* ಕಾಶ್ಮೀರ ವಿಶೇಷ ಸ್ಥಾನ ರದ್ದತಿ ಮರುಪರಿಶೀಲನೆ ಹೇಳಿಕೆಗೆ ಸಿಎಂ ಕಿಡಿ* ದೇವರ ದಯೆಯಿಂದ ಈ ಬಾರಿಯೂ ಉತ್ತಮ ಮಳೆಯಾಗುವ ನಿರೀಕ್ಷೆ* ಅಕ್ರಮ ಬಾಂಗ್ಲಾ, ಪಾಕ್‌ ಜನರ ಹೊರಗಟ್ಟುತ್ತೇವೆ 

ಬೆಂಗಳೂರು(ಜೂ.14): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಮರುಪರಿಶೀಲನೆ ಮಾಡುವುದಾಗಿ ಹೇಳಿರುವ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಅವರ ಹೇಳಿಕೆ ತಿರುಕನ ಕನಸು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.

ದಿಗ್ಗಿ ಹೇಳಿಕೆ ಬಗ್ಗೆ ಭಾನುವಾರ ಇಲ್ಲಿ ಪ್ರತಿಕ್ರಿಯೆ ನೀಡಿರುವ ಬಿಎಸ್‌ವೈ, ತಿರುಕನ ಕನಸು ಕಾಣುವವರಿಗೆ ನಾನು ಏನೂ ಹೇಳೋದಿಲ್ಲ. ದಿಗ್ವಿಜಯ್‌ ಸಿಂಗ್‌ ಅವರ ನಾಯಕತ್ವದ ಕೊರತೆಯಿಂದ ಪಕ್ಷ ಎಲ್ಲಿದೆ ಎನ್ನುವುದು ಗೊತ್ತಿದೆ. ಕಾಂಗ್ರೆಸ್‌ ಪರಿಸ್ಥಿತಿ ಹೇಗಿದೆ ಎಂಬುದು ಎಲ್ಲರೂ ಗಮನಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಹಾಸನ, ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ವಾರದಲ್ಲಿ ಒಮ್ಮೆಯಾದರೂ ಜಿಲ್ಲೆಗಳಿಗೆ ತೆರಳಿ ಕೋವಿಡ್‌ ನಿರ್ವಹಣೆ, ಅಭಿವೃದ್ಧಿ ಕಾರ್ಯದ ಪರಿಶೀಲನೆ ನಡೆಸುತ್ತೇನೆ. ಇದರಿಂದ ಜಿಲ್ಲೆಗಳಲ್ಲಿನ ವಾಸ್ತವ ಸ್ಥಿತಿ ತಿಳಿಯಲು ಸಹಕಾರಿಯಾಗಲಿದೆ. ಹಾಸನದಲ್ಲಿ ವಿಮಾನ ನಿಲ್ದಾಣ ಕೆಲಸ ನಡೆಯುತ್ತಿದೆ. ಆದಷ್ಟು ಬೇಗ ಮಾಜಿ ಪ್ರಧಾನಿ ದೇವೇಗೌಡರ ಜೊತೆ ಶಂಕುಸ್ಥಾಪನೆ ಕಾರ್ಯ ಮಾಡುತ್ತೇನೆ. ಅಭಿವೃದ್ಧಿ ಕಾರ್ಯ ಕೂಡ ಮಾಡಲಾಗುವುದು ಎಂದು ತಿಳಿಸಿದರು.

ಬಿಎಸ್‌ವೈಗೆ 3 ದಿನಗಳ ಅಗ್ನಿ ಪರೀಕ್ಷೆ: 2011ರ ಮಾಡೆಲ್ ಅನುಸರಿಸಲು ಹೈಕಮಾಂಡ್‌ ಪ್ಲಾನ್

ಅಕ್ರಮ ಬಾಂಗ್ಲಾ, ಪಾಕ್‌ ಜನರ ಹೊರಗಟ್ಟುತ್ತೇವೆ

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಹಾಗೂ ಪಾಕಿಸ್ತಾನಿ ಪ್ರಜೆಗಳನ್ನು ಹೊರಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಬಾಂಗ್ಲಾ ದೇಶದ ಅಕ್ರಮ ವಲಸಿಗಾರರು ರಾಜ್ಯದಲ್ಲಿ ಹೆಚ್ಚಿರುವ ಅನುಮಾನವಿದೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚಿಸಲಾಗಿದೆ. ಅಕ್ರಮವಾಗಿ ನೆಲಸಿಗರನ್ನು ಹೊರಗಟ್ಟಲು ಯಾವ ಪ್ರಯತ್ನ ಮಾಡಬೇಕು ಅದನ್ನು ಮಾಡುತ್ತೇವೆ ಎಂದರು.

ಈ ವರ್ಷವೂ ಉತ್ತಮ ಮಳೆ ನಿರೀಕ್ಷೆ

ದೇವರ ದಯೆಯಿಂದ ಈ ಬಾರಿಯೂ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷದಂತೆ ಉತ್ತಮ ಬೆಳೆ ಸಿಗುತ್ತದೆ, ಸಕಾಲಕ್ಕೆ ಮಳೆಯಾಗುತ್ತದೆ. ಈ ವರ್ಷವೂ ಉತ್ತಮ ಬೆಳೆಯನ್ನು ರೈತರು ಬೆಳೆದು ನೆಮ್ಮದಿಯಿಂದ ಬದುಕುವ ಒಳ್ಳೆಯ ಕಾಲ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆಬೀಜ, ಗೊಬ್ಬರ ಮತ್ತಿತರ ಕೃಷಿ ಕಾರ್ಯಕ್ಕೆ ಅಗತ್ಯವಾದ ಪರಿಕರಗಳ ವಿತರಣೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ರಾಜ್ಯದ ಎಲ್ಲ ಜಲಾಶಯದಲ್ಲಿ ನೀರು ಇದೆ ಎಂದು ಯಡಿಯೂರಪ್ಪ ಹೇಳಿದರು.