Asianet Suvarna News Asianet Suvarna News

2 ತಿಂಗಳಿಗೊಮ್ಮೆ ಇನ್ನು ಸಂಸದರ ಸಭೆ: ಸಿಎಂ ಯಡಿಯೂರಪ್ಪ

ಬಿಜೆಪಿ ಸಂಸದರ ಸಭೆಯಲ್ಲಿ ಯಡಿಯೂರಪ್ಪ ನಿರ್ಧಾರ| ಕೇಂದ್ರದಿಂದ ಹೆಚ್ಚು ನೆರವಿಗೆ ಯತ್ನಿಸಲು ಸಂಸದರಿಗೆ ಮನವಿ| ಬೆಂಗಳೂರಿನ ಸಂಸದರು ಸೇರಿದಂತೆ 10 ಜನರು ಗೈರು| 

CM BS Yediyurappa Says Meeting of MP Once Every 2 Months grg
Author
Bengaluru, First Published Nov 28, 2020, 10:54 AM IST

ಬೆಂಗಳೂರು(ನ.28): ರಾಜ್ಯದ ವಿವಿಧ ಜಿಲ್ಲೆಗಳ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಪ್ರಗತಿ ವೇಗ ಹೆಚ್ಚಿಸಲು ರಾಜ್ಯದ ಸಂಸತ್‌ ಸದಸ್ಯರೊಂದಿಗೆ ಎರಡು ತಿಂಗಳಿಗೊಮ್ಮೆ ಸಭೆ ನಡೆಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿರ್ಧರಿಸಿದ್ದಾರೆ.

"

ರಾಜ್ಯದ ಸಂಸದರೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಭರವಸೆ ನೀಡಿದ ಅವರು, ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿ (ಸಂಸದರ ನಿಧಿ)ಮುಂದುವರೆಸಲು ಪ್ರಯತ್ನಿಸುವುದಾಗಿ ಹೇಳಿದರು. ಕೇಂದ್ರ ಹಣಕಾಸು, ಗೃಹ ಮತ್ತಿತರ ಸಚಿವರನ್ನು ನಿಯೋಗಗಳಲ್ಲಿ ಭೇಟಿ ಮಾಡಿ ಕೇಂದ್ರದಿಂದ ಇನ್ನೂ ಹೆಚ್ಚಿನ ಹಣಕಾಸು ನೆರವು ಪಡೆದುಕೊಂಡರೆ ಅಭಿವೃದ್ಧಿ ಕಾರ್ಯಗಳಿಗೆ ಒತ್ತಾಸೆ ದೊರೆಯುತ್ತದೆ ಎಂದು ಅವರು ಸಂಸದರಿಗೆ ವಿವರಿಸಿದರು. ಅಲ್ಲದೆ, ರಾಜ್ಯದಲ್ಲಿ ಜಲಮೂಲಗಳು ಲಭ್ಯವಿರುವಲ್ಲಿ ಕೆರೆಗಳನ್ನು ತುಂಬಿಸುವ ಕಾರ್ಯ ಕೈಗೆತ್ತಿಕೊಳ್ಳಲು ಮುಂದಿನ ಬಜೆಟ್‌ನಲ್ಲಿ ಅಗತ್ಯ ಅನುದಾನ ಮೀಸಲಿಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ಸಂಸದರ ಸಲಹೆ ಮತ್ತು ಮನವಿ:

