ಅನಾರೋಗ್ಯ ಹಿನ್ನೆಲೆಯಲ್ಲಿ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ತೀವ್ರ ನಿಗಾಘಟಕದಿಂದ ವಿಶೇಷ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದೆ.

ಬೆಂಗಳೂರು (ಸೆ.01): ಅನಾರೋಗ್ಯ ಹಿನ್ನೆಲೆಯಲ್ಲಿ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ತೀವ್ರ ನಿಗಾಘಟಕದಿಂದ ವಿಶೇಷ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದೆ. ವಾರ್ಡ್‌ನಲ್ಲಿ ವೈದ್ಯರು ಕುಮಾರಸ್ವಾಮಿ ಆರೋಗ್ಯದ ನಿಗಾವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯಕ್ಕೆ ಯಾರನ್ನೂ ಭೇಟಿ ಮಾಡದಂತೆ ವೈದ್ಯರು ತಿಳಿಸಿದ್ದಾರೆ. ಶನಿವಾರ ಡಿಸ್ಚಾರ್ಜ್‌ ಮಾಡುವ ಸಾಧ್ಯತೆ ಇದೆ. ಕುಮಾರಸ್ವಾಮಿ ಅವರಿಗೆ ವಿಶ್ರಾಂತಿಯ ಅಗತ್ಯ ಇರುವ ಕಾರಣ ಒಂದೆರಡು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಉಳಿಯಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಚಲುವರಾಯಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಪಟ್ಟ ನಾಯಕಹಳ್ಳಿ ಶ್ರೀ ನಂಜಾವದೂತ ಸ್ವಾಮೀಜಿ ಮತ್ತು ಸೂರಜ್ ರೇವಣ್ಣ ಸೇರಿದಂತೆ ಇತರರು ಆಸ್ಪತ್ರೆಗೆ ಭೇಟಿ ನೀಡಿ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದರು. ಈ ನಡುವೆ, ಜೆಡಿಎಸ್‌ ಕಾರ್ಯಕರ್ತರು, ಅಭಿಮಾನಿಗಳು ಹಲವೆಡೆ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. 

ಸುಪ್ರೀಂಕೋರ್ಟ್​ನಲ್ಲಿ ನಾಳೆ ಕಾವೇರಿ ನೀರು ವಿಚಾರಣೆ ಅನುಮಾನ?: ಯಾಕೆ ಗೊತ್ತಾ!

ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದಾರೆ: ಕುಮಾರಣ್ಣ ಹುಷರಾಗಿ ಇದ್ದಾರೆ. ಜನರು ಅಭಿಮಾನಿಗಳು, ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ. ಡಾಕ್ಟರ್ ಸ್ಪಷ್ಟವಾಗಿ ಹೇಳಿದ್ದಾರೆ, ಯಾವುದೇ ತೊಂದರೆ ಇಲ್ಲ ಅಂತ. ರೆಸ್ಟ್ ನಲ್ಲಿದ್ದಾರೆ,ನಾವು ಯಾರು ನೋಡೋಕೆ ಬರದೆ ಡಾಕ್ಟರ್ ಗಳಿಗೆ ಸಹಕಾರ ನೀಡಿದ್ರೆ, ಬೇಗ ರಿಕವರಿ ಆಗ್ತಾರೆ. ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದಾರೆ. ದೇವರ ಧಯೆ,ಜನರ ಆಶೀರ್ವಾದದಿಂದ ಚೆನ್ನಾಗಿ ಇದ್ದಾರೆ. ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸಾ.ರಾ.ಮಹೇಶ್ ತಿಳಿಸಿದರು.

ಇನ್ನು, ವಿದೇಶ ಪ್ರವಾಸದಲ್ಲಿದ್ದ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ನಗರಕ್ಕೆ ಹಿಂತಿರುಗಿ ಆಸ್ಪತ್ರೆಗೆ ತೆರಳಿ ತಂದೆಯ ಆರೋಗ್ಯ ವಿಚಾರಿಸಿದರು. ಈ ಕುರಿತು ಟ್ವೀಟ್‌ ಮಾಡಿರುವ ಅವರು, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಂದೆಯವರು ಈಗ ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ. ಅವರನ್ನು ಈಗ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದ್ದು, ಶೀಘ್ರವೇ ಮನೆಗೆ ಮರಳಲಿದ್ದಾರೆ. ಕೆಲ ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ ಎಂದಿದ್ದಾರೆ.

ದತ್ತಪೀಠವನ್ನ ಬೇಲಿ ರಹಿತ ಮಾಡುವುದೇ ನಮ್ಮ ಸಂಕಲ್ಪ: ಶೋಭಾ ಕರಂದ್ಲಾಜೆ

ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು, ಅಭಿಮಾನಿಗಳು ಯಾರು ಸಹ ಆತಂಕಪಡಬೇಕಿಲ್ಲ. ತಂದೆಯವರು ಕ್ಷೇಮವಾಗಿದ್ದು, ಕೆಲ ದಿನಗಳಲ್ಲಿಯೇ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ. ತಂದೆಯ ಆರೋಗ್ಯ ಚೇತರಿಕೆಗಾಗಿ ಪ್ರೀತಿ, ವಾತ್ಸಲ್ಯದಿಂದ ಪ್ರಾರ್ಥನೆ ಮಾಡಿದ ಎಲ್ಲಾ ಕಾರ್ಯಕರ್ತ ಬಂಧುಗಳು, ನಾಡಿನ ಜನರಿಗೆ ವಂದನೆಗಳು. ಹಾಗೆಯೇ ತಂದೆಯವರ ಆರೋಗ್ಯ ವಿಚಾರಿಸಿದ ವಿವಿಧ ಮಠಗಳ ಸ್ವಾಮೀಜಿಯವರಿಗೆ ಮತ್ತು ಕ್ಷೇಮ ವಿಚಾರಿಸಿದ ಹಲವು ಪಕ್ಷಗಳ ಹಿರಿಯ ನಾಯಕರಿಗೆ ತುಂಬು ಹೃದಯದ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.