ಮೀಸಲಾತಿ ಜೇನುಗೂಡಿಗೆ ಕೈಹಾಕಿ ಸಿಹಿ ಹಂಚಿದ್ದೇನೆ: ಸಿಎಂ ಬೊಮ್ಮಾಯಿ
ಮೀಸಲು ಜೇನುಗೂಡಿಗೆ ಕೈ ಹಾಕಿ ಜೇನ್ನೊಣಗಳಿಂದ ಕಚ್ಚಿಸಿಕೊಂಡರೂ ನಾನು ಸಿಹಿ ಹಂಚುವ ಕೆಲಸ ಮಾಡಿದ್ದೇನೆ. ಆದರೆ, ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ (ಮಾ.27): ಮೀಸಲು ಜೇನುಗೂಡಿಗೆ ಕೈ ಹಾಕಿ ಜೇನ್ನೊಣಗಳಿಂದ ಕಚ್ಚಿಸಿಕೊಂಡರೂ ನಾನು ಸಿಹಿ ಹಂಚುವ ಕೆಲಸ ಮಾಡಿದ್ದೇನೆ. ಆದರೆ, ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಲ್ಲಿನ ಆದರ್ಶ ನಗರದಲ್ಲಿನ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೀಸಲಾತಿ ಜೇನುಗೂಡಿದ್ದಂತೆ. ಅದಕ್ಕೆ ಕೈಹಾಕಿದರೆ ಕಚ್ಚಿಸಿಕೊಳ್ಳುವುದು ಖಚಿತ ಎಂದು ಕಾಂಗ್ರೆಸ್‌ನವರು ಹೇಳುತ್ತಾ ಬಂದಿದ್ದರು. ಗೂಡಿಗೆ ಕೈ ಹಾಕದೆ ಜೇನಿನ ಸಿಹಿ ಸಿಗುವುದಿಲ್ಲ ಎಂಬುದನ್ನು ಅರಿತುಕೊಂಡು ನಮ್ಮ ಸರ್ಕಾರ ಇಂತಹ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದರು.
ಒಳಮೀಸಲಾತಿ ಬೇಡಿಕೆ ಸುಮಾರು 30 ವರ್ಷಗಳಿಂದಲೂ ಕೇಳಿ ಬಂದಿತ್ತು. ಆದರೆ, ಕಾಂಗ್ರೆಸ್‌ನವರು ಶೋಷಿತ ಸಮುದಾಯಕ್ಕೆ ಭರವಸೆ ನೀಡುತ್ತಾ ಮೂಗಿಗೆ ತುಪ್ಪ ಸವರುತ್ತಾ ಬಂದಿದ್ದರು. ಹಾಗಾಗಿ ಅದರ ಬಗ್ಗೆ ಅಧ್ಯಯನ ಮಾಡಿ, ಸಚಿವ ಸಂಪುಟ ಉಪ ಸಮಿತಿ ರಚಿಸಿ, ಕಾನೂನು ಪ್ರಕಾರ ಜಾರಿ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು. ಅಲ್ಪಸಂಖ್ಯಾತರ ಶೇ.4ರಷ್ಟುಮೀಸಲಾತಿ ರದ್ದುಪಡಿಸಿ, ಇಡಬ್ಲ್ಯೂಎಸ್‌ಗೆ ಸೇರ್ಪಡೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈ ಮೊದಲು ಅವರಿಗೆ ಶೇ.4 ಪರ್ಸೆಂಟ್ ಮೀಸಲಾತಿ ಇತ್ತು. ಈಗ ಶೇ. 10ರಷ್ಟುಮೀಸಲಾತಿ ನೀಡಲಾಗಿದೆ.
ಕಾಂಗ್ರೆಸ್ ಏಕೆ ಮೀಸಲು ಹೆಚ್ಚಿಸಲಿಲ್ಲ: ಅರುಣ್ ಸಿಂಗ್ ಪ್ರಶ್ನೆ
ಹಿಂದಿನ ಮೀಸಲಾತಿಯಲ್ಲಿದ್ದ ಆರ್ಥಿಕ ಮಾನದಂಡ ಹಾಗೂ ಷರತ್ತುಗಳು ಈಗಲೂ ಅನ್ವಯವಾಗುತ್ತವೆ. ಅಲ್ಪಸಂಖ್ಯಾತರ ಹಿತರಕ್ಷಣೆ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಿರುವಾಗ ಅವರಿಗೆ ಹೇಗೆ ಅನ್ಯಾಯವಾಗುತ್ತದೆ ಎಂದು ಪ್ರಶ್ನಿಸಿದರು. ಮಹದಾಯಿ ಯೋಜನೆ ಕುರಿತು ಪ್ರತಿಕ್ರಿಯಿಸಿ, ಕಳಸಾ-ಬಂಡೂರಿ ಕಾಮಗಾರಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಅರಣ್ಯ ಇಲಾಖೆಯಿಂದ ಶೀಘ್ರ ಅನುಮತಿ ಸಿಗುವ ವಿಶ್ವಾಸವಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದರೂ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಚುನಾವಣೆ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.
