ಬಿಎಸ್‌ವೈಗೆ 3 ದಿನಗಳ ಅಗ್ನಿ ಪರೀಕ್ಷೆ: 2011ರ ಮಾಡೆಲ್ ಅನುಸರಿಸಲು ಹೈಕಮಾಂಡ್ ಪ್ಲಾನ್
* ರಾಜ್ಯದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನಾಯಕತ್ವ ಬದಲಾವಣೆ ಕೂಗು
* ಯಡಿಯೂರಪ್ಪಗೆ ಮೂರು ದಿನಗಳ ಅಗ್ನಿ ಪರೀಕ್ಷೆ
*2011ರ ಮಾಡೆಲ್ ಅನುಸರಿಸಲು ಹೈಕಮಾಂಡ್ ಪ್ಲಾನ್
ನವದೆಹಲಿ, (ಜೂನ್.13): ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಈಗ ಮೂರು ದಿನಗಳ ಅಗ್ನಿ ಪರೀಕ್ಷೆ ಶುರುವಾಗಲಿದೆ. ಭಿನ್ನರ ಧ್ವನಿ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದ ಬೆನ್ನಲೇ ಇದೀಗ ಹೈಕಮಾಂಡ್ ಅಂಗಳಕ್ಕೆ ಇಳಿದಿದೆ.
ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮನಕ್ಕೆ ಇನ್ನು ಕೇವಲ ಎರಡು ದಿನಗಳ ಬಾಕಿ ಉಳಿದಿದೆ. ಈ ಹೊತ್ತಲ್ಲಿ ಭಿನ್ನರು ಮತ್ತೊಂದು ಹೊಸ ರಾಗ ತೆಗೆದಿದ್ದಾರೆ.
ನಾಯಕತ್ವ ಬದಲಾವಣೆ ಕೂಗಿನ ಬೆನ್ನಲ್ಲೇ ಹೈಕಮಾಂಡ್ ಮಾಸ್ಟರ್ ಪ್ಲಾನ್
ಅವರೊಬ್ಬರೇ ಬೇಡ..?
ಭಿನ್ನರ ಹೊಸ ರಾಗ ಇದು. ಉಸ್ತುವಾರಿ ಅರುಣ್ ಸಿಂಗ್ ಜೂ.16 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ, ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ ಎಂದ ಕೂಡಲೇ ಅವರೊಬ್ಬರೇ ಬಂದು ಶಾಸಕರ ಅಭಿಪ್ರಾಯ ಸಂಗ್ರಹಿಸಿದರೆ ಏಕಾಭಿಪ್ರಾಯ ವ್ಯಕ್ತವಾಗಬಹುದು. ಹಾಗಾಗಿ ಕನಿಷ್ಠ ಇಬ್ಬರನ್ನಾದರು ಹೈಕಮಾಂಡ್ ಕಳುಹಿಸಬೇಕು ಅಂಥ ಪಟ್ಟು ಹಿಡಿದಿದ್ದಾರೆ. ಆದರೆ ಹೈಕಮಾಂಡ್ ಈ ಬಗ್ಗೆ ಇನ್ನು ಯಾವ ನಿರ್ಧಾರ ಕೈಗೊಂಡಿಲ್ಲ.
2011ರ ಮಾಡೆಲ್ ಬಳಕೆ
ಬಿ.ಎಸ್.ಯಡಿಯೂರಪ್ಪ ಅವರು 2011ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಇದೇ ಮಾದರಿಯಲ್ಲಿ ಶಾಸಕಾಂಗ ಸಭೆ ಕರೆಯುವಂತೆ ಒತ್ತಾಯ ಬಂದಿತ್ತು. ಅಂದಿನ ಕರ್ನಾಟಕ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜನಾಥ್ ಸಿಂಗ್ ಹಾಗು ಅನಂತ ಕುಮಾರ್ ಅವರು ಖಾಸಗಿ ಹೋಟೆಲ್ ನಲ್ಲಿ ಶಾಸಕರನ್ನು ಪ್ರತ್ಯೇಕವಾಗಿ ಒಬ್ಬೊಬ್ಬರನ್ನೇ ಕರೆದು ಅಭಿಪ್ರಾಯ ಸಂಗ್ರಹಿಸಿದ್ದರು. ಈಗಲೂ ಕೂಡ ಇದೇ ಮಾಡೆಲ್ ಅನುಸರಿಸಲು ಹೈಕಮಾಂಡ್ ಮುಂದಾಗಿದೆ.
