ವಿಧಾನ ಪರಿಷತ್‌ನಲ್ಲೂ ತೆರಿಗೆ ಲೆಕ್ಕ ಕೊಟ್ಟ ಸಿಎಂ ಸಿದ್ದುಗೆ, ಗುದ್ದು ಕೊಟ್ಟ ಮೇಲ್ಮನೆ ವಿಪಕ್ಷ ನಾಯಕರು
ವಿಧಾನ ಪರಿಷತ್‌ನಲ್ಲೂ ಕೇಂದ್ರದಿಂದ ವಂಚನೆಯಾಗಿದೆ ಎಂದು ತೆರಿಗೆ ಲೆಕ್ಕ ಕೊಟ್ಟ ಸಿಎಂ ಸಿದ್ದರಾಮಯ್ಯ ಅವರ ಉತ್ತರಕ್ಕೆ ಮೇಲ್ಮನೆ ವಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು.
ವಿಧಾನ ಪರಿಷತ್ (ಫೆ.15): ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 100 ರೂ. ತೆರಿಗೆ ಪಾವತಿಸಿದರೆ ನಮಗೆ ಕೇವಲ 12 ರೂ. ತೆರಿಗೆ ಪಾವತಿಯ ಹಣವನ್ನು ವಾಪಸ್ ನೀಡಲಾಗುತ್ತಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉತ್ತರ ಕೊಡಬೇಡಿ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯರು ಆಗ್ರಹಿಸಿದ್ದಾರೆ. ಈ ವೇಳೆ ನಾನು ಫ್ಯಾಕ್ಟ್ ಹೇಳುತ್ತಿದ್ದೇನೆ. ಪ್ರಶ್ನೆ ಕೇಳಿದವರೇ ಸುಮ್ಮನಿರುವಾಗ ವಿಪಕ್ಷ ನಾಯಕರದ್ದೇನು ತಕರಾರು? ನಿಮ್ಮ ಗೂಂಡಾಗಿರಿಗೆ ನಾನು ಹೆದರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ತೆರಿಗೆ ಹಣ ಸಂಗ್ರಹಣೆ ಮತ್ತು ಕೇಂದ್ರದ ಅನುದಾನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡುವಾಗ ದೊಡ್ಡ ಪ್ರಹಸನವೇ ನಡೆದಿದ್ದು, ಕೆಲವು ಸಮಯದವರೆಗೆ ಕಲಾಪವನ್ನು ಮುಂದೂಡಿಕೆ ಮಾಡಲಾಗಿತ್ತು. ಕೇಂದ್ರದ ಅನುದಾನದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ತೆರಿಗೆಗಳನ್ನ ಕೇಂದ್ರ ಉತ್ಪಾದನೆ ಮಾಡುವುದಿಲ್ಲ. ರಾಜ್ಯಗಳು ತೆರಿಗೆ ಪಾವತಿ ಮಾಡುತ್ತವೆ. 2023-24ರಲ್ಲಿ ಅಂದಾಜು 4 ಲಕ್ಷದ 30 ಸಾವಿರ ಕೋಟಿ ತೆರಿಗೆ ಕಲೆಕ್ಷನ್ ಆಗುತ್ತಿದೆ. ನಮ್ಮ ರಾಜ್ಯದಿಂದ ಕೇಂದ್ರಕ್ಕೆ 100 ರೂ. ತೆರಿಗೆ ಕಲೆಕ್ಟ್ ಮಾಡಿದ್ರೆ, ನಮಗೆ ವಾಪಾಸ್ ಬರೋದು 12/13 ರೂ ಮಾತ್ರ. ಈ ಹಣದಿಂದ ರಾಜ್ಯ ಅಭಿವೃದ್ದಿ ಸಾಧ್ಯವಿಲ್ಲ. ಇದಕ್ಕಾಗೇ ನಾವು ಪ್ರತಿಭಟನೆ ಮಾಡಿದ್ದು. ನಾವು ಇದರಲ್ಲಿ ರಾಜಕೀಯ ಮಾಡುತ್ತಿಲ್ಲ. ಹಕ್ಕು ಕೇಳುತ್ತಿದ್ದೇವೆ ಎಂದರು.
ಮಹದಾಯಿಗೆ ಕೇಂದ್ರ ಅನುಮತಿ ನಿರಾಕರಿಸಿಲ್ಲ: ಸಚಿವ ಜೋಶಿ ಸ್ಪಷ್ಟನೆ
ನಾವು ರಾಜ್ಯಕ್ಕೆ ತೆರಿಗೆ ಪಾವತಿಯಲ್ಲಿ ಉಂಟಾಗಿರುವ ತಾರತಮ್ಯದ ಕುರಿತು 16ನೇ ಆಯೋಗದ ಮುಂದೆ ಈ ಮನವಿ ಇಡಲು ನಿರ್ಧರಿಸಿದ್ದೇವೆ. ಅಪ್ಪರ್ ಭದ್ರಾ ಪ್ರಾಜೆಕ್ಟ್ ಅನ್ನ ನ್ಯಾಷನಲ್ ಪ್ರಾಜೆಕ್ಟ್ ಮಾಡುತ್ತೇವೆ ಅಂತ 5 ಸಾವಿರ ಕೋಟಿ ಕೊಡುತ್ತೇವೆ ಎಂದರು. ಆದರೆ ಒಂದು ಪೈಸೆ ಕೂಡ ಕೊಡಲಿಲ್ಲ ಎಂದರು. ಆಗ ಸಿಎಂ ಸಿದ್ದರಾಮಯ್ಯ ಉತ್ತರಕ್ಕೆ ವಿಪಕ್ಷಗಳ ನಾಯಕರು (ಬಿಜೆಪಿ ನಾಯಕರು) ಆಕ್ಷೇಪ ವ್ಯಕ್ತಪಡಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಚರ್ಚೆಗೆ ಅವಕಾಶ ಇಲ್ಲ ಎಂದು ಸಭಾಪತಿಗಳಿಗೆ ದೂರು ನೀಡಿದರು. ನಂತರ, ಸದನದಲ್ಲಿ ಗದ್ದಲ, ವಾಗ್ವಾದ ಹೆಚ್ಚಳವಾಯಿತು.
