ಇಂದು ಚಾಮರಾಜನಗರದಲ್ಲಿ ಬೊಮ್ಮಾಯಿ ಪ್ರವಾಸ, ಕಾಂಗ್ರೆಸ್ ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಕೇಸರಿ ಪಡೆ
ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಅಲರ್ಟ್ ಆಗಿದೆ. ಗುಜರಾತ್ ಚುನಾವಣೆ ಫಲಿತಾಂಶದ ನಂತರ ಹುರುಪಿನಲ್ಲಿರುವ ಕೇಸರಿ ಪಡೆ, ಸರ್ಕಾರಿ ಕಾರ್ಯಕ್ರಮದ ಹೆಸರಿನಲ್ಲಿ ಬಿಜೆಪಿ ಸಂಘಟನೆ ಪ್ಲಾನ್ ಮಾಡಿಕೊಂಡಿದೆ. ಈ ಮೂಲಕ ಇಡೀ ಚಾಮರಾಜನಗರ ಜಿಲ್ಲೆಯನ್ನ ಕೇಸರಿಮಯ ಮಾಡಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ.
ಚಾಮರಾಜನಗರ (ಡಿ.13): ಬಸವಣ್ಣನ ಕಾಯಕ ತತ್ವದಲ್ಲಿ ನಂಬಿಕೆ ಇಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ‘ಸಿಎಂ ಆದವರು ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ’ ಎನ್ನುವ ಮೌಢ್ಯ ಬದಿಗೊತ್ತಿ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡುತ್ತಿದ್ದಾರೆ. ಮುಖ್ಯಮಂತ್ರಿಯಾದ ಮೂರನೇ ತಿಂಗಳಲ್ಲಿ 2021ರ ಅ.7ರಂದು ಬೊಮ್ಮಾಯಿಯವರು ಚಾಮರಾಜನಗರಕ್ಕೆ ಆಗಮಿಸಿ, ನೂತನ ವೈದ್ಯಕೀಯ ಕಾಲೇಜು ಆಸ್ಪತ್ರೆ ಉದ್ಘಾಟಿಸಿದ್ದರು. ಈಗ ಮಂಗಳವಾರ ಎರಡನೇ ಬಾರಿಗೆ ಭೇಟಿ ನೀಡುತ್ತಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಬೆಳಗ್ಗೆ 11ಕ್ಕೆ ಚಾಮರಾಜನಗರಕ್ಕೆ ಆಗಮಿಸಲಿರುವ ಸಿಎಂ, ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮಕ್ಕಾಗಿ 25 ಸಾವಿರ ಜನರು ಕೂರಬಹುದಾದ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ನಗರದ ತುಂಬೆಲ್ಲಾ ಅವರಿಗೆ ಸ್ವಾಗತ ಕೋರುವ ಪ್ಲೆಕ್ಸ್‌ಗಳನ್ನು ಹಾಕಲಾಗಿದ್ದು, ಇಡೀ ನಗರ ಕೇಸರಿಮಯವಾಗಿದೆ. ಬಳಿಕ, ಹನೂರಿನ ಮಹದೇಶ್ವರ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ನೀಡಲಿದ್ದು, ನಂತರ ಸಿಎಂ, ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಇದರ ಜೊತೆಗೆ ಸಿಎಂ ಬೊಮ್ಮಾಯಿ ಅವರು ಕಾಂಗ್ರೆಸ್ ಕ್ಷೇತ್ರಗಳಲ್ಲಿ ಸುತ್ತಾಡಲಿದ್ದಾರೆ. ಚಾಮರಾಜನಗರ ಹಾಗೂ ಹನೂರು ಕ್ಷೇತ್ರಗಳಿಗೆ ಭೇಟಿ ನೀಡಲಿದ್ದು, ಸಾವಿರ ಕೋಟಿ ರೂ. ವೆಚ್ಚದ ಯೋಜನೆಗೆ ಚಾಲನೆ ನೀಡಲಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿರುವ ಹನೂರು ಕ್ಷೇತ್ರಕ್ಕೆ 650 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆಗೆ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಅಲರ್ಟ್ ಆಗಿದೆ. ಗುಜರಾತ್ ಚುನಾವಣೆ ಫಲಿತಾಂಶದ ನಂತರ ಹುರುಪಿನಲ್ಲಿರುವ ಕೇಸರಿ ಪಡೆ, ಸರ್ಕಾರಿ ಕಾರ್ಯಕ್ರಮದ ಹೆಸರಿನಲ್ಲಿ ಬಿಜೆಪಿ ಸಂಘಟನೆ ಪ್ಲಾನ್ ಮಾಡಿಕೊಂಡಿದೆ. ಈ ಮೂಲಕ ಇಡೀ ಜಿಲ್ಲೆಯನ್ನ ಕೇಸರಿಮಯ ಮಾಡಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಎರಡರಲ್ಲಿ ಅಸ್ತಿತ್ವ ಕಂಡಿರುವ ಬಿಜೆಪಿ ಮತ್ತೆರಡು ಕ್ಷೇತ್ರ ವಶ ಮಾಡಿಕೊಳ್ಳಲು ತಂತ್ರ ಹೆಣಿದಿದೆ.
