ಬೆಂಗಳೂರು [ನ.03]:  ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 17 ಶಾಸಕರ ರಾಜೀನಾಮೆ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬೆಳಗಾವಿಯಲ್ಲಿ ಪಕ್ಷದ ಮುಖಂಡರ ಸಭೆಯಲ್ಲಿ ಆಡಿರುವ ಮಾತು ಪ್ರತಿಪಕ್ಷ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಕ್ಕೆ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.

ಯಡಿಯೂರಪ್ಪ ಅವರ ಮಾತಿನ ಆಡಿಯೋವನ್ನು ಮುಂದಿಟ್ಟುಕೊಂಡು ಕಾನೂನು ಹೋರಾಟದ ಜತೆಗೆ ರಾಜಕೀಯವಾಗಿ ಬಿಜೆಪಿಯನ್ನು ಎದುರಿಸಲು ಉಭಯ ಪಕ್ಷಗಳು ಮುಂದಾಗಿದೆ. ಪ್ರಮುಖವಾಗಿ ಸುಪ್ರೀಂಕೋರ್ಟ್‌ನಲ್ಲಿ ಅನರ್ಹಗೊಂಡಿರುವ ಶಾಸಕರ ಪ್ರಕರಣದ ವಿಚಾರಣೆಗೆ ಪೂರಕವಾಗಿ ಈ ಆಡಿಯೋವನ್ನು ಬಳಸಿಕೊಳ್ಳಲು ಜೆಡಿಎಸ್‌ ನಿರ್ಧರಿಸಿದ್ದರೆ, ಕಾಂಗ್ರೆಸ್‌ ಪಕ್ಷ ಅನರ್ಹ ಶಾಸಕರ ಪ್ರಕರಣ ಇತ್ಯರ್ಥಕ್ಕೂ ಮುನ್ನ ಈ ಆಡಿಯೋ ಬಗ್ಗೆ ಸಮಗ್ರ ತನಿಖೆ ಮಾಡುವಂತೆ ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಉದ್ದೇಶಿದೆ.

ಇದರ ಜೊತೆಗೆ ಆಡಿಯೋ ಮುಂದಿಟ್ಟುಕೊಂಡು ರಾಜ್ಯದ ಜೊತೆಗೆ ರಾಷ್ಟ್ರ ಮಟ್ಟದಲ್ಲಿ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಪಾತ್ರವಿದೆ ಎಂಬುದನ್ನು ತಿಳಿಸಲು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲು ಕಾಂಗ್ರೆಸ್‌ ಮುಂದಾಗಿದೆ. ಖುದ್ದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಶೀಘ್ರದಲ್ಲೇ ರಾಷ್ಟ್ರಪತಿಗಳನ್ನು ಭೇಟಿ ಮಾಡಿ, ಸಂವಿಧಾನಬಾಹಿರವಾಗಿ ನಡೆದುಕೊಂಡಿರುವ ರಾಜ್ಯ ಸರ್ಕಾರ ವಜಾ ಮಾಡಬೇಕು ಎಂದು ಮನವಿ ಸಲ್ಲಿಸಲು ಉದ್ದೇಶಿಸಲಾಗಿದೆ.

ರಾಜೀನಾಮೆಗೆ ಆಗ್ರಹ:

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮೈತ್ರಿ ಪಕ್ಷಗಳ 17 ಜನ ಶಾಸಕರ ರಾಜೀನಾಮೆಗೂ ಬಿಜೆಪಿಗೂ ಸಂಬಂಧವೇ ಇಲ್ಲ ಎಂದು ಹೇಳಿಕೊಂಡು ಬಂದಿದ್ದ ಯಡಿಯೂರಪ್ಪ ಹಾಗೂ ಇತರೆ ಬಿಜೆಪಿ ನಾಯಕರ ಬಣ್ಣ ಈಗ ಸೋರಿಕೆಯಾಗಿರುವ ಆಡಿಯೋದಲ್ಲಿ ಬಯಲಾಗಿದೆ. ಆಪರೇಷನ್‌ ಕಮಲ ಅಮಿತ್‌ ಶಾ ಅವರ ತೀರ್ಮಾನ. ಅವರ ನಿರ್ದೇಶನದಂತೆಯೇ ನಡೆದಿದೆ. ರಾಜೀನಾಮೆ ನೀಡಿದ ಶಾಸಕರನ್ನು ಎರಡೂವರೆ ತಿಂಗಳು ದೆಹಲಿ ಹೋಟೆಲ್‌ನಲ್ಲಿಟ್ಟು ನೋಡಿಕೊಂಡವರು ಅಮಿತ್‌ ಶಾ ಅವರೇ ಎಂದು ಯಡಿಯೂರಪ್ಪ ಹೇಳಿರುವುದು ಆಡಿಯೋದಲ್ಲಿ ಬಯಲಾಗಿದೆ. ನಮ್ಮ ಪಕ್ಷದ ಶಾಸಕರಿಗೆ ಆಮಿಷಗಳನ್ನು ಒಡ್ಡಿ ರಾಜೀನಾಮೆ ಕೊಡಿಸಿ ಮೈತ್ರಿ ಸರ್ಕಾರ ಪತನಕ್ಕೆ ಅಮಿತ್‌ ಶಾ ಮತ್ತು ಯಡಿಯೂರಪ್ಪ ನೇರ ಕಾರಣರಾಗಿದ್ದಾರೆ. ಹಾಗಾಗಿ ಇಬ್ಬರೂ ತಮ್ಮ ಸ್ಥಾನಗಳಿಗೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಿಎಸ್ ವೈ-ಅಮಿತ್ ಶಾ ಆಡಿಯೋ ಲೀಕ್, ಕಾನೂನು ಸಮರಕ್ಕಿಳಿದ ಕಾಂಗ್ರೆಸ್...

