Asianet Suvarna News Asianet Suvarna News

ಶಾಸಕರ ಸಮಸ್ಯೆಗೆ ಬೊಮ್ಮಾಯಿ ಸ್ಪಂದನೆ : ಹಲವರ ಅತೃಪ್ತಿ ಶಮನ

  • ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ
  • ಆದ್ಯತೆ ಮೇರೆಗೆ ರಸ್ತೆ ಇತ್ಯಾದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಕ್ಷದ ಶಾಸಕರಿಗೆ ಭರವಸೆ
CM Basavaraja bommai Meets mLAs snr
Author
Bengaluru, First Published Oct 1, 2021, 7:24 AM IST
  • Facebook
  • Twitter
  • Whatsapp

ಬೆಂಗಳೂರು (ಅ.01): ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಿ, ಆದ್ಯತೆ ಮೇರೆಗೆ ರಸ್ತೆ ಇತ್ಯಾದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai )ಪಕ್ಷದ ಶಾಸಕರಿಗೆ ಭರವಸೆ ನೀಡಿದ್ದಾರೆ.

ತಮ್ಮ ಸಮಸ್ಯೆ, ಅಹವಾಲು ಆಲಿಸಲು ಮುಖ್ಯಮಂತ್ರಿಗಳು ಲಭ್ಯವಾಗುವುದಿಲ್ಲ ಎಂಬ ಶಾಸಕರ ಅಸಮಾಧಾನ ನಿವಾರಿಸುವ ನಿಟ್ಟಿನಲ್ಲಿ ತಮ್ಮ ಯೋಜನೆಯನ್ನು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯರೂಪಕ್ಕೆ ತಂದರು. ಗುರುವಾರ ರೇಸ್‌ ಕೋರ್ಸ್‌ ರಸ್ತೆಯ (Race Corse Road) ತಮ್ಮ ನಿವಾಸದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ಪ್ರತ್ಯೇಕವಾಗಿ ಭೇಟಿಯಾದ ಪಕ್ಷದ 25ಕ್ಕೂ ಹೆಚ್ಚು ಶಾಸಕರ ಬೇಡಿಕೆ, ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಆಲಿಸಿದರು.

ಸಿಎಂ ಬೊಮ್ಮಾಯಿಯಿಂದ ಗುಜರಾತ್ ಮಾದರಿ : ಹೇಗಿದೆ ಹೊಸ ಸೂತ್ರ..?

ಯಾವ ಶಾಸಕರನ್ನೂ (MLA) ನಿರ್ಲಕ್ಷ್ಯ ಮಾಡುವುದಿಲ್ಲ. ಕೋವಿಡ್‌ನಿಂದಾಗಿ ಅನುದಾನ ಸ್ಪಲ್ಪ ವಿಳಂಬವಾಗಿರಬಹುದು. ಆದರೆ, ಅದು ನಿರ್ಲಕ್ಷ್ಯ ಎಂಬ ಮನೋಭಾವ ಬೇಡ. ಎಲ್ಲ ಶಾಸಕರನ್ನು ಸಮಾನವಾಗಿ ನೋಡಲಾಗುವುದು. ನಿಗದಿತ ಕಾಲಾವಧಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಶಾಸಕರಿಗೆ ಅವರು ಭರವಸೆ ನೀಡಿದರು.

ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಶಾಸಕರು ಅನುದಾನ, ಕಾಮಗಾರಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಕ್ಷೇತ್ರದ ಹಲವು ಸಮಸ್ಯೆಗಳ ಕುರಿತು ಗಮನಕ್ಕೆ ತಂದು, ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಶಾಸಕರಾದ ಅಮೃತ್‌ ದೇಸಾಯಿ, ಜಯರಾಂ, ಬೆಳ್ಳಿ ಪ್ರಕಾಶ್‌, ಕೃಷ್ಣಪ್ಪ, ಎಸ್‌.ರಘು, ರವಿ ಸುಬ್ರಹ್ಮಣ್ಯ, ಪೂರ್ಣಿಮಾ ಶ್ರೀನಿವಾಸ್‌, ಪ್ರೀತಂಗೌಡ, ಸತೀಶ್‌ ರೆಡ್ಡಿ, ಉದಯ ಗರುಡಾಚಾರ್‌ ಸೇರಿದಂತೆ 25ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಿದರು.