ಬಿಜೆಪಿ ಪಟ್ಟಿಬಿಡುಗಡೆ ಕುರಿತು ಪ್ರತಿಕ್ರಿಯಿಸಿ, ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಸರಿಯಾದ ಸಮಯದಲ್ಲಿ ನಮ್ಮ ಪಟ್ಟಿಬಿಡುಗಡೆಯಾಗಲಿದೆ ಎಂದರು. ಸುರ್ಜೇವಾಲ ಹೇಳಿಕೆಗೆ ಪ್ರತಿಕ್ರಿಯಿಸಿ, ಸುರ್ಜೇವಾಲರಿಂದ ನನಗೆ ಸರ್ಟಿಫಿಕೇಟ್ ಬೇಕಿಲ್ಲ. ರಾಜ್ಯದ ಜನತೆ ನನ್ನನ್ನು ಕಾಮನ್‌ಮ್ಯಾನ್ ಸಿಎಂ ಎಂದು ಹೇಳಿದ್ದಾರೆ. ಯಾರು ಶಕುನಿ, ಯಾರು ದುರ್ಯೋದನ ಎಂಬುದು ಜನರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಮೀಸಲಾತಿ ನೆಪದಲ್ಲಿ ಜೇನುಗೂಡಿಗೆ ಕಲ್ಲು: ಮೀಸಲಾತಿ ನೆಪದಲ್ಲಿ ಜೇನುಗೂಡಿಗೆ ಕಲ್ಲೆಸೆಯಲಾಗುತ್ತಿದ್ದು, ಸರ್ಕಾರ ಸ್ಪಷ್ಟನಿರ್ಣಯ ಕೈಗೊಳ್ಳದೆ ಗೊಂದಲ ಸೃಷ್ಟಿಸುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡದ ಮೀಸಲಾತಿ ಹೆಚ್ಚಿಸಲಾಗಿದೆ ಎಂದು ಸರ್ಕಾರ ಹೇಳುತ್ತದೆ. ಆದರೆ ಇಂದಿಗೂ ಕೇಂದ್ರ ಸರ್ಕಾರ ಇದನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸಿಲ್ಲ. ಹೀಗಿರುವಾಗ ಪಂಚಮಸಾಲಿ ಮತ್ತು ಒಕ್ಕಲಿಗರ ಮೀಸಲಾತಿ ಬೇಡಿಕೆ ವಿಚಾರದಲ್ಲಿಯೂ ಸಹ ಯಾವುದೇ ರೀತಿಯ ಸ್ಪಷ್ಟನೆ ಇಲ್ಲ ಎಂದು ದೂರಿದ್ದಾರೆ.
ಕಾಂಗ್ರೆಸ್ ರಾಹುಲ್ ಗಾಂಧಿ ನಾಯಕತ್ವದಲ್ಲೇ ಕೊನೆಗಾಣಲಿದೆ: ಕೇಂದ್ರ ಗೃಹ ಸಚಿವ ಅಮಿತ್ ಶಾ
ಬಿಜೆಪಿ ಸರ್ಕಾರ ಮೊದಲಿನಿಂದಲೂ ಒಂದಿಲ್ಲೊಂದು ಸಂಗತಿ, ವಿಚಾರಗಳ ಮೂಲಕ ಅಲ್ಪಸಂಖ್ಯಾತರಿಗೆ ಅಗೌರವ ತೋರಿ ನೋವುಂಟು ಮಾಡುತ್ತಿದೆ. ಇದೀಗ ಮೀಸಲಾತಿ ರದ್ದುಪಡಿಸುವ ಮೂಲಕ ಸಮುದಾಯ ಬೇರ್ಪಡಿಸಿ, ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸಲಾಗುತ್ತಿದೆ. ಸಮುದಾಯಗಳ ಭಾವನೆಗಳಿಗೆ ಧಕ್ಕೆ ತರುವ ಸರ್ಕಾರದ ಈ ನಡೆ ಖಂಡನೀಯ ಎಂದಿದ್ದಾರೆ. ಅಲ್ಪಸಂಖ್ಯಾತರ ಮೀಸಲಾತಿ ಮುಂದುವರಿಸಬೇಕು. ಪಂಚಮಸಾಲಿ ಸೇರಿದಂತೆ ಇತರ ಎಲ್ಲ ಸಮುದಾಯದ ಬಂಧುಗಳ ಭಾವನೆಗಳಿಗೂ ಸ್ಪಂದಿಸಿ, ಸೂಕ್ತ ನಿರ್ಣಯ ಕೈಗೊಳ್ಳಬೇಕು. ಎಸ್ಸಿ-ಎಸ್ಟಿಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ ಅಧಿಕೃತ ಮುದ್ರೆಯೊತ್ತಬೇಕು. ಈ ಮೂಲಕ ಸರ್ಕಾರ ಬದ್ಧತೆ ಪ್ರದರ್ಶಿಸಬೇಕು ಎಂದು ಮಾನೆ ಆಗ್ರಹಿಸಿದ್ದಾರೆ.