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ಶಾಸಕರು ರಾಜೀನಾಮೆ ನೀಡಿ ಸರ್ಕಾರ ಉರುಳಿಸಿದ್ದು ಪಕ್ಷಾಂತರ ಕಾಯ್ದೆ ಶೆಡ್ಯೂಲ್‌ 10ರ ಸ್ಪಷ್ಟವಾದ ಉಲ್ಲಂಘನೆಯಾಗಿದೆ. ಹಣ-ಅಧಿಕಾರದ ಆಮಿಷ ಕೊಟ್ಟು ಶಾಸಕರನ್ನು ಬಿಜೆಪಿಯವರು ಸೆಳೆದಿದ್ದು ಸಂವಿಧಾನ ಬಾಹಿರ ಕ್ರಮವಾಗಿದೆ. ಯಡಿಯೂರ ಅವರ ಧ್ವನಿಯ ಆಡಿಯೋ ಸಾಕ್ಷೀಕರಿಸುತ್ತದೆ ಎಂದರು.

ರಾಜ್ಯಪಾಲರಿಗೆ ಮನವಿ:

ಆಡಿಯೋ ಬಹಿರಂಗ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ವಜಾ ಮಾಡುವಂತೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪ್ರಜಾಪ್ರಭುತ್ವ ಬುಡಮೇಲು ಮಾಡಲು ಹೊರಟಿರುವ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು. ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿರುವ ಅನರ್ಹ ಶಾಸಕರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಈ ಸಂಬಂಧ ದೆಹಲಿಯಲ್ಲಿ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಕೂಡ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ ಎಂದು ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ಮನವಿ ಸಲ್ಲಿಕೆ ನಂತರ ತಿಳಿಸಿದರು.

ಪ್ರಮಾಣ ಪತ್ರ ಸಲ್ಲಿಕೆ-ಎಚ್‌ಡಿಕೆ:

ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪಾತ್ರದ ಬಗ್ಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನೀಡಿರುವ ಹೇಳಿಕೆಯ ವಿಡಿಯೋ ಬಹಿರಂಗವಾಗಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರತ್ಯೇಕ ಪ್ರಮಾಣ ಪತ್ರ ಸಲ್ಲಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಈಗಾಗಲೇ ಅನರ್ಹ ಶಾಸಕರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಯಡಿಯೂರಪ್ಪ ಅವರು ನೀಡಿರುವ ಹೇಳಿಕೆಯ ವಿಡಿಯೋ ಬಗ್ಗೆ ನ್ಯಾಯಾಲಯದಲ್ಲಿ ಪ್ರತ್ಯೇಕ ಪ್ರಮಾಣ ಪತ್ರ ಸಲ್ಲಿಸಲಾಗುವುದು. ಇದಕ್ಕಾಗಿ ಸಿದ್ದತೆ ಕೂಡ ನಡೆಸಲಾಗುತ್ತಿದೆ. ವಿಡಿಯೋ ಬಗ್ಗೆ ತನಿಖೆಗೆ ಒತ್ತಾಯಿಸುವುದಿಲ್ಲ. ದೇಶದಲ್ಲಿ ಸಂವಿಧಾನಿಕ ಸಂಸ್ಥೆಗಳು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿವೆ ಎಂಬುದು ಗೊತ್ತಿದೆ. ಹೀಗಾಗಿ ತನಿಖೆಗೆ ಒತ್ತಾಯಿಸುವುದಿಲ್ಲ ಎಂದರು.