ಬಹುತೇಕ ಶಾಸಕರು ತಮ್ಮ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದರು. ನೀರು ಪೂರೈಕೆ ಮಾಡುವ ಸಂಬಂಧ ಕೆರೆಗಳಿಗೆ ನೀರುವ ತುಂಬಿಸುವ ಯೋಜನೆಗಳಿಗೆ ಆದ್ಯತೆ ನೀಡಿ ಅನುದಾನ ನೀಡಬೇಕು. ಇಲ್ಲದಿದ್ದರೆ ಕ್ಷೇತ್ರದ ಜನರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಬೇಸರವನ್ನು ವ್ಯಕ್ತಪಡಿಸಿದರೆಂದು ಹೇಳಲಾಗಿದೆ. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಯೋಜನೆಗೆ ತಗಲುವ ವೆಚ್ಚ ಸೇರಿದಂತೆ ಇತ್ಯಾದಿಗಳ ಬಗ್ಗೆ ವರದಿ ಸಿದ್ಧಪಡಿಸಿ ನೀಡಿದರೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಹಣಕಾಸಿನ ಇತಿಮಿತಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ವೇಗ ನೀಡಲಾಗುವುದು ಎಂದು ಹೇಳಿದರು.

ಜಾನುವಾರುಗಳಿಗೆ ಮೇವಿನ ಕೊರತೆ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಿ, ಖಾಸಗಿಯವರಿಂದ ಮೇವನ್ನು ಖರೀದಿಸಲಾಗುತ್ತಿದೆ. ಆದರೂ ಜಾನುವಾರುಗಳಿಗೆ ಸಮಸ್ಯೆಯಾಗದಂತೆ ಮೇವಿನ ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಬಸವರಾಜ ಬೊಮ್ಮಾಯಿ ಅವರು, ಸ್ಥಳೀಯವಾಗಿ ಬೋರ್‌ವೆಲ್‌ ಇರುವ ಖಾಸಗಿ ವ್ಯಕ್ತಿಗಳಿಗೆ ಹಣ ನೀಡಿ ಮೇವು ಬೆಳೆಯಲು ಕ್ರಮ ಕೈಗೊಳ್ಳಬೇಕು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೇವಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಸರ್ಕಾರದಿಂದ ಯಾವ ಕ್ರಮ ಕೈಗೊಳ್ಳಬೇಕೋ, ಅದನ್ನು ಮಾಡಲಾಗುವುದು ಎಂಬ ಭರವಸೆ ನೀಡಿದರು ಎಂದು ತಿಳಿದುಬಂದಿದೆ.

ಕೋವಿಡ್‌ (Covid) ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು. ಆದರೆ, ಈಗ ಆರ್ಥಿಕ ಚಟುವಟಿಕೆಗಳು ಚೇತರಿಕೆಯಾಗುತ್ತಿವೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ತಕ್ಷಣ ಅನುದಾನ ನೀಡಲು ಕಷ್ಟಕರವಾಗಬಹುದು. ಆದರೆ, ರಾಜ್ಯ ಆರ್ಥಿಕ ಪರಿಸ್ಥಿತಿಗನುಗುಣವಾಗಿ ಅನುದಾನ ಕೊಡಿಸಲಾಗುವುದು. ಆದ್ಯತೆ ಮೇರೆಗೆ ರಸ್ತೆ ಕಾಮಗಾರಿ ಸೇರಿದಂತೆ ಇತರೆ ಕಾರ್ಯಗಳನ್ನು ಪ್ರಾರಂಭಿಸಲಾಗುವುದು. ಶಾಸಕರು ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರೆಂದು ಹೇಳಲಾಗಿದೆ.

ಮೋದಿ ಶೈಲಿಯಲ್ಲಿ ಶಾಸಕರ ಜತೆ ಭೇಟಿ

ಹಾಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹಿಂದೆ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಪಕ್ಷದ ಶಾಸಕರು, ನಾಯಕರನ್ನು ಭೇಟಿಯಾಗಲು ವಾರದಲ್ಲಿ ಒಂದು ದಿನ ನಿರ್ದಿಷ್ಟಸಮಯವನ್ನು ಮೀಸಲಿಡುತ್ತಿದ್ದರು. ಶಾಸಕರ ಅಹವಾಲುಗಳಿಗೆ ಕಿವಿಯಾಗುತ್ತಿದ್ದರು. ಇದೀಗ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಅದೇ ರೀತಿಯ ಶೈಲಿಯನ್ನು ಅಳವಡಿಸಿಕೊಂಡು ಪಕ್ಷದ ಶಾಸಕರ ಸಮಸ್ಯೆಗಳನ್ನು ಆಲಿಸುವ ಪರಿಪಾಠ ಆರಂಭಿಸಿದ್ದಾರೆ.

Follow Us:
Download App:
  • android
  • ios