ್ಕೆ ಬೀಳುವ ಮೂಲಕ ಸುದ್ದಿಯಾಗಿದ್ದರು. ಸಿದ್ಧರಾಮಯ್ಯ ಅವರ ಕಾರಿನ ಮೇಲೆ ಕಾಗೆ ಮರಿ ಕುಳಿತುಕೊಂಡಿದ್ದು ಆಗ ದೊಡ್ಡ ಸುದ್ದಿಯಾಗಿತ್ತು. ಅದರ ಬೆನ್ನಲ್ಲಿಯೇ ಸಿದ್ಧರಾಮಯ್ಯ ತಾಂತ್ರಿಕ ಕಾರಣ ನೀಡಿ ಹೊಸ ಕಾರ್‌ಅನ್ನು ಖರೀದಿ ಮಾಡಿದ್ದರು. 2016ರಲ್ಲಿ ಸಿದ್ಧರಾಮಯ್ಯ ರಾಜ್ಯಸಭೆ ಚುನಾವಣೆ ತಯಾರಿ ಕುರಿತು ಚರ್ಚಿಸಲು ಗೃಹಕಚೇರಿ ಕೃಷ್ಣದಲ್ಲಿ ಜೂ.2ರಂದು ವಿವಿಧ ಹಂತದ ಸಭೆ ನಡೆಸುತ್ತಿದ್ದರು. ಈ ವೇಳೆ ಹೊರಗಡೆ ನಿಂತಿದ್ದ ಕಾರಿನ ಮೇಲೆ ಗಾಯಗೊಂಡಿದ್ದ ಕಾಗೆಯೊಂದು ಹತ್ತಿ ಕುಳಿತಿತ್ತು. ಅದನ್ನು ಓಡಿಸಲು ಸಿಬ್ಬಂದಿ ಎಷ್ಟೇ ಪ್ರಯತ್ನಪಟ್ಟರೂ ಸುಮಾರು ಹೊತ್ತಿನವರೆಗೆ ಕದರಿರಲಿಲ್ಲ. ನಂತರ ಸಿಬ್ಬಂದಿಯೇ ಕೈಯಿಂದ ಕೆಳಗಿಳಿಸಿದ್ದರು. ಈ ಬಗ್ಗೆ ಸುದ್ದಿವಾಹಿನಿಗಳು ವಿಡಿಯೋ ಸಹಿತ ಪ್ರಸಾರ ಮಾಡಿದ್ದರಿಂದ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಕೊನೆಗೆ ಈ ಕಾರ್‌ಅನ್ನು ಬದಲಿಸಿ ಹೊಸ ಫಾರ್ಚುನರ್ ಕಾರ್‌ಅನ್ನು ಖರೀದಿ ಮಾಡಲಾಗಿತ್ತು.
ಸರ್ಕಾರಿ ಸಂಸ್ಥೆಗಳಿಗೆ ಶಾಕ್ ಕೊಟ್ಟ ಬೆಸ್ಕಾಂ: ಕಟ್ಟಬೇಕಾದ ಬಿಲ್ ಎಷ್ಟು ಗೊತ್ತಾ?
ಅಂದು ಕಾರ್‌ನ ಮೇಲೆ ಕಾಗೆ ಕುಳಿತಿದ್ದು ಅಪಶಕುನವೆಂದೂ ಕೆಲವರು ಹೇಳಿದ್ದರೂ, ಸಿದ್ದರಾಮಯ್ಯ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ದಿನೇ ದಿನೇ ವಿಘ್ನಗಳು ಎದುರಾದ ಹಾಗೆ ಮನಸ್ಸು ಬದಲಾಯಿಸಿ ಕಾರ್‌ಅನ್ನು ಬದಲು ಮಾಡಿದ್ದರು ಎನ್ನಲಾಗಿತ್ತು.
