ರಾಯಚೂರು, (ಮಾ.21): ಈ ಬಾರಿಯ ಉಪ ಚುನಾವಣೆಯಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ವಿಜಯೇಂದ್ರ ಅಭ್ಯರ್ಥಿಯಾಗಲಿದ್ದಾರೆ ಎಂಬುದು ನೂರಕ್ಕೆ ನೂರು ಸುಳ್ಳು ಎಂದಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದರು.

ಸಿಂಧನೂರಿನಲ್ಲಿ ಇಂದು (ಭಾನುವಾರ) ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಮೈಸೂರಿಗೆ ಹೋಗಿ ಅಲ್ಲಿರುತ್ತಾರೆ. ಅಲ್ಲಿಯೇ ಮನೆ ಮಾಡಲಿದ್ದು, ಇದರಿಂದ ಐದಾರು ಜಿಲ್ಲೆಗಳಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ. ಮುಂದಿನ ಬಾರಿ ವರುಣಾ ಕ್ಷೇತ್ರಕ್ಕೆ ಯಾರು ಸ್ಪರ್ಧಿಸುತ್ತಾರೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಉಪಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ: ಸಿಎಂ ಬಿಎಸ್‌ವೈ ಪ್ರತಿಕ್ರಿಯೆ

ಮಸ್ಕಿಯಲ್ಲಿ ಪ್ರತಾಪಗೌಡ ಪ್ರಚಾರಕ್ಕೆ ಹೋದಾಗ ಭವ್ಯ ಸ್ವಾಗತ ಸಿಕ್ಕಿದೆ. ಪ್ರತಾಪಗೌಡ ಪಾಟೀಲ 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಕ್ಷೇತ್ರದಲ್ಲಿ ಮತ್ತೊಮ್ಮೆ ಬಂದು ಪ್ರಚಾರ ಮಾಡುತ್ತೇನೆ. ಬಸವಕಲ್ಯಾಣ ದಲ್ಲಿ ನಾವು ಗೆದ್ದಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ನಾವು ಗೆಲ್ಲಲಿದ್ದೇವೆ. ಅಭ್ಯರ್ಥಿಗಳ ಪಟ್ಟಿ ಮಾಡಿ ದೆಹಲಿಗೆ ಕಳುಹಿಸಿದ್ದೇವೆ. ಇಂದು, ನಾಳೆಯೊಳಗೆ ಅಭ್ಯರ್ಥಿ ಪಟ್ಟಿ ಬರುತ್ತದೆ ಎಂದರು‌.

5ಎ ಕಾಲುವೆ ಬದಲು ವಟಗಲ್ ಬಸವೇಶ್ವರ ಏತ ನೀರಾವರಿ ಮಾಡಲಾಗುವುದು. ಅವಶ್ಯವಿರುವ ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗುವುದು. ತುಂಗಭದ್ರಾ ಎಡದಂಡೆ ಕಾಲುವೆಗೆ ಏಪ್ರಿಲ್ 10 ತನಕ ನೀರು ಹರಿಸುವುದಕ್ಕೆ ಸಂಬಂಧಿಸಿ ರೈತರಿಗೆ ಅನುಕೂಲಕರವಾಗುವ ನಿರ್ಧಾರ ಕೈಗೊಳ್ಳಲಾಗುವುದು. ಇತಿಹಾಸದಲ್ಲೇ ಮೊದಲ ಬಾರಿಗೆ ತೆರಿಗೆ ಹೊರೆ ಇಲ್ಲದ ಐತಿಹಾಸಿಕ ಬಜೆಟ್ ಮಂಡಿಸಲಾಗಿದೆ. ಮುಂದಿನ ಚುನಾವಣೆಯಲ್ಲೂ ಬಿಜೆಪಿ 130 ಸೀಟುಗಳನ್ನು ಗೆಲ್ಲಲಿದೆ ಎಂದು ಹೇಳಿದರು.