ಬೆಂಗಳೂರು, (ಸೆ.28): ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.

ಕೃಷಿ ತಿದ್ದುಪಡಿ ವಿರೋಧಿಸಿ ಬಂದ್‌ಗೆ ಕರೆ ನೀಡಿದ್ದರಿಂದ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಿಎಸ್‌ವೈ, ಮೂರು ದಿನದಲ್ಲಿ ದೆಹಲಿಗೆ ಹೋಗುತ್ತೇನೆ. ಅಲ್ಲಿಂದ ಬಂದ ಕೂಡಲೇ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಹೇಳಿದರು.

ಸಿ. ಟಿ. ರವಿ ರಾಜೀನಾಮೆ ಸಂಭವ ಮತ್ತೆ ಸಂಪುಟ ಕಸರತ್ತು ಶುರು!

ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಅವರು ದೆಹಲಿ ತೆರಳಿ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರನ್ನ ಭೇಟಿ ಮಾಡಿ ಮಾತುಕತೆ ಮಾಡಿ ಬಂದಿದ್ದಾರೆ. ಆದ್ರೆ, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಜತೆ ಚರ್ಚಿಸಿ ಹೇಳುವುದಗಿ ನಡ್ಡಾ ತಿಳಿಸಿದ್ದಾರೆ.

ಹೈಕಮಾಂಡ್ ಸಂಪುಟ ವಿಸ್ತರಣೆ ಬದಲಾಗಿ ಸಂಪುಟ ಪುನಾರಚನೆ ಬಗ್ಗೆ ಚಿಂತನೆ ನಡೆಸಿದ್ದು, ಈಗಾಗಲೇ ಬಿಎಸ್‌ ವೈ ಸಂಪುಟ ಕೆಲ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕೊಡುವ ಪ್ಲಾನ್ ಹೈಕಮಾಂಡ್‌ ಮಾಡಿದೆ.

ವಿಧಾನಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಅವರಿಗೆ ಮಂತ್ರಿಗಿರಿ ಫಿಕ್ಸ್ ಎನ್ನಲಾಗಿದ್ದು, ಸಿ.ಟಿ ರವಿ ಶಶಿಕಲಾ ಜೊಲ್ಲೆ, ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಇನ್ನು ಕೆಲವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಚರ್ಚೆಗಳು ನಡೆದಿವೆ.

ಒಟ್ಟಿನಲ್ಲಿ ಅಕ್ಟೋಬರ್‌ನಲ್ಲಿ ಸಂಪುಟ ಸರ್ಕಸ್ ಶುರುವಾಗಲಿದ್ದು, ಯಾರಿಗೆ ಮಂತ್ರಿಗಿರಿ ಸಿಗುತ್ತೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.