ಬೆಂಗಳೂರು(ನ.03):  ಅನರ್ಹ ಶಾಸಕರು ಮುಂಬೈನಲ್ಲಿ ಇದ್ದದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಎಲ್ಲರಿಗೂ ಗೊತ್ತಿತ್ತು ಎಂಬುದನ್ನು ಮಾತ್ರ ಹೇಳಿದ್ದೇನೆಯೇ ಹೊರತು ಬೇರೆ ಏನನ್ನೂ ಹೇಳಿಲ್ಲ. ಅನಗತ್ಯವಾಗಿ ಅವರ ಹೆಸರು ಎಳೆಯಬಾರದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಕಳೆದ ವಾರ ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಆಡಿದ್ದರು ಎನ್ನಲಾದ ಧ್ವನಿಸುರುಳಿ ಬಿಡುಗಡೆಯಾಗಿರುವ ಬಗ್ಗೆ ಅವರು ಈ ಸಮಜಾಯಿಷಿ ಕೊಟ್ಟಿದ್ದಾರೆ.

ಇನ್ನೂರಕ್ಕೂ ಹೆಚ್ಚು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಬೆಂಗಳೂರಿನಲ್ಲೂ ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲೂ ಸಭೆ ನಡೆಸಿದ್ದೆ. ಆದರೆ ಹುಬ್ಬಳ್ಳಿಯಲ್ಲಿ ಒಂದು ಕ್ಷೇತ್ರದ ಬಗ್ಗೆ ಮಾತ್ರ ಮಾತನಾಡಿದ್ದು, ಸಮಾಧಾನ ಆಗಿರಲಿಲ್ಲ. ಹೀಗಾಗಿ ನನ್ನದೇ ಆದ ಭಾಷೆಯಲ್ಲಿ ಉತ್ತರ ಕೊಟ್ಟು, ಇದು ಸರಿಯಲ್ಲ ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದರು.

ಅನರ್ಹ ಶಾಸಕರು ರಾಜೀನಾಮೆ ಸಲ್ಲಿಸಿದ್ದರಿಂದ ನಾವು ಆಡಳಿತಕ್ಕೆ ಬರಲು ಸಾಧ್ಯವಾಗಿದೆ. ಎರಡೂವರೆ ತಿಂಗಳು ಅನರ್ಹ ಶಾಸಕರು ಮುಂಬೈ ಮತ್ತು ದೆಹಲಿಯಲ್ಲಿ ಕುಟುಂಬ ಬಿಟ್ಟು ದೂರ ಇದ್ದರು. ಇದರಲ್ಲಿ ನಿಜಾಂಶ ಇದೆ. ಅನರ್ಹರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಅಲ್ಲ. ಮೈತ್ರಿ ಸರ್ಕಾರ ಮುಂದುವರೆಯಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದರು. ಅನರ್ಹ ಶಾಸಕರು ಹಿಂದೆ ಅವರ ಕ್ಷೇತ್ರಕ್ಕೆ ಬೇಕಾದ ಅನುದಾನ ಕೇಳಿದ್ದರು. ಅದರಲ್ಲಿ ತಪ್ಪೇನಿದೆ? ನಮ್ಮ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹಣ ನೀಡಲಾಗುತ್ತಿದೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಅಮಿತ್ ಶಾ, ಬಿಎಸ್‌ವೈ ರಾಜೀನಾಮೆಗೆ ಆಗ್ರಹ...

ಅಮಿತ್‌ ಶಾ ನೇತೃತ್ವದಲ್ಲೇ ನಡೆಯಿತು ಎಂಬುದನ್ನು ನಾನು ಹೇಳಿಲ್ಲ. ಮುಂಬೈನಲ್ಲಿ ಇದ್ದದ್ದು ಅಮಿತ್‌ ಶಾ ಸೇರಿದಂತೆ ಎಲ್ಲರಿಗೂ ಗೊತ್ತಿತ್ತು ಎಂಬುದನ್ನು ಮಾತ್ರ ಹೇಳಿದ್ದೇನೆಯೇ ಹೊರತು ಬೇರೆ ಏನನ್ನೂ ಹೇಳಿಲ್ಲ. ಅನಗತ್ಯವಾಗಿ ಅವರ ಹೆಸರು ಎಳೆಯಬಾರದು. ಸಿದ್ದರಾಮಯ್ಯನಿಗೆ ಅಧಿಕಾರ ಬೇಕಾಗಿದೆ. ಏನೇನೋ ಹೇಳುತ್ತಾರೆ ಎಂದು ಹರಿಹಾಯ್ದರು.

ಕಾಂಗ್ರೆಸ್‌ ಪಕ್ಷ ಈ ಬಗ್ಗೆ ಸುಪ್ರೀಂಕೋರ್ಟ್‌ನ ಮೊರೆ ಹೋಗುವುದಾಗಿ ಹೇಳಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಬೇರೆ ಏನೂ ಇಲ್ಲವಲ್ಲ. ಹಾಗಾಗಿ ಸುಪ್ರೀಂಕೋರ್ಟ್‌ಗೆ ಹೋಗುವುದಾಗಿ ಹೇಳಿರಬಹುದು ಎಂದು ವ್ಯಂಗ್ಯವಾಗಿ ತಿಳಿಸಿದರು.