ನಾಯಕತ್ವ ಬದಲಾವಣೆ: ದಿಲ್ಲಿಯಿಂದಲೇ ಬಂತು ಸ್ಪಷ್ಟ ಸಂದೇಶ
ಬೆಙಗಳೂರಿನ ಕುಮಾರ ಕೃಪ ಅತಿಥಿ ಗೃಹದಲ್ಲಿ ಶಾಸಕರನ್ನು ಪ್ರತ್ಯೇಕವಾಗಿ ಒಬ್ಬೊಬ್ಬರನ್ನೇ ಕರೆದು ಅಭಿಪ್ರಾಯ ಪಡೆಯಲಿದ್ದಾರೆ ಅರುಣ್ ಸಿಂಗ್. ಈ ಹಿನ್ನಲೆಯಲ್ಲಿ ಜೂನ್ 16 ರ ಮಧ್ಯಾಹ್ನ ದಿಂದ ಜೂನ್ 17 ರ ಸಂಜೆಯ ತನಕ 92 ಶಾಸಕರ ಅಭಿಪ್ರಾಯ ಪಡೆಯಲಿದ್ದಾರೆ. ಆ ಬಳಿಕ ಜೂನ್ 17 ರ ಸಂಜೆ ಯಿಂದ 18 ರ ಸಂಜೆಯ ತನಕ ಸಚಿವರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಅಂತಿಮವಾಗಿ ಯಡಿಯೂರಪ್ಪ ಅವರ ಅಭಿಪ್ರಾಯ ಕೂಡ ಪಡೆಯಲಿದ್ದಾರೆ. ಜೂನ್ 18 ರಂದು ಕೋರ್ ಕಮಿಟಿ ಸಭೆ ನಡೆಯಲಿದ್ದು ಅಲ್ಲಿಯೂ ಕೂಡ ಈ ವಿಷಯ ಚರ್ಚೆಯಾಗುವ ಸಾಧ್ಯತೆ ಇದೆ. ಬಳಿಕ ಅಂತಿಮ ವರದಿ ಹೈಕಮಾಂಡ್ ಕೈ ಸೇರಲಿದೆ. ಶಾಸಕರಿಗೆ 15 ನಿಮಿಷ, ಸಚಿವರುಗಳಿಗೆ ತಲಾ 20 ನಿಮಿಷ ಅಭಿಪ್ರಾಯ ತಿಳಿಸಲು ಅವಕಾಶ ಮಾಡಿಕೊಡಲಾಗಿದೆ. ಮೇ, ಜೂನ್ ಹಾಗು ಜುಲೈ ತಿಂಗಳಗಳು ಬಿಎಸ್ ವೈ ಅವರ ರಾಜಕೀಯ ಜೀವದಲ್ಲಿ ಬಹಳ ಮುಖ್ಯ ಪಾತ್ರ ವಹಿಸಿವೆ.
2008 ಮೇನಲ್ಲಿ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. 2011ಜುಲೈ 31 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2018 ಮೇ 17 ರಿಂದ ಮೇ 19 ವರೆಗೆ 2 ದಿನ ಮಾತ್ರ ಸಿಎಂ ಆಗಿದ್ದರು
ಅದರಂತೆ 2019 ಜುಲೈ 26 ರಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಈಗ ಪುನಃ ಇದೇ ಜೂನ್ ತಿಂಗಳು ರಾಜಕೀಯವಾಗಿ ಕಾಡಲು ಶುರು ಮಾಡಿದೆ.