ವಿಧಾನಸಭೆ (ಫೆ.06):  ‘ನಾನು ಬೇಲ್‌ ಮೇಲೆ ಇದ್ದೇನೆ ಎಂದು ಹೇಳುತ್ತೀರಲ್ಲ ಸಿದ್ದರಾಮಯ್ಯನವರೇ, ನಿಮ್ಮ ಪಕ್ಷದ ರಾಷ್ಟ್ರೀಯ ಕಾಂಗ್ರೆಸ್‌ ನಾಯಕರೇ ಜಾಮೀನಿನ ಮೇಲೆ ಹೊರಗಿಲ್ಲವೇ? ಇದಕ್ಕೆ ಏನು ಹೇಳುತ್ತೀರಿ? ಹಾದಿ ಬೀದಿಯಲ್ಲಿ ಹೋಗುವವರೆಲ್ಲಾ ಸಿಎಂ, ಸಚಿವರ ಮೇಲೆ ಸುಳ್ಳು ದೂರು ದಾಖಲಿಸುತ್ತಿದ್ದಾರೆ. ಇದರಿಂದ ಕೇಸ್‌ಗಳಾಗುತ್ತವೆ. ಇಂತಹ 100 ಕೇಸು ಹಾಕಿದರೂ ಜಗ್ಗುವುದಿಲ್ಲ...’

ಆಗಾಗ ತಮ್ಮನ್ನು ಜಾಮೀನಿನ ಮೇಲೆ ಹೊರಗಿರುವ ಮುಖ್ಯಮಂತ್ರಿ ಎಂದು ಲೇವಡಿ ಮಾಡುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿರುಗೇಟು ನೀಡಿದ ಪರಿಯಿದು.

ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಸುದೀರ್ಘ ಉತ್ತರ ನೀಡುವ ವೇಳೆ ಈ ಹೇಳಿಕೆ ನೀಡಿದ ಯಡಿಯೂರಪ್ಪ, ನಾಡಿನ ಜನರ ಆಶೀರ್ವಾದ ಹಾಗೂ ಮೋದಿ, ಅಮಿತ್‌ ಶಾ ಬೆಂಬಲ ಇರುವವರೆಗೂ ನಾನೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತೇನೆ. ಅಷ್ಟೇ ಅಲ್ಲ ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಕಾಂಗ್ರೆಸ್‌ ಪಕ್ಷವನ್ನು ಶಾಶ್ವತವಾಗಿ ಪ್ರತಿಪಕ್ಷದಲ್ಲಿ ಕೂರಿಸುತ್ತೇನೆ ಎಂದೂ ಠೇಂಕರಿಸಿದರು.

'ಮೀಸಲಾತಿ ಕೊಡಿ.. ಇಲ್ಲಾ ರಾಜೀನಾಮೆ ಕೊಡಿ' ಸಿಎಂಗೆ ಪಂಚಮಸಾಲಿ ಸ್ವಾಮೀಜಿ ಸವಾಲ್ ...

ಸಿದ್ದರಾಮಯ್ಯ ಅವರು ಕಳೆದ ಆರು ತಿಂಗಳಿಂದ ಬೆಳಗಿನ ಸ್ವಪ್ನದಲ್ಲೂ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂದು ಕನವರಿಸುತ್ತಿದ್ದಾರೆ. ಸಿದ್ದರಾಮಯ್ಯ ವಕೀಲರಾಗಿದ್ದವರು. ಅವರಷ್ಟುನಾನು ಬುದ್ಧಿವಂತ ಅಲ್ಲ. ಏಕೆಂದರೆ ಅವರು ಮುಖ್ಯಮಂತ್ರಿ ಆಗಿದ್ದಾಗ ಬಿಡಿಎನಲ್ಲಿ ರೀಡೂ ಹೆಸರಲ್ಲಿ ಸಾವಿರಾರು ಎಕರೆ ಜಾಗ ಡಿ-ನೋಟಿಫಿಕೇಷನ್‌ ಮಾಡಿಸಿದರು. ಭ್ರಷ್ಟಾಚಾರ ನಿಗ್ರಹ ದಳ ಸೃಷ್ಟಿಸಿಕೊಂಡು ಪ್ರಕರಣಗಳಿಗೆ ಬಿ ರಿಪೋರ್ಟ್‌ ಹಾಕಿಸಿಕೊಂಡರು ಎಂದೂ ಕುಟುಕಿದರು.

