* ಇನ್ನು ಮುಂದೆ ದೇವೇಗೌಡರ ಜತೆ ಇರುತ್ತೇನೆ* ಯಾವುದೇ ಷರತ್ತಿಲ್ಲದೆ ಜೆಡಿಎಸ್ ಸೇರುವೆ* ವಿಧಾನ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ
ಬೆಂಗಳೂರು(ಏ.01): ವಿಧಾನಪರಿಷತ್(Vidhan Parishat) ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಮಾಜಿ ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ(CM Ibrahim) ಅವರು ರಂಜಾನ್ ಹಬ್ಬದ ಬಳಿಕ ಜೆಡಿಎಸ್‌ಗೆ ಅಧಿಕೃತ ಸೇರ್ಪಡೆಯಾಗಲಿದ್ದಾರೆ. ಬಹುತೇಕ ಇಬ್ರಾಹಿಂ ಅವರಿಗೆ ಜೆಡಿಎಸ್(JDS) ರಾಜ್ಯಾಧ್ಯಕ್ಷ ಸ್ಥಾನ ನೀಡುವುದು ನಿಚ್ಚಳವಾಗಿದೆ. ಅದಾಗದಿದ್ದರೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಗುರುವಾರ ಸಂಜೆ ಇಬ್ರಾಹಿಂ ನಿವಾಸಕ್ಕೆ ತೆರಳಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರು ಸಮಾಲೋಚನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ‘ಇಬ್ರಾಹಿಂ ಅವರು ಮರಳಿ ಮನೆಗೆ ಬಂದಿದ್ದಾರೆ. ಅವರ ನಾಯಕತ್ವದಲ್ಲಿಯೇ ವಿಧಾನಸಭೆ ಚುನಾವಣೆ(Karnataka Assembly Election) ಎದುರಿಸಿ, ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ. ಚುನಾವಣೆ ಮುಂದಿನ ವರ್ಷ ಏಪ್ರಿಲ್‌ಗೆ ಬರುತ್ತೋ ಅಥವಾ ಇದೇ ವರ್ಷ ನವೆಂಬರ್-ಡಿಸೆಂಬರ್‌ಗೆ ಬರುತ್ತೋ ಗೊತ್ತಿಲ್ಲ. ಯಾವಾಗ ಬಂದರೂ ಸಹ ಇಬ್ರಾಹಿಂ ನಾಯಕತ್ವದಲ್ಲಿ ಚುನಾವಣೆ ನಡೆಸುತ್ತೇವೆ. ರಂಜಾನ್ ನಂತರ ಬೃಹತ್ ಕಾರ್ಯಕ್ರಮ ಮಾಡಲಾಗುವುದು. ಅಲ್ಲಿ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ’ ಎಂದರು.
Karnataka Hijab Verdict ಹೈಕೋರ್ಟ್ ತೀರ್ಪನ್ನು ನಾವು ಒಪ್ಪುವುದಿಲ್ಲ
‘ರಾಜ್ಯದ(Karnataka) ಉದ್ದಗಲಕ್ಕೂ ದೇವೇಗೌಡರ(HD Devegowda) ಜತೆ ಇಬ್ರಾಹಿಂ ಪಕ್ಷಕ್ಕೆ ದುಡಿದಿದ್ದರು. ಆಗ ನಮ್ಮ ಪಕ್ಷಕ್ಕೆ ಸ್ವತಂತ್ರ ಅಧಿಕಾರ ಸಿಕ್ಕಿತ್ತು. ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದರು. ಇಬ್ರಾಹಿಂ ರಾಜ್ಯಾಧ್ಯಕ್ಷರಾಗಿದ್ದರು. ಮನೆಗೆ ಮರಳಿ ಬರುತ್ತಿದ್ದಾರೆ. ಈಗ ಮತ್ತೆ ಅದೇ ಪರಿಸ್ಥಿತಿ ಉಂಟಾಗಿದೆ’ ಎಂದು ತಿಳಿಸಿದರು.
ಇಬ್ರಾಹಿಂ ಮಾತನಾಡಿ, ‘ರಂಜಾನ್(Ramjan) ಮುಗಿದ ಬಳಿಕ ಬಸವನಬಾಗೇವಾಡಿಯಿಂದ ಪ್ರಚಾರ ಪ್ರಾರಂಭಿಸುತ್ತೇವೆ. ಹೈದರಾಬಾದ್ ಕರ್ನಾಟಕದಿಂದ(Hyderabad-Karnataka) ಮೊದಲ ಪ್ರವಾಸ ಪ್ರಾರಂಭಿಸುತ್ತೇವೆ. ನಾನು ಎಂದಿಗೂ ಕ್ಷೇತ್ರ ರಾಜಕೀಯ ಮಾಡಲಿಲ್ಲ. ರಾಜ್ಯ ರಾಜಕೀಯ ಮಾಡಿದವನು. ನಾನು ಕಿಂಗ್‌ಗಿಂತ ದೊಡ್ಡ ಕಿಂಗ್‌ಮೇಕರ್(King Maker). ನಾನು ಯಾವ ಕ್ಷೇತ್ರದಲ್ಲಿಯೂ ನಿಲ್ಲುವುದಿಲ್ಲ. ನನಗೆ ಪಕ್ಷ ಅಧಿಕಾರಕ್ಕೆ ಬರಬೇಕು. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಅಷ್ಟೇ ನಮ್ಮ ಕೆಲಸ’ ಎಂದರು.
