Asianet Suvarna News Asianet Suvarna News

ಸಿ. ಟಿ. ರವಿ ರಾಜೀನಾಮೆ ಸಂಭವ ಮತ್ತೆ ಸಂಪುಟ ಕಸರತ್ತು ಶುರು!

ಮತ್ತೆ ಸಂಪುಟ ಕಸರತ್ತು ಶುರು| ಸಿ.ಟಿ.ರವಿಗೆ ಕೊಕ್‌ ಸಂಭವ| ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ| ಹೀಗಾಗಿ ಸಚಿವ ಸ್ಥಾನಕ್ಕೆ ರವಿ ರಾಜೀನಾಮೆ ಸಂಭವ| ಪುನಾಚರಣೆ ಬದಲು ವಿಸ್ತರಣೆಗೆ ಬಿಎಸ್‌ವೈ ಒಲವು

Cm BS Yediyurappa May Expand The Cabinet Of Karnataka pod
Author
Bangalore, First Published Sep 27, 2020, 9:58 AM IST

ಬೆಂಗಳೂರು(ಸೆ.27): ವಿಧಾನಮಂಡಲದ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿಯಲ್ಲಿ ಸಚಿವ ಸಂಪುಟ ಕಸರತ್ತಿನ ಬಗ್ಗೆ ಚರ್ಚೆ ಆರಂಭವಾಗಿದ್ದು, ಸಂಪುಟ ವಿಸ್ತರಣೆ ಬದಲು ಪುನಾರಚನೆ ಕೈಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ.

ಹಾಲಿ ಪ್ರವಾಸೋದ್ಯಮ ಸಚಿವರಾಗಿರುವ ಸಿ.ಟಿ.ರವಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ಪಕ್ಷದ ನಿಲವಿನ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ. ಆ ಬಳಿಕ ಸಂಪುಟ ವಿಸ್ತರಣೆ ಬದಲು ಪುನಾರಚನೆಯನ್ನೇ ಕೈಗೊಳ್ಳುವ ಮೂಲಕ ಕೆಲವೊಂದು ಬದಲಾವಣೆ ಮಾಡುವ ನಿರೀಕ್ಷೆಯಿದೆ.

ಕೆಲವು ಸಚಿವರನ್ನು ಕೈಬಿಡಬಹುದು ಹಾಗೂ ಕೆಲವರ ಖಾತೆಗಳಲ್ಲಿ ಬದಲಾವಣೆ ಮಾಡಬಹುದು. ವಿಸ್ತರಣೆಗಿಂತ ಪುನಾರಚನೆ ಮಾಡುವ ಬಗ್ಗೆಯೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಒಲವು ಹೊಂದಿದ್ದು, ಪಕ್ಷದ ಹೈಕಮಾಂಡ್‌ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಸಂಭವವಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಬರುವ ಅಕ್ಟೋಬರ್‌ ಮೊದಲ ವಾರದಲ್ಲಿ ಸಂಪುಟ ಕಸರತ್ತು ನಡೆಯಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.

ಈಗಾಗಲೇ ಅಧಿವೇಶನಕ್ಕೂ ಮೊದಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ಆ ವೇಳೆ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಇದೀಗ ಅಮಿತ್‌ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಸದ್ಯ ಸಂಪುಟದಲ್ಲಿ ಆರು ಸ್ಥಾನಗಳು ಖಾಲಿ ಇವೆ. ಅನ್ಯ ಪಕ್ಷಗಳಿಂದ ವಲಸೆ ಬಂದು ವಿಧಾನಪರಿಷತ್‌ ಸದಸ್ಯರಾಗಿರುವ ಎಂ.ಟಿ.ಬಿ.ನಾಗರಾಜ್‌, ಆರ್‌.ಶಂಕರ್‌ ಹಾಗೂ ಎಚ್‌.ವಿಶ್ವನಾಥ್‌ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ನಾಗರಾಜ್‌ ಮತ್ತು ಶಂಕರ್‌ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ನಿಶ್ಚಿತವಾಗಿದೆ. ರಾಜರಾಜೇಶ್ವರಿನಗರ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಬಾಕಿ ಇರುವುದರಿಂದ ಬಿಜೆಪಿಗೆ ವಲಸೆ ಬಂದಿರುವ ಆ ಕ್ಷೇತ್ರಗಳ ಮಾಜಿ ಶಾಸಕರಿಗಾಗಿ ಎರಡು ಸಚಿವ ಸ್ಥಾನಗಳನ್ನು ಕಾದಿರಿಸಬೇಕಾಗಿದೆ. ಈ ನಡುವೆ ಪಕ್ಷದಲ್ಲಿ ಕೆಲವು ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಅದಕ್ಕಾಗಿ ಲಾಬಿ, ಒತ್ತಡ ತಂತ್ರವನ್ನೂ ಅನುಸರಿಸುತ್ತಿದ್ದಾರೆ.

ಹೀಗಾಗಿ, ವಿಸ್ತರಣೆ ಮಾಡುವ ಮೊದಲು ಕೆಲವರನ್ನು ಕೈಬಿಟ್ಟು ಪುನಾರಚನೆಯನ್ನು ಕೈಗೆತ್ತಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳೂ ಒಲವು ಹೊಂದಿದ್ದಾರೆ. ಈ ಮೂಲಕ ಜಾತಿ ಸಮೀಕರಣ ಮತ್ತು ಪ್ರಾದೇಶಿಕ ಪ್ರಾತಿನಿಧ್ಯದಲ್ಲಿ ಆಗಿದೆ ಎನ್ನಲಾದ ತಾರತಮ್ಯವನ್ನು ನಿವಾರಿಸಬೇಕು ಎಂಬ ಬಯಕೆ ಇಟ್ಟುಕೊಂಡಿದ್ದಾರೆ. ಆದರೆ, ಎಲ್ಲವೂ ಹೈಕಮಾಂಡ್‌ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವರಿಷ್ಠರ ನಡುವಿನ ಮಾತುಕತೆ ಯಶಸ್ವಿಯಾದಲ್ಲಿ ಅಕ್ಟೋಬರ್‌ ಮೊದಲ ವಾರದ ವೇಳೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆಯುವ ಸಾಧ್ಯತೆಯಿದೆ.

Follow Us:
Download App:
  • android
  • ios