ನಾವು ಮನಸ್ಸು ಮಾಡಿದರೆ ಯಾರ ಮೇಲಾದರೂ ಸುಳ್ಳು ಕೇಸು ಹಾಕಬಹುದು. ಆದರೆ, ಅಂತಹ ಕೆಲಸ ನಾವು ಮಾಡಲ್ಲ. ನಮ್ಮ ಮೇಲೆ ನೂರು ಕೇಸು ಹಾಕಲಿ ಎದುರಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಸವಾಲು ಹಾಕಿದರು.

ಸಿದ್ದರಾಮಯ್ಯ ಅವರು ಪ್ರತಿ ಬಾರಿ ಅಪವಿತ್ರ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದಾಗಿ ಹೇಳುತ್ತಾರೆ. ಆದರೆ, ಕಳೆದ ಬಾರಿ ಕಾಂಗ್ರೆಸ್‌ ಪಕ್ಷವನ್ನು ಜನರು ತಿರಸ್ಕರಿಸಿದರೂ ಜೆಡಿಎಸ್‌ನವರೊಂದಿಗೆ (ಕಾಂಗ್ರೆಸ್‌) ಅಪವಿತ್ರ ಮೈತ್ರಿ ಮಾಡಿಕೊಂಡಿದ್ದನ್ನು ಮರೆಯುತ್ತಾರೆ. 2006ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಕಾಂಗ್ರೆಸ್‌ ಸೇರಿ ಆಪರೇಷನ್‌ ಮಾಡಲಿಲ್ಲವೇ? ನಮಗೆ ಜನಾದೇಶ ಇಲ್ಲದೆ 2019ರಲ್ಲಿ 25 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಯಿತೆ? ಠೇವಣಿ ಕಳೆದುಕೊಂಡಿದ್ದ ಶಿರಾದಲ್ಲಿ ನಮ್ಮ ಪಕ್ಷದ ಗೆಲುವು ಹೇಗಾಯಿತು ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ನಾವು ಈಗಲೇ ಚುನಾವಣೆಗೆ ಸಿದ್ಧರಿದ್ದೇವೆ. ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ ಬನ್ನಿ. ನಿಮ್ಮನ್ನು ಸೋಲಿಸಿ ತೋರಿಸುತ್ತೇನೆ ಎಂದು ಸವಾಲು ಹಾಕಿದರು.

ಬಿಎಸ್‌ವೈ ಅಬ್ಬರ

- ಸಿದ್ದು ಸಿಎಂ ಆಗಿದ್ದಾಗ ರೀಡೂ ಹೆಸರಲ್ಲಿ ಡಿನೋಟಿಫಿಕೇಷನ್‌ ಮಾಡಿಸಿದರು

- ಎಸಿಬಿ ರಚಿಸಿಕೊಂಡು ಪ್ರಕರಣಗಳಿಗೆ ಬಿ ರಿಪೋರ್ಟ್‌ ಹಾಕಿಸಿಕೊಂಡರು

- ನಮ್ಮದು ಅಪವಿತ್ರ ಮೈತ್ರಿ ಅಂತಾರೆ, ಜೆಡಿಎಸ್‌ ಜತೆ ಅವರೇ ಮೈತ್ರಿ ಮಾಡಿಕೊಂಡಿದ್ದರು

- ಜೆಡಿಎಸ್‌ಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್‌ ಸೇರಿ ಸಿದ್ದು ಆಪರೇಷನ್‌ ಮಾಡಲಿಲ್ಲವೇ?

- ಮುಂದಿನ ಬಾರಿ 150 ಸೀಟು ಗೆದ್ದು ಕಾಂಗ್ರೆಸ್ಸನ್ನು ಕಾಯಂ ವಿಪಕ್ಷ ಸ್ಥಾನದಲ್ಲಿ ಕೂರಿಸುತ್ತೇನೆ