ಗಲಾಟೆ ನಡುವೆಯೂ ಉತ್ತರ ಮುಂದುವರಿಸಿದ ಸಿದ್ದರಾಮಯ್ಯ ನಾನು ಫ್ಯಾಕ್ಟ್ ಹೇಳುತ್ತಿದ್ದೇನೆ. ಫ್ಯಾಕ್ಟ್ ಈಸ್ ಫ್ಯಾಕ್ಟ್. ವಿಪಕ್ಷಗಳ ಈ ನಡೆ ಸಹಿಸಲ್ಲ ನಾನು ಉತ್ತರ ಕೊಡಲ್ಲ. ಪ್ರಶ್ನೆ ಕೇಳಿದವರು ಸುಮ್ಮನಿರುವಾಗ ವಿಪಕ್ಷದ್ದವರದ್ದೇನು ಮಾತು. ನಮ್ಮ ಫ್ಯಾಕ್ಟ್ ಉತ್ತರ ಸಹಿಸಲು ಸಾಧ್ಯ ಆಗ್ತಿಲ್ಲ. ನೀವು ಎಷ್ಟೇ ಕೂಗಾಡಿದರೂ ಅದು ಸತ್ಯವೇ. ನಿರ್ಮಲಾ ಸೀತಾರಾಂ ಕೂಡ ವಿರೋಧಿ ಧೋರಣೆ ತೋರಿಸಿದ್ದಾರೆ ಎಂದರು. ಆಗ ಪುನಃ ಬಿಜೆಪಿ ಸದಸ್ಯರು ಮುಖ್ಯಮಂತ್ರಿಗಳೇ ನಿಮ್ಮ ಉತ್ತರ ಬೇಡ ಎಂದು ಘೋಷಣೆ ಕೂಗಿದರು. ಇದರ ನಡುವೆಯೂ ಸಿಎಂ ಉತ್ತರ ಮುಂದುವರಿಸಿದ್ದು, ಕೇಂದ್ರ ಸರ್ಕಾದರ ಬಜೆಟ್‌ನಲ್ಲಿ ಒಪ್ಪಿಕೊಂಡಿದ್ದ 5,300 ಕೋಟಿ ರೂ ಬಿಡುಗಡೆ ಮಾಡಿಲ್ಲ. ಆದರೆ ನಾವು ಭದ್ರಾ ಯೋಜನೆ ಮೇಲ್ದಂಡೆ ಮೇಲಿನ ಕಾಳಜಿಯಿಂದ 1,000 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 1,000 ಕೋಟಿ ರೂ. ಗಳ ದ್ರೋಹ ಮಾಡಿದೆ. ಇದಕ್ಕೆ ಹಣಕಾಸು ಸಚಿವರು ಸಹಕಾರ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದರು.
ರಾಜಕೀಯ ಪುನರ್ಜನ್ಮ ನೀಡಿದ್ದ ಬಾಗಲಕೋಟೆಗೆ ಈ ಬಾರಿಯಾದ್ರೂ ಬಜೆಟ್‌ನಲ್ಲಿ ಬಂಪರ್ ನೀಡ್ತಾರಾ ಸಿದ್ದರಾಮಯ್ಯ?
ಪುನಃ ಬಿಜೆಪಿ ಸದಸ್ಯರಿಂದ ಭಾರಿ ಗದ್ದಲ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಮೊಳಗಿದವು. ಆದರೆ ನಾನು ಗೂಂಡಾಗಿರಿಗೆ ಹೆದರಲ್ಲ. ನಾನು ಇನ್ನೂ ಉತ್ತರ ಪೂರ್ಣಗೊಳಿಸಿಲ್ಲ. ಅದರೊಳಗೆ ಗದ್ದಲ ಮಾಡುತ್ತೀರಾ. ನಾನಿದಕ್ಕೆ ಹೆದರಲ್ಲ. ನೀವೇನು ಮಾಡುತ್ತಿದ್ದೀರಾ? ಈಗ ಏನು ಮಾಡಿದ್ದೀರಾ ಅಂತ 7 ಕೋಟಿ ಜನ ನೋಡುತ್ತಿದ್ದಾರೆ. ಇವರಿಲ್ಲಿ ಗಲಾಟೆ ಮಾಡುತ್ತಿದ್ದಾರೆ ಎಂದಾದರೆ ಇವರು ತಪ್ಪು ಮಾಡಿದ್ದಾರೆ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನಃ ತಿರುಗೇಟು ನೀಡಿದರು.