ರಾಜ್ಯದಲ್ಲಿ ಈ ಬಾರಿ ಮೆಕ್ಕೆ ಜೋಳ ಮತ್ತು ಭತ್ತದ ಇಳುವರಿ ಹೆಚ್ಚಾಗಿದೆ. ಬೆಲೆ ಕುಸಿತ ತಡೆಯಲು ಮಾರುಕಟ್ಟೆಮಧ್ಯಪ್ರವೇಶ ಮಾಡಿ ಬೆಂಬಲ ಬೆಲೆ ನೀಡಬೇಕು. ಸಂಸದರ ನಿಧಿ ಅಡಿಯಲ್ಲಿ ಒಬ್ಬ ಸಂಸದರಿಗೆ ಕನಿಷ್ಠ 3 ಕೋಟಿ ರು. ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿಯನ್ನು ಒದಗಿಸಬೇಕು. ಕಲಬುರಗಿ ಇಎಸ್‌ಐ ಆಸ್ಪತ್ರೆಯ ಉನ್ನತೀಕರಣಕ್ಕೆ 860 ಎಕರೆ ಜಮೀನು ಲಭ್ಯವಿದೆ. 150 ಎಕೆರೆ ಪ್ರದೇಶದಲ್ಲಿ ಪ್ರಯೋಗಾಲಯ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ರಾಜ್ಯ ಸರ್ಕಾರ ಅಗತ್ಯ ಅನುಮತಿಗಳನ್ನು ನೀಡಬೇಕು. ಕೂಡ್ಲಿಗಿ ಮತ್ತು ಸಂಡೂರು ತಾಲ್ಲೂಕುಗಳ ಕೆರೆಗಳಿಗೆ ತುಂಗಭದ್ರಾ ಜಲಾಶಯದಿಂದ ನೀರು ತುಂಬಿಸಬೇಕು.

ನಿಮ್ಮನ್ನ ನಂಬಿದ್ರೆ ಏನೂ ಸಿಗಲ್ಲ! ಕೈ ಕೊಟ್ಟು ಬಂದ ವಲಸಿಗ ಶಾಸಕರಲ್ಲಿ ಅತೃಪ್ತಿ ಸ್ಫೋಟ!

ಹೊಸಪೇಟೆ ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಾರ್ಯ ಪುನರ್‌ ಪ್ರಾರಂಭಿಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಬೇಕು. ಸಮುದ್ರಕ್ಕೆ ಹರಿಯುವ ನೀರನ್ನು ಕುಡಿಯುವುದು ಮತ್ತು ನೀರಾವರಿ ಯೋಜನೆಗೆ ಬಳಸಲು ವಿಸುತ್ರತ ಯೋಜನಾ ವರದಿ ಸಿದ್ಧಪಡಿಸಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು.

ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ ಕೆಐಎಡಿಬಿಯಿಂದ ಭೂ ಸ್ವಾಧೀನ ಪ್ರಕ್ರಿಯೆಗೆ ಅಗತ್ಯವಿರುವ 50 ಕೋಟಿ ರು.ಗಳನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಪ್ರಧಾನ ಮಂತ್ರಿಗಳ ‘ನಲ್‌ ಸೇ ಜಲ್‌’ ಯೋಜನೆಯ ಲಾಭ ಪಡೆದುಕೊಂಡು ಜಲ ಜೀವನ ಮಿಷನ್‌ ಯೋಜನೆ ರಾಜ್ಯದಲ್ಲಿ ಪರಿಣಾಮಕಾರಿ ಜಾರಿ ಮಾಡಬೇಕು.

ವಸತಿ ಯೋಜನೆಗಳಲ್ಲಿ ಕೇಂದ್ರ ಸರ್ಕಾರದ 700 ಕೋಟಿ ರು.ಗಳು ಲಭ್ಯವಿದ್ದು, ಬಳಕೆ ಪ್ರಮಾಣ ಪತ್ರ ನೀಡಿ, ರಾಜ್ಯಕ್ಕೆ ಬರಬೇಕಿರುವ ಎರಡನೇ ಕಂತನ್ನು ಬಿಡುಗಡೆ ಮಾಡಿಸಬೇಕು. ಆ ಮೂಲಕ ರಾಜೀವ್‌ಗಾಂಧಿ ವಸತಿ ಯೋಜನೆ ಮೂಲಕ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಗ್ರಾಮೀಣ ಭಾಗಗಳಲ್ಲಿ ವಸತಿ ಯೋಜನೆಗಳನ್ನು ಹೆಚ್ಚು ಅನುಷ್ಠಾನಗೊಳಿಸಬೇಕು. ಚಿತ್ರದುರ್ಗ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧಪಡಿಸಿ ಶೀಘ್ರ ಅನುಮೋದನೆ ನೀಡಬೇಕು.

