* ಅಶೋಕ್‌, ಸವದಿ ಅವರನ್ನು ಹಾಸ್ಯದ ಮಾತಿನಲ್ಲೇ ಕೆಣಕಿದ ಯಡಿಯೂರಪ್ಪ* ನಗುತ್ತಲೇ ಹೊರ ನಡೆದ ಇಬ್ಬರೂ ಸಚಿವರು* ಕೆಲಸ ಕಾರ್ಯಗಳ ಮಧ್ಯೆ ಕೊಂಚ ಜಾಲಿಮೂಡ್‌ನಲ್ಲಿದ್ದ ಸಿಎಂ 

ಬೆಂಗಳೂರು(ಜೂ.20): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶನಿವಾರ ಎಂದಿನ ಸಭೆ, ಕೆಲಸ ಕಾರ್ಯಗಳ ನಡುವೆಯೂ ಕೊಂಚ ಜಾಲಿಮೂಡ್‌ನಲ್ಲಿದ್ದದ್ದು ಕಂಡುಬಂತು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆ ಬಳಿಕ ಸಚಿವರಾದ ಆರ್‌.ಅಶೋಕ್‌, ಲಕ್ಷ್ಮಣ ಸವದಿ ಅವರನ್ನು ಹಾಸ್ಯದ ಮಾತಿನಲ್ಲೇ ಕೆಣಕಿದ ಘಟನೆಯೂ ನಡೆದಿದೆ. 

ಪ್ರವಾಹ ಪರಿಸ್ಥಿತಿ ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಹೊರಬಂದ ಮುಖ್ಯಮಂತ್ರಿ ಅವರು, ಕಂದಾಯ ಸಚಿವ ಆರ್‌.ಅಶೋಕ್‌ ಸಭೆ ಮುಗಿಸಿ ಹೊರಡುತ್ತಿರುವುದನ್ನು ಕಂಡು ‘ಅಶೋಕ್‌ ಎಲ್ಲಿಗೆ ಹೋಗ್ತಾ ಇದ್ದೀರಾ?’ ಎಂದರು. ಅದಕ್ಕೆ, ಅಶೋಕ್‌ ಅವರು ಲಾಯರ್‌ ನೋಡಬೇಕು ಸರ್‌, ಮನೆಗೆ ಹೋಗುತ್ತಿದ್ದೇನೆ ಎಂದರು. ಆಗ ಮುಖ್ಯಮಂತ್ರಿಗಳು ‘ಏನು, ನಿನ್ನ ಮೇಲೆ ಕೇಸ್‌ ಹಾಕಿದ್ದಾರಾ?’ ಎಂದು ಕೇಳಿದರು.

ರಾಜ್ಯದಲ್ಲಿ ಲೂಟಿಕೋರರ ಆಡಳಿತ, ಜಿದ್ದಿಗೆ ಬಿದ್ದವರಂತೆ ಪೈಪೋಟಿಯಿಂದ ಭ್ರಷ್ಟಾಚಾರ: ಸಿದ್ದು ಗುದ್ದು

ಇದಕ್ಕೆ ನಗುತ್ತಲೇ ಉತ್ತರಿಸಿದ ಸಚಿವ ಅಶೋಕ್‌, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದಾರಿ ತಪ್ಪುತ್ತಿದ್ದಾರೆ. ಅವರ ಮೇಲೆ ಕೇಸ್‌ ಹಾಕಬೇಕು ಎಂದರು. ಆಗಲೂ ನಗುತ್ತಲೇ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಅವರು, ‘ಲಕ್ಷ್ಮಣ ಸವದಿ ನಿನ್ನ ಸ್ನೇಹಿತ, ಸ್ನೇಹಿತನ ರಕ್ಷಣೆ ಮಾಡೋದು ನಿನ್ನ ಕೆಲಸ ಅಲ್ವಾ, ಮಾಡು’ ಎಂದರು. ಬಳಿಕ ಇಬ್ಬರೂ ಸಚಿವರು ನಗುತ್ತಲೇ ಹೊರ ನಡೆದರು.