ಸಿಎಂ ಕಾರ್ಯಕ್ರಮಕ್ಕೆ ಮಾಂಡೌಸ್ ಎಫೆಕ್ಟ್: ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಮಾಂಡೌಸ್ ಎಫೆಕ್ಟ್ ಆಗಿದ್ದು, ನಗರದ ಅಂಬೇಡ್ಕರ್ ಕ್ರೀಡಾಂಗಣ ಕೆಸರು ಮಯವಾಗಿದೆ. ಇದೀಗ ಜಿಲ್ಲಾಡಳಿತ ಹೊಸದಾಗಿ ಮಣ್ಣನ್ನು ಸುರಿದು ಸ್ಥಳವನ್ನ ಸಿದ್ದಪಡಿಸುತ್ತಿದೆ. ನಿನ್ನೆವರೆಗೂ ಚಾಮರಾಜನಗರದಲ್ಲಿ ತುಂತುರು ಮಳೆ ಬಿದ್ದಿತ್ತು. ಈ ಕಾರಣದಿಂದ ಜಿಲ್ಲಾ ಕ್ರೀಡಾಂಗಣ ಕೆಸರುಮಯವಾಗಿತ್ತು. ಹೀಗಾಗಿ ಅಧಿಕಾರಿಗಳು ಇಂದು ಹೊಸದಾಗಿ ಮಣ್ಣು ಸುರಿದು ಸರಿಪಡಿಸಿದ್ದಾರೆ.
Chamarajanagar: ಗಡಿಯಲ್ಲಿ ಕಮಲ ಅರಳಿಸಲು ಸಚಿವ ಸೋಮಣ್ಣ ಮಾಸ್ಟರ್ ಪ್ಲಾನ್
ಮುಖ್ಯಮಂತ್ರಿಯಾದವರು ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಮೂಢನಂಬಿಕೆ ಹಿನ್ನೆಲೆಯಲ್ಲಿ ವೀರೇಂದ್ರ ಪಾಟೀಲರ ಬಳಿಕ 16 ವರ್ಷಗಳ ಕಾಲ ಯಾವ ಮುಖ್ಯಮಂತ್ರಿಯೂ ಚಾಮರಾಜನಗರಕ್ಕೆ ಭೇಟಿ ನೀಡಿರಲಿಲ್ಲ. ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ಬಿ.ಎಸ್.ಯಡಿಯೂರಪ್ಪ, ಸದಾನಂದ ಗೌಡ ಅವರು ಮುಖ್ಯಮಂತ್ರಿಗಳಾಗಿದ್ದಾಗ ಚಾಮರಾಜನಗರಕ್ಕೆ ಭೇಟಿ ನೀಡಿರಲಿಲ್ಲ. 2007ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮೊದಲ ಬಾರಿ ಸಿಎಂ ಆದಾಗ ಭೇಟಿ ನೀಡಿ ಮೌಢ್ಯತೊಡೆದು ಹಾಕಿದ್ದರು. ನಂತರ, ಜಗದೀಶ್ ಶೆಟ್ಟರ್ ಭೇಟಿ ನೀಡಿದ್ದರು. ಬಳಿಕ, ಸಿದ್ದರಾಮಯ್ಯನವರು 11 ಬಾರಿ ಭೇಟಿ ನೀಡಿ ಮೂಡನಂಬಿಕೆ ಹೊಸಕಿ ಹಾಕಿದ್ದರು.
ಮೌಢ್ಯಕ್ಕೆ ಸಡ್ಡು: ಸಿಎಂ ಇಂದು ಮತ್ತೆ ಚಾಮರಾಜನಗರಕ್ಕೆ ಭೇಟಿ
ಈ ಹಿಂದೆ, ಚಾಮರಾಜನಗರ ತಾಲೂಕು ಕೇಂದ್ರವಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಆರ್.ಬೊಮ್ಮಾಯಿ ಅವರು ಭೇಟಿ ನೀಡಿ, ಚಾಮರಾಜನಗರ ತಾಲೂಕು ಕಚೇರಿ ಉದ್ಘಾಟನೆ ಮಾಡಿದ್ದರು. ಇದೀಗ ಅವರ ಪುತ್ರ ಜಿಲ್ಲಾ ಕೇಂದ್ರಕ್ಕೆ ಎರಡನೇ ಬಾರಿಗೆ ಆಗಮಿಸುತ್ತಿದ್ದಾರೆ.