ತುಮಕೂರು-ದಾವಣಗೆರೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಮುಂದಿನ ಆಯವ್ಯಯದಲ್ಲಿ ಅನುದಾನ ನೀಡಬೇಕು. ಕಾಡುಗೊಲ್ಲ ಅಭಿವೃದ್ಧಿ ನಿಗಮ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕಾತಿಗೆ ಕ್ರಮ ಕೈಗೊಳ್ಳಬೇಕು.
ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಾಕಿ ಕಾಮಗಾರಿಗಳ ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಮೂಡಾ ,ಟೂಡಾ ಇತ್ಯಾದಿ ಜಿಲ್ಲಾಭಿವೃದ್ಧಿ ಪ್ರಾಧಿಕಾರಗಳಿಗೆ ಸಂಸದರನ್ನು ಸದಸ್ಯರನ್ನಾಗಿ ಮಾಡಿ ಅಭಿವೃದ್ಧಿ ಕಾರ್ಯಗಹಳಿಗೆ ವೇಗ ನೀಡಬೇಕು. ಸಿಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಕುರ್ಕುಂಟಾ ಸಿಮೆಂಟ್‌ ಕಾರ್ಖಾನೆ ಸ್ಥಗಿತಗೊಂಡಿದ್ದು, ಪುನಶ್ಚೇತನಕ್ಕೆ ಕ್ರಮ ಕೈಗೊಂಡು ಹೆಚ್ಚಿನ ಉದ್ಯೋಗಾವಕಾಶ ಒದಗಿಸಬೇಕು. ಕೊಪ್ಪಳ ಜಿಲ್ಲೆಯಲ್ಲಿ ಟಾಯ್‌ ಕ್ಲಸ್ಟರ್‌ ಜಾರಿಯಲ್ಲಿರುವುದರಿಂದ, ಕೊಪ್ಪಳ ವಿಮಾನ ನಿಲ್ದಾಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು.

ರಾಯಚೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ ಉಳಿದ ಅನುದಾನವನ್ನು ರಾಜ್ಯ ಸರ್ಕಾರ ಒದಗಿಸಬೇಕು. ರಾಯಚೂರಿನ ಫಾರ್ಮಾ ಪಾರ್ಕ್ ಅಭಿವೃದ್ಧಿಗೆ 3,000 ಎಕೆರೆ ಲಭ್ಯವಿದ್ದು, ಈ ಪೈಕಿ 1,000 ಎಕರೆ ಮೀಸಲಿರಿಸಿ, ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಮೆಕ್ಕೆಜೋಳ ವಿತರಣೆಗೆ ಕ್ರಮ ಕೈಗೊಂಡು ಬೆಂಬಲ ಬೆಲೆ ನೀಡಬೇಕು. ತುಮಕೂರಿನ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಗೆ ಅಗತ್ಯವಿರುವ 6,000 ಎಕರೆ ಭೂಮಿ ನೀಡಲು ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಸಂಸದರು ಸಲಹೆ ನೀಡಿದರು.

10 ಸಂಸದರು ಗೈರು

ಪಕ್ಷದ ಕಾರ್ಯ ಹಾಗೂ ಈಗಾಗಲೇ ಪೂರ್ವ ನಿಗದಿ ಕಾರ್ಯಕ್ರಮಗಳಿದ್ದ ಕಾರಣ ಬೆಂಗಳೂರಿನ ಸಂಸದರು ಸೇರಿದಂತೆ 10 ಜನರು ಗೈರು ಹಾಜರಾಗಿದ್ದರು. ಡಿ.ವಿ.ಸದಾನಂದಗೌಡ ಹಾಗೂ ಪ್ರಹ್ಲಾದ್‌ ಜೋಶಿ, ನಳಿನ್‌ಕುಮಾರ್‌ ಕಟೀಲ್‌, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಪಿ.ಸಿ. ಮೋಹನ್‌, ಅನಂತಕುಮಾರ್‌ ಹೆಗಡೆ, ಅಣ್ನಾಸಾಹೇಬ್‌ ಜೊಲ್ಲೆ ಹಾಗೂ ರಾಜ್ಯಸಭಾ ಸದಸ್ಯರಾದ ನಿರ್ಮಲಾ ಸೀತಾರಾಮನ್‌, ಈರಣ್ಣ ಕಡಾಡಿ ಸಭೆಗೆ ಬಂದಿರಲಿಲ್ಲ.
 

Follow Us:
Download App:
  • android
  • ios