ಬೆಂಗಳೂರು [ಡಿ.31]:  ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ನಿರೀಕ್ಷೆಯಂತೆಯೇ ವಿಧಾನಮಂಡಲ ಅಧಿವೇಶನವನ್ನು ಮುಂದೂಡಲಾಗಿದೆ. 2020ರ ಜ.20ರಿಂದ ಹತ್ತು ದಿನಗಳ ಕಾಲ ನಡೆಯಬೇಕಿದ್ದ ಅಧಿವೇಶನವನ್ನು ಮುಂದೂಡಿ ಫೆ. 17ರಿಂದ 21ರವರೆಗೆ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಇದೇ ವೇಳೆ, ಯಡಿಯೂರಪ್ಪ ಅವರು ಪ್ರಸಕ್ತ ಸರ್ಕಾರದ ಚೊಚ್ಚಲ ಆಯವ್ಯಯ ಮಂಡಿಸಲು ಮುಹೂರ್ತ ಕೂಡ ನಿಗದಿ ಮಾಡಲಾಗಿದೆ. 2020ರ ಮಾಚ್‌ರ್‍ 5 ರಂದು ನೂತನ ಸರ್ಕಾರದ ಮೊದಲ ಬಜೆಟ್‌ ಮಂಡನೆಯಾಗಲಿದೆ. ಇದಕ್ಕಾಗಿ ಮಾ.2ರಿಂದ ಬಜೆಟ್‌ ಅಧಿವೇಶನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಸೋಮವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು. ದಾವೋಸ್‌ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಪುಟ ಸಭೆ ಒಪ್ಪಿಗೆ ನೀಡಿತು ಎಂದರು.

BSY ಸರ್ಕಾರದ ಪ್ರಸಕ್ತ ಅವಧಿಯ ಚೊಚ್ಚಲ ಬಜೆಟ್‌ಗೆ ಮುಹೂರ್ತ ಫಿಕ್ಸ್...

ಫೆ.17ರಂದು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ರಾಜ್ಯಪಾಲರ ಮೇಲಿನ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಫೆ.17ರಿಂದ 21ರವರೆಗೆ ಅಧಿವೇಶನ ನಡೆಯಲಿದೆ ಎಂದು ವಿವರಿಸಿದರು.

ಜ.20ರಿಂದ 24ರವರೆಗೆ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆ ಸಮಾವೇಶದಲ್ಲಿ ಕೇಂದ್ರ ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ನೇತೃತ್ವದ ಭಾರತೀಯ ನಿಯೋಗ ಪಾಲ್ಗೊಳ್ಳುತ್ತಿದೆ. ಈ ನಿಯೋಗದಲ್ಲಿ ಯಡಿಯೂರಪ್ಪ, ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್‌ ಅವರೂ ಇದ್ದಾರೆ. ಇದಲ್ಲದೆ 100 ಭಾರತೀಯ ಸಿಇಒಗಳೂ ಪ್ರಯಾಣಿಸುತ್ತಿದ್ದಾರೆ. ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಸಮಾವೇಶವಾಗಿರುವುದರಿಂದ ಅಧಿವೇಶನವನ್ನು ಮುಂದೂಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ತಿಳಿದುಬಂದಿದೆ.

ಮಾ.2ರಿಂದ ಬಜೆಟ್‌ ಅಧಿವೇಶನ:

ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾ.2 ರಿಂದ ಬಜೆಟ್‌ ಅಧಿವೇಶನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರೂ ಆಗಿರುವ ಬಿ.ಎಸ್‌. ಯಡಿಯೂರಪ್ಪ ಅವರು ಮಾ.5ರಂದು ಬಜೆಟ್‌ ಮಂಡನೆ ಮಾಡಲಿದ್ದಾರೆ. ಬಜೆಟ್‌ ಮೇಲಿನ ಅಧಿವೇಶನ ಎಷ್ಟುದಿನಗಳವರೆಗೆ ನಡೆಯಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಈ ಬಾರಿಯ ಬಜೆಟ್‌ ಮೇಲೆ ವಿವರವಾಗಿ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು. ಮಾ.2ರಿಂದ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು ಮಾ.5ರಂದು ಬಜೆಟ್‌ ಮಂಡನೆಯಾಗಲಿದೆ. ಬಜೆಟ್‌ ಅಧಿವೇಶನವನ್ನು ಎಷ್ಟುದಿನ ನಡೆಸಬೇಕು ಎಂಬುದನ್ನು ಬಳಿಕ ತೀರ್ಮಾನಿಸಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.

ನ.3ರಿಂದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ

ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು 2020ರ ನವೆಂಬರ್‌ 3 ರಿಂದ ಮೂರು ದಿನಗಳ ಕಾಲ ನಡೆಸಲು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಉದ್ಯಮಿಗಳನ್ನು ಆಕರ್ಷಿಸಲು ಈ ಬಾರಿಯೂ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು. ನವೆಂಬರ್‌ 3, 4, 5 ರಂದು ಸಮಾವೇಶ ನಡೆಯಲಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ದಿನಾಂಕ ಘೋಷಿಸಿದರು.