ಎಂಎಲ್‌ಸಿ ಸ್ಥಾನಕ್ಕೆ ಇಬ್ರಾಹಿಂ ರಾಜೀನಾಮೆ
ಮಾಜಿ ಸಚಿವ, ಅಲ್ಪಸಂಖ್ಯಾತ ಸಮುದಾಯದ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಅವರು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ರಾಜೀನಾಮೆ ಅಂಗೀಕರಿಸಿದ್ದಾರೆ.
ಕಾಂಗ್ರೆಸ್(Congress) ತೊರೆಯಲು ನಿರ್ಧರಿಸಿದ್ದ ಇಬ್ರಾಹಿಂ ಇತ್ತೀಚೆಗಷ್ಟೆ ಪಕ್ಷದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಜೆಟ್ ಅಧಿವೇಶನ ಮುಕ್ತಾಯವಾದ ಮರು ದಿನವೇ ಗುರುವಾರ ವಿಧಾನಸೌಧದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಗೆ ಆಗಮಿಸಿ ವಿಧಾನ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದರು.
ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು: ಕಾಂಗ್ರೆಸ್ ತೊರೆದ ಇಬ್ರಾಹಿಂಗೆ ಸಿದ್ದರಾಮಯ್ಯ ತಿರುಗೇಟು!
ರಾಜೀನಾಮೆ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ‘ಸ್ವಯಂ ಪ್ರೇರಣೆಯಿಂದ ರಾಜೀನಾಮೆ ಕೊಟ್ಟಿದ್ದೇನೆ. ಯಾರೊಬ್ಬರು ಕೊಟ್ಟ ಪದವಿಯನ್ನು ಆ ಮನೆ ಬಿಡುವಾಗ ವಾಪಸ್ ಕೊಟ್ಟು ಬಿಡಬೇಕು. ಗುರುವಾರದ ದಿವಸ ಎಲ್ಲಾ ಧರ್ಮಗಳಿಗೆ ಶ್ರೇಷ್ಠವಾದದ್ದು. ಹಾಗಾಗಿ ಇಂದು ರಾಜೀನಾಮೆ ಕೊಟ್ಟಿದ್ದೇನೆ. ಸಭಾಪತಿ ಅವರು ಅಂಗೀಕರಿಸಿದ್ದಾರೆ. ನನ್ನ ಮೇಲಿದ್ದ ಹೊರೆ ಕಳಚಿಕೊಂಡಿದ್ದೇನೆ. ನನ್ನ ಮುಂದಿನ ನಡೆ ಇಲ್ಲಿಂದ ಆರಂಭವಾಗಲಿದೆ’ ಎಂದರು.
‘ನಮ್ಮ ನಡೆ ಇನ್ಮುಂದೆ ದೇವೇಗೌಡ ಜೊತೆ ಇರುತ್ತದೆ. ಇದು ಸರ್ವಸಮ್ಮತ ಅಭಿಪ್ರಾಯ. ನನ್ನ ಜೊತೆ ಅನೇಕ ಜನ ಬರ್ತಾರೆ. ಆದರೆ, ಬನ್ನಿ ಎಂದು ನಾನು ಯಾರಿಗೂ ಬಲವಂತ ಮಾಡೋದಿಲ್ಲ’ ಎಂದು ಹೇಳಿದರು.
ಯಾವುದೇ ಷರತ್ತು ಹಾಕದೆ ಜೆಡಿಎಸ್‌ಗೆ:
‘ಯುಗಾದಿ ಮುಗಿದ ಮೇಲೆ ಏಪ್ರಿಲ್-ಮೇ ತಿಂಗಳಲ್ಲಿ ದೊಡ್ಡ ಪ್ರವಾಹ ಬರುತ್ತದೆ. ಸ್ವತಂತ್ರವಾಗಿ ಸರ್ಕಾರ ಮಾಡುವ ಶಕ್ತಿ ಸಾಮರ್ಥ್ಯ ಜೆಡಿಎಸ್‌ಗೆ ಇದೆ. ಇದನ್ನು ಹೊರತರುವ ಪ್ರಯತ್ನ ಮಾಡುತ್ತೇವೆ’ ಎಂದು ಇದೇ ವೇಳೆ ಇಬ್ರಾಹಿಂ ಹೇಳಿದರು.
ಷರತ್ತು ಹಾಕಿ ಜೆಡಿಎಸ್ ಸೇರ್ಪಡೆಯಾಗುತ್ತಿದ್ದೀರಾ ಎಂಬ ಪ್ರಶ್ನೆಗೆ, ‘ಯಾವ ಷರತ್ತೂ ಇಲ್ಲ. ಜೆಡಿಎಸ್ ನನ್ನ ಮನೆ, ನನ್ನ ಮನೆಗೆ ಏನಾದರೂ ಷರತ್ತು ಹಾಕಿ ಹೋಗ್ತೀವಾ? ಎಲ್ಲಿ ಬಾಗಿಲು ಇದೆ, ಎಲ್ಲಿ ಕಿಟಕಿ ಇದೆ, ಎಲ್ಲಿ ಅಡುಗೆ ಮನೆ ಇದೆ ಎಂಬುದು ನನಗೆ ಗೊತ್ತಿಲ್ವಾ. ನನ್ನ ಮನೆಗೆ ಹೋಗಬೇಕಾದರೆ ದಾರಿ ತೋರಿಸುವ ಅವಶ್ಯಕತೆ ಇಲ್ಲ’ ಎಂದರು.
